ರಾಷ್ಟ್ರೀಯ

ಬಿಹಾರ್ ಚುನಾವಣೆ ಸೋಲಿಗೆ ಪ್ರಧಾನಿ ಮೋದಿಯೇ ನೇರ ಹೊಣೆ: ಕಾಂಗ್ರೆಸ್

Pinterest LinkedIn Tumblr

congggನವದೆಹಲಿ: ಬಿಹಾರ್ ವಿಧಾನಸಭೆ ಚುನಾವಣೆ ಸೋಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯೇ ನೇರ ಹೊಣೆ. ರಾಜ್ಯ ಚುನಾವಣೆಯನ್ನು ರಾಷ್ಟ್ರಮಟ್ಟದ ಚುನಾವಣೆಯಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ.

ಬಿಹಾರ್ ರಾಜ್ಯದ ಚುನಾವಣೆ ಫಲಿತಾಂಶದ ಪ್ರಭಾವ ರಾಷ್ಟ್ರರಾಜಕಾರಣದ ಮೇಲೆ ತೀವ್ರ ತೆರನಾದ ಪರಿಣಾಮ ಬೀರಲಿದೆ. ಬಿಜೆಪಿ ಬಿಹಾರ್ ಚುನಾವಣೆಯಲ್ಲಿ ಭೂಕಂಪವನ್ನು ಸೃಷ್ಟಿಸುವಂತಹ ಪ್ರಯತ್ನ ಮಾಡಿತು ಎಂದು ಬಿಹಾರ್ ಚುನಾವಣೆ ಹೊಣೆ ಹೊತ್ತ ಕಾಂಗ್ರೆಸ್ ಮುಖಂಡ ಸಿ.ಪಿ.ಜೋಷಿ ಲೇವಡಿ ಮಾಡಿದ್ದಾರೆ.

ಪ್ರಧಾನಿ ಮೋದಿ ಹಲವಾರು ಬಾರಿ ಬಿಹಾರ್ ಚುನಾವಣೆ ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದಲ್ಲದೇ ಅವರ ಸಚಿವ ಸಂಪುಟದ ಸದಸ್ಯರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸುಮಾರು ಎಂಟು ತಿಂಗಳುಗಳಿಂದ ಪಾಟ್ನಾವನ್ನು ನೆಲೆಯಾಗಿಸಿಕೊಂಡು ವಿಶ್ವದ ಗಮನ ಸೆಳೆಯುವಂತೆ ಮಾಡಿದ್ದರು. ಆದರೆ, ಅವರಿಗೆ ಫಲಿತಾಂಶ ಬಂದಾಗ ನಿರಾಸೆ ಕಾದಿತ್ತು ಎಂದರು.

ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ತಾವು ದೇಶದ ಪ್ರಧಾನಿ ಎನ್ನುವುದನ್ನು ಮರೆತು ರಾಜ್ಯದ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯಂತೆ ವರ್ತಿಸಿ, ಪ್ರಧಾನಿ ಸ್ಥಾನಕ್ಕೆ ಅಗೌರವ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾವಿರಾರು ಆರೆಸ್ಸೆಸ್ ಕಾರ್ಯಕರ್ತರನ್ನು ಚುನಾವಣೆಗಾಗಿ ನೇಮಿಸಲಾಗಿತ್ತು, ಮೋದಿ ಸಚಿವ ಸಂಪುಟವೇ ನಿತೀಶ್ ಮತ್ತು ಲಾಲು ವಿರುದ್ಧ ಸಮರಕ್ಕೆ ಇಳಿದಿತ್ತು. ಆದರೆ, ಮತದಾರರು ನಿತೀಶ್- ಲಾಲು ಕಾಂಗ್ರೆಸ್ ಮೈತ್ರಿಕೂಟದ ಪರ ವಾಲಿದರು ಎಂದು ಕಾಂಗ್ರೆಸ್ ವಕ್ತಾರ ಜೋಷಿ ಹೇಳಿದ್ದಾರೆ.

Write A Comment