ಅಂತರಾಷ್ಟ್ರೀಯ

ಮಗುವಿನ ಪ್ರಾಣಕ್ಕೆ ಎರವಾದ ಅಮ್ಮನ ನೈಟ್ ಕ್ಲಬ್ ಸಹವಾಸ..!

Pinterest LinkedIn Tumblr

Party-nightclubವಾಷಿಂಗ್ ಟನ್: ತಾಯಿಯೊಬ್ಬಳ ನೈಟ್ ಕ್ಲಬ್ ಸಹವಾಸ ಪುಟ್ಟ ಹೆಣ್ಣುಮಗುವೊಂದರ ಪ್ರಾಣಕ್ಕೆ ಎರವಾದ ಘಟನೆ ಅಮೆರಿಕದ ಅಲಬಮಾದಲ್ಲಿ ನಡೆದಿದೆ.

ತಾಯಿ ಮತ್ತು ಆಕೆಯ ಸ್ನೇಹಿತೆ ನೈಟ್ ಕ್ಲಬ್ ಗೆ ಹೋಗಿದ್ದ ಸಂದರ್ಭದಲ್ಲಿ ಪುಟ್ಟ ಮಗು ಅಳಲು ಆರಂಭಿಸಿದ್ದು, ಮಗುವಿನ ಅಳು ನಿಲ್ಲಿಸಲು ಹೋದ 8 ವರ್ಷದ ಬಾಲಕ ಮಗುವನ್ನು ಹೊಡೆದು  ಕೊಂದಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಅಲಬಮಾ ಪೊಲೀಸರು 8 ವರ್ಷದ ಪುಟ್ಟ ಪೋರನನ್ನು ಬಂಧಿಸಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಮಗುವಿನ  ತಾಯಿ ಮತ್ತು ಆಕೆಯ ಸ್ನೇಹಿತೆಯ ಮೇಲೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಘಟನೆಯ ವಿವರ

26 ವರ್ಷದ ಕಟ್ಟೇರಾ ಲೂಯಿಸ್ ಎಂಬ ಮಹಿಳೆಗೆ 1 ವರ್ಷದ ಪುಟ್ಟ ಹೆಣ್ಣು ಮಗುವಿದ್ದು, ಕಳೆದ ಶನಿವಾರ ರಾತ್ರಿ ಮಗುವಿನೊಂದಿಗೆ ಅಲಬಮಾದಲ್ಲಿರುವ ತನ್ನ ಸ್ನೇಹಿತೆ ಮನೆಗೆ ಆಗಮಿಸಿದ್ದಾಳೆ.  ಈ ವೇಳೆ ಮಗುವನ್ನು ತನ್ನ ಸ್ನೇಹಿತೆಯ ಮಕ್ಕಳಿಗೆ ನೀಡಿ ಆಟವಾಡಲು ಹೇಳಿದ್ದಾಳೆ. ಬಳಿಕ ತನ್ನ ಸ್ನೇಹಿತೆಯ ಜೊತೆಗೂಡಿ ಕಟ್ಟೇರಾ ಲೂಯಿಸ್ ನೈಟ್ ಕ್ಲಬ್ ಗೆ ತೆರಳಿದ್ದಾಳೆ. ಇತ್ತ ಪುಟ್ಟ  ಮಗುವನ್ನು ಪಡೆದ 8 ವರ್ಷದ ಬಾಲಕ, ಮಗುವನ್ನು ಆಟವಾಡಿಸುತ್ತಿದ್ದ ವೇಳೆ ಮಗು ಅಳ ತೊಡಗಿದೆ. ಬಾಲಕ ಎಷ್ಟೇ ಸಮಾಧಾನ ಪಡಿಸಿದರೂ ಮಗು ಅಳು ನಿಲ್ಲಿಸದೇ ಇದ್ದಿದ್ದರಿಂದ ಕೋಪಗೊಂಡ ಬಾಲಕ ಮಗುವಿಗೆ ಬಲವಾಗಿ ಹೊಡೆದಿದ್ದಾನೆ.  ಬಾಲಕನ ಹೊಡೆತಕ್ಕೆ ಸಿಲುಕಿದ ಮಗು ಧಾರುಣವಾಗಿ ಸಾವನ್ನಪ್ಪಿದೆ.

ಬೆಳಗ್ಗೆ ಮನೆಗೆ ಬಂದ ಕಟ್ಟೇರಾ ಲೂಯಿಸ್ ಗೆ ಮಗುವಿನ ಸ್ಥಿತಿ ಕಂಡು ಗಾಬರಿಯಾಗಿ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು ಸಾವನ್ನಪ್ಪಿರುವುದಾಗಿ  ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಅಲಬಮಾ ಪೊಲೀಸರು 8 ವರ್ಷದ ಬಾಲಕನ್ನು ವಶಕ್ಕೆ ಪಡೆದಿದ್ದು, ಮಗುವಿನ ತಾಯಿ ಮತ್ತು ಆಕೆಯ ಸ್ನೇಹಿತೆಯ ವಿರುದ್ಧವೂ  ಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ.

ಒಟ್ಟಾರೆ ತಾಯಿಯ ನೈಟ್ ಕ್ಲಬ್ ನ ಸಹವಾಸ ಎರಡು ಹಸುಗೂಸುಗಳ ಜೀವನಕ್ಕೆ ಎರವಾಗಿದ್ದು, ಹೊಡೆತ ತಿಂದ ಹೆಣ್ಣು ಮಗು ಸಾವನ್ನಪ್ಪಿದ್ದರೆ, ಮಗುವಿಗೆ ಹೊಡೆದ ಬಾಲಕ ಇದೀಗ ಜೈಲು ಕಂಬಿ ಎಣಿಸುವಂತಾಗಿದೆ.

Write A Comment