ರಾಷ್ಟ್ರೀಯ

ಒಡಿಶಾದಲ್ಲಿ ಮತ್ತೆ ಮಾವೋವಾದಿಗಳ ಸದ್ದು, ಸಿಆರ್ ಪಿಎಫ್ ಪ್ರತಿದಾಳಿಗೆ 2 ಬಲಿ

Pinterest LinkedIn Tumblr

Moist-Odisha-Guns

ಭುವನೇಶ್ವರ್: ಸತತ 3 ವರ್ಷಗಳ ಬಳಿಕ ಒಡಿಶಾದಲ್ಲಿ ಮತ್ತೆ ಮಾವೋವಾದಿಗಳು ಹಿಂಸಾಚಾರಕ್ಕೆ ಇಳಿದಿದ್ದು, ಗುರುವಾರ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಕೇವಲ 24 ಗಂಟೆಗಳ ಅವಧಿಯಲ್ಲಿ ಎರಡೆರಡು ಬಾರಿ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ  ಎಂದು ತಿಳಿದುಬಂದಿದೆ. ಒಡಿಶಾದ ಸುಂದರ್ ಘಡ್ ಜಿಲ್ಲೆಯ ರೌರ್ಕೆಲಾದ ಚಾಂದಿಪೋಶ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಅರಣ್ಯ ಪ್ರದೇಶದಲ್ಲಿ ಈ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು  ಮಾವೋವಾದಿಗಳನ್ನು ಸದೆಬಡಿಯುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿದ್ದಾರೆ.

ಇನ್ನು ಘಟನೆಯಲ್ಲಿ 4 ಮಂದಿ ನಕ್ಸಲರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಹೀಗಾಗಿ ಗಾಯಗೊಂಡ ನಕ್ಸಲರು ಸ್ಥಳೀಯ ಗ್ರಾಮಗಳಲ್ಲಿ ಅಥವಾ ಆಸ್ಪತ್ರೆಯಲ್ಲಿ ಆಶ್ರಯ  ಪಡೆದಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಅಲ್ಲದೆ ನಕ್ಸಲರು ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿದ್ದ ಶಿಬಿರವನ್ನು ವಶಕ್ಕೆ ಪಡೆದಿದ್ದು, ಭಾರಿ ಪ್ರಮಾಣದ  ಮದ್ದು-ಗುಂಡು ಮತ್ತು ಗನ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಒಡಿಶಾದ ಪಶ್ಚಿಮ ವಲಯದ ಐಜಿಪಿ ಆರ್ ಕೆ ಶರ್ಮಾ ಅವರು, ಶಂಕಿತ  ನಕ್ಸಲರು ಅರಣ್ಯದೊಳಗೆ ಅಡಗಿರುವ ಕುರಿತು ಗುಪ್ತಚರ ಇಲಾಖೆಯಿಂದ ಖಚಿತ ಮಾಹಿತಿ ಲಭ್ಯವಾಗಿತ್ತು ಎಂದು ತಿಳಿಸಿದರು.

ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಸಿಆರ್ ಪಿಎಫ್ ನ 19ನೇ ಬೆಟಾಲಿಯನ್ ಕಮಾಂಡರ್ ಹಿಮಾಂಶು ಕುಮಾರ್ ಅವರು, ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ರೌರ್ಕೆಲಾ  ಪೊಲೀಸ್ ವರಿಷ್ಠಾಧಿಕಾರಿ ಅನಿರುದ್ಧ್ ಅವರ ಸಹಾಯ ಪಡೆದು ಕಾರ್ಯಾಚರಣೆ ನಡೆಸಿದೆವು. ಈ ವೇಳೆ ನಕ್ಸಲರ ಬಳಿ ಇದ್ದ ಮದ್ದು-ಗುಂಡುಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಹೇಳಿದರು.

ಒಟ್ಟಾರೆ ಕಳೆದ ಮೂರು ವರ್ಷಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಮಾವೋ ಚಟುವಟಿಕೆ ಇದೀಗ ಸ್ಫೋಟಗೊಂಡಿದ್ದು, ಮತ್ತೆ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಕಾದಾಟ  ಮುಂದುವರೆಯುವಂತಾಗಿದೆ.

Write A Comment