ರಾಷ್ಟ್ರೀಯ

ಬಿಹಾರ ಫಲಿತಾಂಶ ವಿಷಯ ಸಂಸತ್ತು ಅಧಿವೇಶನಕ್ಕೆ ತರಬೇಡಿ: ವೆಂಕಯ್ಯ ನಾಯ್ಡು

Pinterest LinkedIn Tumblr

venkaiah-naiduನವದೆಹಲಿ: ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನವನ್ನು ತಡೆಯೊಡ್ಡಲು ಅಸ್ತ್ರವಾಗಿ ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶವನ್ನು ತೆಗೆದುಕೊಳ್ಳಬಾರದು ಎಂದು ಹೇಳಿರುವ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು, ಫಲಿತಾಂಶ ಬಿಹಾರ ರಾಜ್ಯಕ್ಕೆ ಮಾತ್ರ ಸಂಬಂಧಿಸಿದ್ದು. ಇಡೀ ದೇಶಕ್ಕೆ ಸಂಬಂಧಿಸಿದ ತೀರ್ಪು ಅಲ್ಲ ಎಂದು ಹೇಳಿದ್ದಾರೆ.

ಬಿಹಾರ ವಿಧಾನಸಭೆಯ ತೀರ್ಪುನ ಬಗ್ಗೆ ಬಿಜೆಪಿ ವಿಸ್ತಾರವಾಗಿ ವಿಮರ್ಶೆ ಮಾಡಲಿದೆ. ಆದರೆ ಈ ಫಲಿತಾಂಶವನ್ನು ಎಲ್ಲರೂ ಸರಿಯಾದ ದೃಷ್ಟಿಕೋನದಿಂದ ನೋಡಬೇಕು ಎಂದು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆ ನಂತರ ಮಾಧ್ಯಮಗಳೊಂದಿಗೆ ನಡೆದ ಸಂವಾದದಲ್ಲಿ ತಿಳಿಸಿದರು.

ಬಿಜೆಪಿಯು ಬಿಹಾರ ಜನತೆಯ ತೀರ್ಪನ್ನು ಸ್ವಾಗತಿಸುತ್ತದೆ. ಬಿಹಾರ ಜನತೆ ಅಭಿವೃದ್ಧಿಯನ್ನು ಬಯಸುತ್ತಾರೆ. ಅವರು ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಆರಿಸಿದ್ದಾರೆ. ಜನಾದೇಶ ಬಿಹಾರಿಗಳ ಆಕಾಂಕ್ಷೆ ಮತ್ತು ಅವರ ಅಭಿವೃದ್ಧಿಗೆ ಸಂಬಂಧಿಸಿದ್ದಾಗಿದೆ ಎಂದರು.

ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ 26ಕ್ಕೆ ಆರಂಭವಾಗಲಿದ್ದು, ಡಿಸೆಂಬರ್ 23ರಂದು ಕೊನೆಗೊಳ್ಳಲಿದೆ. ಸಾಹಿತಿಗಳು ಮತ್ತು ಕಲಾವಿದರ ಪ್ರಶಸ್ತಿ ವಾಪಸ್, ದಾದ್ರಿ ಘಟನೆ ಮೊದಲಾದ ವಿಷಯಗಳನ್ನು ಈ ಬಾರಿ ವಿರೋಧ ಪಕ್ಷದವರು ಅಸ್ತ್ರವಾಗಿ ತೆಗೆದುಕೊಳ್ಳಲಿವೆ.

ಈ ಬಾರಿಯ ಅಧಿವೇಶನದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿವೇಶನದಲ್ಲಿ ಪ್ರಮುಖ ಶಾಸನಗಳಾದ ಸರಕು ಮತ್ತು ಸೇವಾ ತೆರಿಗೆ, ಭೂ ಸ್ವಾಧೀನ ಮಸೂದೆ, ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಮಸೂದೆ ಹಾಗೂ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆರ್ಬಿಟ್ರೇಶನ್ ಮಸೂದೆ ಮೊದಲಾದವುಗಳ ಅನುಮೋದನೆಗೆ ಆಸಕ್ತಿ ಹೊಂದಿದೆ.

Write A Comment