ರಾಷ್ಟ್ರೀಯ

ಬಿಹಾರದಲ್ಲಿ ಹೀನಾಯ ಸೋಲು : ಕೆಲವು ಸಚಿವರ ತಲೆದಂಡಕ್ಕೆ ಮುಂದಾದ ಬಿಜೆಪಿ

Pinterest LinkedIn Tumblr

shaನವದೆಹಲಿ, ನ.9-ನಿರ್ಣಾಯಕ ಎನಿಸಿದ್ದ ಬಿಹಾರ  ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ ಇದೀಗ ಕೆಲವು ಸಚಿವರ ತಲೆದಂಡಕ್ಕೆ ಮುಂದಾಗಿದ್ದು, ಸಚಿವ ಸಂಪುಟ ಪುನರ್‌ರಚನೆ ನಡೆಯುವ ಸಾಧ್ಯತೆ ಇದೆ. ಸಚಿವ ಸಂಪುಟ ಪುನರ್‌ರಚನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಒಲವು ತೋರಿದ್ದಾರೆ. ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಡಾ.ಮುರಳಿಮನೋಹರ ಜೋಶಿ, ಯಶವಂತ್‌ಸಿನ್ಹಾ ಹಾಗೂ ಆರ್‌ಎಸ್‌ಎಸ್ ನಾಯಕರು ಹಸಿರು ನಿಶಾನೆ ತೋರಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಸಂಪುಟದಲ್ಲಿರುವ ಕೆಲ ಸಚಿವರು ತಮ್ಮ ಇಲಾಖೆಯಲ್ಲಿ ಯಾವುದೇ ಸಾಧನೆ ಮಾಡಿಲ್ಲ ಎಂಬ ಮಾತುಗಳು ಸರ್ಕಾರದ ಮಟ್ಟದಲ್ಲಿ ಕೇಳಿ ಬರುತ್ತಿದ್ದವು.

ಅಲ್ಲದೆ, ಅಧಿಕಾರಿಗಳ ಮೇಲೆಯೂ ಹಿಡಿತ ಹೊಂದಿಲ್ಲದ ಕಾರಣ ಕೆಲ ಸಚಿವರಿಗೆ ಇಲಾಖೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ.

ತಮ್ಮ ವೇಗಕ್ಕೆ ತಕ್ಕಂತೆ ಸಚಿವರು ಇಲಾಖೆಯಲ್ಲಿ ಕೆಲಸ ಮಾಡದಿರುವ ಬಗ್ಗೆ ಪ್ರಧಾನಿ ಮೋದಿ ಕೆಲ ಹಿರಿಯ ಸಚಿವರ ಜತೆ ಅಸಮಧಾನ ವ್ಯಕ್ತಪಡಿಸಿದ್ದರು. ನಾನೊಬ್ಬನೇ ಕೆಲಸ ಮಾಡಲು ಸಾಧ್ಯವಿಲ್ಲ. ನನ್ನ ನಿರೀಕ್ಷೆಗೆ ತಕ್ಕಂತೆ ಎಲ್ಲರೂ ಕೆಲಸ ಮಾಡಬೇಕು. ಇಲ್ಲದಿದ್ದರೆ ಸರ್ಕಾಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ನೋವನ್ನು ತೋಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಸಂಸತ್ತಿನ ಅಧಿವೇಶನ ಮುಗಿದ ಬಳಿಕ ಕೆಲವು ಅಸಮರ್ಥ ಮತ್ತು ವಿವಾದಾತ್ಮಕ ಸಚಿವರನ್ನು ಸಂಪುಟದಿಂದ ಕೈ ಬಿಡಲು ಒಲವು ತೋರಿದ್ದಾರೆ. ಬಿಹಾರದಲ್ಲಿ ಪಕ್ಷ ಗೆಲ್ಲಬೇಕು ಎಂಬ ಕಾರಣಕ್ಕಾಗಿ ತಮ್ಮ ಸಂಪುಟದ 30 ಸಚಿವರು ಮತ್ತು ಅನೇಕ ಸಂಸದರು ನಿಯೋಜನೆ ಮಾಡಲಾಗಿತ್ತು.

ಇದರಲ್ಲಿ ಪ್ರಮುಖವಾಗಿ ರವಿಶಂಕರ್ ಪ್ರಸಾದ್, ಧರ್ಮೇಂದ್ರ ಪ್ರಧಾನ್, ಅನಂತ್‌ಕುಮಾರ್, ಗಿರಿರಾಜ್‌ಕಿಶೋರ್, ರಾಧಾಮೋಹನ್‌ಸಿಂಗ್ ಸೇರಿದಂತೆ ಮತ್ತಿತರರು ನಿಯೋಜನೆಗೊಂಡಿದ್ದರು.
ಆದರೆ, ಫಲಿತಾಂಶದಲ್ಲಿ ಬಿಜೆಪಿಗೆ ಜನತೆ ಮರ್ಮಾಘಾತನೀಡಿರುವುದರಿಂದ ಅಸಮರ್ಥ ಮತ್ತು ವಿವಾದಾತ್ಮಕ ಸಚಿವರನ್ನು ಕಿತ್ತು ಹಾಕಲು ಮೋದಿ ಸಮ್ಮತ್ತಿಸಿದ್ದಾರೆ. ಪ್ರಮುಖವಾಗಿ ಕರ್ನಾಟಕದಿಂದ ಕಾನೂನು ಸಚಿವರಾಗಿರುವ ಡಿ.ವಿ.ಸದಾನಂದಗೌಡ ಹೆಸರು ಕೋಕ್ ನೀಡುವವರ ಪಟ್ಟಿಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿದೆ. ಮೊದಲ ಅವಧಿಯಲ್ಲಿ ಅವರನ್ನು ರೈಲ್ವೆ ಸಚಿವರನ್ನಾಗಿ ಮಾಡಲಾಗಿತ್ತು. ಆದರೆ, ಇಲಾಖೆ ಮೇಲೂ ಅವರು ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಈ ಖಾತೆಯನ್ನು ಬದಲಾಯಿಸಿ ಕಾನೂನು ಮತ್ತು ಸಾಮಾಜಿಕ ನ್ಯಾಯ ಹೊಣೆಗಾರಿಕೆಯನ್ನು ನೀಡಲಾಯಿತು.

ಆದರೆ, ಇಲ್ಲೂ ಕೂಡ ಸದಾನಂದಗೌಡ ಹೇಳಿಕೊಳ್ಳುವಂತ ಸಾಧನೆ ಮಾಡಲಿಲ್ಲ. ಇತ್ತೀಚೆಗೆ ನ್ಯಾಯಾಧೀಶರ ನೇಮಕಾತಿ ಕುರಿತಂತೆ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿದಾಗ ಕಾನೂನು ಸಚಿವರಾದ ಸದಾನಂದಗೌಡರು ಅದರ ಬಗ್ಗೆ ಬೆಳಕು ಚೆಲ್ಲಲಿಲ್ಲ.  ಇದು ಮೋದಿ ಕೆಂಗಣ್ಣಿಗೆ ಗುರಿಯಾಗಿದೆ.

Write A Comment