ರಾಷ್ಟ್ರೀಯ

ಫೀನಿಕ್ಸ್ ನಂತೆ ಎದ್ದು ಬಂದು ಕಿಂಗ್ ಮೇಕರ್ ಆದ ಲಾಲು

Pinterest LinkedIn Tumblr

Lalu-the-kingmakerಪಾಟ್ನಾ: ಬಿಹಾರವನ್ನು 15 ವರ್ಷಗಳ ಆಳಿ ಬಳಿಕ ಪಾತಾಳಕ್ಕೆ ಕುಸಿದಿದ್ದ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಇದೀಗ ಮತ್ತೆ ಫೀನಿಕ್ಸ್ ನಂತೆ ಎದ್ದು ಚುನಾವಣೆಯಲ್ಲಿ ಕಿಂಗ್ ಮೇಕರ್  ಆಗಿ ಮಿಂಚುತ್ತಿದ್ದಾರೆ.

2010 ಚುನಾವಣಾ ಸೋಲು ಮತ್ತು ಮೇವು ಹಗರಣದಿಂದ ಜರ್ಜರಿತರಾಗಿದ್ದ ಲಾಲು ಪ್ರಸಾದ್ ಯಾದವ್ ಅವರು ಫೀನಿಕ್ಸ್ ನಂತೆ ಎದ್ದು ಬಂದು ಪ್ರಸ್ತುತ ಬಿಹಾರ ಚುನಾವಣೆಯಲ್ಲಿ ಅಭೂತ  ಪೂರ್ವ ಯಶಸ್ಸು ಸಾಧಿಸಿದ್ದಾರೆ. ಅವರ ನೇತೃತ್ವದ ಆರ್ ಜೆಡಿ ಪಕ್ಷ 101 ಕ್ಷೇತ್ರಗಳ ಪೈಕಿ ಬರೋಬ್ಬರಿ 80 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

2010ರ ವಿಧಾನಸಭಾ ಚುನಾವಣೆಯಲ್ಲಿ ಆರ್ ಜೆಡಿ ಪಕ್ಷ ಹೀನಾಯವಾಗಿ ಸೋಲು ಕಂಡಿತ್ತು. 243 ಕ್ಷೇತ್ರಗಳ ಪೈಕಿ ಆರ್ ಜೆಡಿ ಪಕ್ಷ ಕೇವಲ 22 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. 15 ವರ್ಷಗಳ  ಕಾಲ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಪಕ್ಷವೊಂದು ಕನಿಷ್ಠ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವಷ್ಟು ಸ್ಥಾನ ಕೂಡ ಗೆಲ್ಲದೇ ಹೋಯಿತು. 2013ರಲ್ಲಿ ಪ್ರಕಟಗೊಂಡ ಮೇವು ಹಗರಣದ ತೀರ್ಪು ಲಾಲು  ರಾಜಕೀಯ ಭವಿಷ್ಯವನ್ನು ಬಹುತೇಕ ಅಂತ್ಯಗೊಳಿಸಿತು ಎಂದೇ ಎಲ್ಲರೂ ಭಾವಿಸಿದ್ದರು. ಇದಕ್ಕೆ ಇಂಬು ನೀಡುವಂತೆ ಸುಪ್ರೀಂ ಕೋರ್ಟ್ 6 ವರ್ಷಗಳ ಕಾಲ ಅವರನ್ನು ಚುನಾವಣೆಯಿಂದ ದೂರ  ಇಟ್ಟಿದೆ. ಇದರ ಬೆನ್ನಲ್ಲೇ ಪ್ರಕಟವಾದ ಲೋಕಸಭಾ ಚುನಾವಣೆ ಲಾಲು ಪ್ರಸಾದ್ ಯಾದವ್ ಅವರ ರಾಜಕೀಯ ಜೀವನಕ್ಕೆ ಕಠಿಣ ಸವಾಲಾಗಿತ್ತು.

ಇದೇ ವೇಳೆ ಎನ್ ಡಿಎ ಮೈತ್ರಿಕೂಟದಲ್ಲಿದ್ದ ಜೆಡಿಯು ಕೂಡ ತನ್ನ 17 ವರ್ಷದ ಮೈತ್ರಿಯನ್ನು ಕಡಿದುಕೊಂಡು ಹೊರಬಂದಿತ್ತು. ಹೀಗಾಗಿ 2014ರ ಲೋಕಸಭಾ ಚುನಾವಣೆ ಅತ್ತ ಲಾಲು ಪ್ರಸಾದ್  ಯಾದವ್ ಮತ್ತು ಇತ್ತ ನಿತೀಶ್ ಕುಮಾರ್ ಗೆ ಬಿಹಾರದಲ್ಲಿ ಅಸ್ಥಿತ್ವದ ಪ್ರಶ್ನೆಯಾಗಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಪ್ರಭಾವದ ಎದುರು ಈ ಇಬ್ಬರೂ ನಾಯಕರು  ಮಕಾಡೆ ಮಲಗಿದ್ದರು. ಲಾಲು ಪ್ರಸಾದ್ ಅವರ ಆರ್ ಜೆಡಿ ಪಕ್ಷ ನೆಲಕಚ್ಚಿತ್ತು. ಲಾಲು ಪ್ರಸಾದ್ ಅವರ ಅನುಪಸ್ಥಿತಿಯಲ್ಲಿಯೇ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆರ್ ಜೆಡಿ ಕೂಡ 40 ಕ್ಷೇತ್ರಗಳ ಪೈಕಿ ಕೇವಲ ನಾಲ್ಕರಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಕೇವಲ 2 ಸ್ಥಾನಗಳಿಗೇ ತೃಪ್ತಿಪಟ್ಟುಕೊಳ್ಳುವಂತಾಯಿತು.

ಲೋಕಸಭಾ ಚುನಾವಣೆಯ ಸೋಲು ಲಾಲು ಪ್ರಸಾದ್ ಅವರ ರಾಜಕೀಯ ಭವಿಷ್ಯದ ಹಿನ್ನಡೆಗೆ ಕಾರಣವಾಯಿತು. ಇದರ ನಡುವೆಯೇ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ  ಸಿಂಗ್ ಯಾದವ್ ನೇತೃತ್ವದಲ್ಲಿ ನಡೆದ ಸಂಧಾನದ ಪರಿಣಾಮ ರಾಜಕೀಯದಲ್ಲಿ ಬದ್ಧ ಶತ್ರುಗಳಾಗಿದ್ದ ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಅವರು 2015ರ ವಿಧಾನಸಭಾ  ಚುನಾವಣೆಯನ್ನು ಜಂಟಿಯಾಗಿ ಎದುರಿಸುವ ನಿರ್ಧಾರಕ್ಕೆ ಬಂದರು. ಜನಪ್ರತಿನಿಧಿ ಕಾಯ್ದೆ ಅನ್ವಯ ಶಿಕ್ಷೆಗೆ ಗುರಿಯಾಗಿದ್ದ ಲಾಲು 6 ವರ್ಷ ಚುನಾವಣೆಯಲ್ಲಿ ಪಾಲ್ಗೊಳ್ಳದ ಹಿನ್ನಲೆಯಲ್ಲಿ ಮತ್ತು  ತಮ್ಮ ಪುತ್ರರಾದ ತೇಜ್ ಪ್ರತಾಪ್ ಮತ್ತು ತೇಜಸ್ವಿಗೆ ರಾಜಕೀಯ ಅನುಭವ ಕಡಿಮೆ ಇರುವುದರಿಂದ ನಿತೀಶ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಸಮ್ಮತಿ ಸೂಚಿಸಿದ್ದರು. ಚುನಾವಣೆಯಲ್ಲಿ ತಮ್ಮ ಪುತ್ರರನ್ನು ಕೂಡ ಕಣಕ್ಕಳಿಸಿದರು. ಪ್ರಚಾರಕ್ಕಾಗಿ ತಮ್ಮ ಮಗಳಾದ ಮಿಸಾ ಭಾರ್ತಿ ಅವರನ್ನು ಬಳಸಿಕೊಂಡರು.

ಬಿಹಾರದಲ್ಲಿ ಮಿಸಾ ಭಾರ್ತಿ ಪ್ರಭಾವಿ ಮಹಿಳೆಯಾಗಿದ್ದು, ಜೆಡಿಯು-ಆರ್ ಜೆಡಿ ಮೈತ್ರಿಕೂಟದ ತಾರಾ ಪ್ರಚಾರಕರಲ್ಲಿ ಪ್ರಮುಖರಾಗಿದ್ದಾರೆ. ಚುನಾವಣಾ ಆರಂಭದಿಂದಲೂ ಆರ್ ಜೆಡಿ ಪಕ್ಷದ ಮತಗಳನ್ನು ಭದ್ರ ಪಡೆಸಿಕೊಂಡ ಲಾಲು, ತಮ್ಮ ಅಭ್ಯರ್ಥಿಗಳ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ತಮ್ಮದೇ ಅಭ್ಯರ್ಥಿಗಳನ್ನು ನೇಮಿಸುವಲ್ಲಿ ಯಶಸ್ವಿಯಾದರು. ತಜ್ಞರ ಪ್ರಕಾರ ಇದು ಲಾಲು ಅವರ ಮೊದಲ ಯಶಸ್ವೀ ನಡೆಯಾಗಿದೆ. ಇನ್ನು ಬಿಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಮುಸ್ಲಿಂ ಮತ್ತು ಹಿಂದುಳಿದ ಪಂಗಡಗಳ ಮತಗಳ ಮೇಲೆ ಕಣ್ಣಿರಿಸಿದ ಲಾಲು ಅದರಲ್ಲಿಯೂ ಬಹುತೇಕ ಯಶಸ್ವಿಯಾಗಿದ್ದು, ಅದರ ಪರಿಣಾಮ ಇದೀಗ ಚುನಾವಣಾ ಫಲಿತಾಂಶದಲ್ಲಿ ಪ್ರಕಟವಾಗುತ್ತಿದೆ. ಇನ್ನು ಚುನಾವಣಾ ಪೂರ್ವದಲ್ಲಿ ಮೀಸಲಾತಿ ಕುರಿತಂತೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿದ್ದ ಮೀಸಲಾತಿ ಪುನರ್ ವಿಮರ್ಶೆಯ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದ್ದ ಲಾಲು, ಅದನ್ನು ಚುನಾವಣೆಯಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದರು. ಸಂದರ್ಶನವೊಂದರಲ್ಲಿ ಆರ್ ಎಸ್ ಎಸ್ ಹೇಳಿಕೆಯನ್ನು ನರೇಂದ್ರ ಮೋದಿ ಅವರ ಆಡಳಿತದ ಭವಿಷ್ಯಕ್ಕೆ ತಾಳೆ ಹಾಕಿ ಲಾಲು ಪ್ರಸಾದ್ ಯಾದವ್ ಟೀಕಿಸಿದ್ದರು. ಇದನ್ನೇ ತಮ್ಮ ಪ್ರಚಾರ ರ್ಯಾಲಿಗಳಲ್ಲಿಯೂ ಬಳಸಿಕೊಂಡಿದ್ದರು.

ಇನ್ನು ಮೈತ್ರಿಕೂಟಕ್ಕೆ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಮಹಾಘಟ್ ಬಂಧನಕ್ಕೆ ಸಕಾರಾತ್ಮಕವಾಗಿ ಪರಿಣಮಿಸಿತು. ಇಷ್ಟು ಸಾಲದು ಎಂಬಂತೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಹಾಘಟ್ ಬಂಧನ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಿದ್ದು, ಚದುರಿ ಹೋಗುತ್ತಿದ್ದ ಮತಗಳು ಮಹಾಘಟ್ ಬಂಧನ ಮೈತ್ರಿಕೂಟಕ್ಕೆ ಬೀಳುವಂತಾಯಿತು.

ಲಾಲು ಪ್ರಸಾದ್ ಅವರ ಈ ಎಲ್ಲ ಪ್ರಯತ್ನಗಳು ಇದೀಗ ಫಲ ನೀಡಿದ್ದು, ಅವರ ಆರ್ ಜೆಡಿ ಪಕ್ಷ 101 ಸ್ಥಾನಗಳ ಪೈಕಿ 80 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆ ಮೂಲಕ ಲಾಲು ಬಿಹಾರದಲ್ಲಿ ಕಿಂಗ್  ಮೇಕರ್ ಆಗಿ ಮೆರೆಯುತ್ತಿದ್ದಾರೆ.

Write A Comment