ರಾಷ್ಟ್ರೀಯ

ಹೈಕೋರ್ಟ್ ಆದೇಶ: ಎಸ್‌ಐ ಆಗಿ ಮಂಗಳಮುಖಿ

Pinterest LinkedIn Tumblr

Prei-fiಚೆನ್ನೈ, ನ.6: ಟ್ರಾನ್ಸ್ ಜಂಡರ್ (ತೋರಿಕೆಗೆ ಪುರುಷನಂತಿದ್ದು ಸ್ತ್ರೀಯ ನಡವಳಿಕೆಗಳನ್ನು ಹೊಂದಿರುವ ಅಥವಾ ತೋರಿಕೆಗೆ ಸ್ತ್ರೀಯಂತಿದ್ದು ಪುರುಷನ ನಡವಳಿಕೆಗಳನ್ನು ಹೊಂದಿರುವ ವ್ಯಕ್ತಿ) ಓರ್ವರನ್ನು ಪೊಲೀಸ್ ಸಬ್ ಇನ್‌ಸ್ಟೆಕ್ಟರ್ ಆಗಿ ನೇಮಕಗೊಳಿಸುವಂತೆ ತಮಿಳುನಾಡು ಸಮವಸ್ತ್ರ ಸೇವೆಗಳ ನೇಮಕಾತಿ ಮಂಡಳಿ (ಟಿಎನ್‌ಯುಎಸ್‌ಆರ್‌ಬಿ)ಗೆ ಮದರಾಸು ಹೈಕೋರ್ಟ್ ಗುರುವಾರ ನಿರ್ದೇಶನ ನೀಡಿದೆ. ಈ ಹುದ್ದೆಗೆ ಆಕೆ ಅರ್ಹತೆ ಹೊಂದಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಮುಂದಿನ ನೇಮಕಾತಿ ಪ್ರಕ್ರಿಯೆಯನ್ನು ನಡೆಸುವ ಹೊತ್ತಿಗೆ ಟಾನ್ಸ್ ಜಂಡರ್‌ಗಳನ್ನು ‘‘ತೃತೀಯ ವರ್ಗ’’ವಾಗಿ ಸೇರಿಸಿಕೊಳ್ಳುವಂತೆಯೂ ಮುಖ್ಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಪುಷ್ಪಾ ಸತ್ಯನಾರಾಯಣ ಅವರನ್ನೊಳಗೊಂಡ ಪ್ರಥಮ ಪೀಠ ಟಿಎನ್‌ಯುಎಸ್‌ಆರ್‌ಬಿಗೆ ಸೂಚಿಸಿದೆ.

ಟಾನ್ಸ್‌ಜಂಡರ್ ಕೆ. ಪ್ರೀತಿಕಾ ಯಶಿನಿಯ ಅರ್ಜಿಯನ್ನು ಮೊದಲು ತಿರಸ್ಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಟಾನ್ಸ್‌ಜಂಡರ್‌ಗಳನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ನಾಗರಿಕರು ಎಂಬುದಾಗಿ ಪರಿಗಣಿಸಲು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಾತಿಯಲ್ಲಿ ಮತ್ತು ಸರಕಾರಿ ನೇಮಕಾತಿಗಳಲ್ಲಿ ಅವರಿಗೆ ಎಲ್ಲ ರೀತಿಯ ಮೀಸಲಾತಿಗಳನ್ನು ನೀಡಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಆದೇಶ ನೀಡುವ ಸುಪ್ರೀಂ ಕೋರ್ಟ್‌ನ ತೀರ್ಪೊಂದನ್ನು ಪ್ರೀತಿಕಾ ಉಲ್ಲೇಖಿಸಿದ್ದಾರೆ. ಬಾಯ್ದೆರೆ ಪರೀಕ್ಷೆಯಲ್ಲಿ ಬರೆಯಲು ಕೆಲವು ಷರತ್ತುಗಳಿಗೆ ಒಳಪಟ್ಟು ಆಕೆಗೆ ಅನುಮೋದನೆ ನೀಡುವಂತೆ ನ್ಯಾಯಾಲಯ ಸೆಪ್ಟಂಬರ್ 7ರಂದು ಅಧಿಕಾರಿಗಳಿಗೆ ಆದೇಶ ನೀಡಿತ್ತು.
ಓರ್ವ ಮಂಗಳಮುಖಿ ಅನುಭವಿಸುವ ಕಷ್ಟವನ್ನು ಇತರ ಎರಡು ವರ್ಗಗಳು ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ನ್ಯಾಯಾಲಯ ಹೇಳಿತು. ಈ ಪ್ರಕರಣದಲ್ಲಿ, ದೂರುದಾರರನ್ನು ಪುರುಷ ಎಂದು ಕರೆಯಲಾಗಿದೆ, ಆದರೆ ಅವರು ಸ್ತ್ರೀಯಾಗಿದ್ದಾರೆ. ಆಕೆ ತನ್ನ ಮನೆಯಲ್ಲಿ ಭಾರೀ ಸಂಕಟ ಅನುಭವಿಸಿದ್ದು ಮನೆಯಿಂದ ಹೊರಬಿದ್ದಿದ್ದಾರೆ. ಅವರ ರಕ್ಷಣಗೆ ತಂದೆ-ತಾಯಿಗಳು ಬಂದಿಲ್ಲ. ಇಂಥ ಕಷ್ಟದ ಸನ್ನಿವೇಶದಲ್ಲಿ ಅವರು ಉದ್ಯೋಗದ ಆಸರೆ ಪಡೆಯಲು ಮುಂದಾಗಿದ್ದಾರೆ ಎಂದು ಪೀಠ ಹೇಳಿತು.

Write A Comment