ರಾಷ್ಟ್ರೀಯ

ನಿವೃತ್ತ ಯೋಧರಿಂದ ಪದಕ ವಾಪಸ್‌ಗೆ ನಿರ್ಧಾರ

Pinterest LinkedIn Tumblr

OROPಹೊಸದಿಲ್ಲಿ,ನ.6: ‘ಸಮಾನಶ್ರೇಣಿ ಸಮಾನ ಪಿಂಚಣಿ’ ಯೋಜನೆ ಜಾರಿಗೆ ಕೇಂದ್ರದ ವಿಳಂಬ ಧೋರಣೆಯಿಂದಾಗಿ ಬೇಸತ್ತ ನಿವೃತ್ತ ಹಿರಿಯ ಸೇನಾಯೋಧರು ತಮ್ಮ ಸೇವಾ ಪದಕಗಳನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ.

ಮುಂದಿನ ಮಂಗಳವಾರ ದಿಲ್ಲಿ ವಿಮಾನನಿಲ್ದಾಣದ ಆಗಮನ ಹಾಲ್‌ಗಳಲ್ಲಿ ಹಾಗೂ ದೇಶದ ಇತರ ಭಾಗಗಳಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಅವರು ತಮ್ಮ ಪದಕಗಳನ್ನು ಹಿಂದಿರುಗಿಸಲಿದ್ದಾರೆಂದು ಅವರು ಹೇಳಿದ್ದಾರೆ.

ವಿದೇಶದಲ್ಲಿರುವ ಮಾಜಿ ಯೋಧರು ರಾಯಭಾರಿ ಕಚೇರಿಗಳಲ್ಲಿ ಪದಕಗಳನ್ನು ಒಪ್ಪಿಸಲಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆ ಮುಗಿದ ಕೂಡಲೇ ಒಆರ್‌ಒಪಿ ಜಾರಿ ಕುರಿತ ಅಧಿಕೃತ ಅಧಿಸೂಚನೆಯನ್ನು ಹೊರಡಿಸುವುದಾಗಿ ಕೇಂದ್ರ ಸರಕಾರ ಭರವಸೆ ನೀಡಿತ್ತು. ಚುನಾವಣೆ ವೇಳೆ ಹೊಸ ಯೋಜನೆಗಳ ಅಧಿಸೂಚನೆ ಜಾರಿಯನ್ನು ಚುನಾವಣಾ ನೀತಿ ಸಂಹಿತೆಯು ನಿಷೇಧಿಸುತ್ತದೆಯೆಂಬ ಕಾರಣವನ್ನು ಅದು ನೀಡಿತ್ತು. ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ನವೆಂಬರ್ 8ರಂದು ನಡೆಯಲಿದೆ.

ಮಾಜಿ ಯೋಧರ ಹಲವು ತಿಂಗಳುಗಳ ಚಳವಳಿಗೆ ಕೊನೆಗೂ ಮಣಿದ ಸರಕಾರವು ಸೆಪ್ಟಂಬರ್ 5ರಂದು ಸಮಾನ ಶ್ರೇಣಿ ಸಮಾನ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿತ್ತು. ಈ ಮಧ್ಯೆ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಹೇಳಿಕೆಯೊಂದನ್ನು ನೀಡಿ, ಸರಕಾರವು ನ.11ರಂದು ಆಚರಿಸಲಾಗುವ ದೀಪಾವಳಿ ಹಬ್ಬಕ್ಕೆ ಮೊದಲು ಒಆರ್‌ಒಪಿ ಯೋಜನೆ ಕುರಿತ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸುವುದೆಂದು ತಿಳಿಸಿದ್ದಾರೆ.

Write A Comment