ಶ್ರೀನಗರ: ಜಮ್ಮು ಕಾಶ್ಮೀರದ ಸರ್ಕಾರದಲ್ಲಿ ಸಹಭಾಗಿತ್ವವನ್ನು ಹೊಂದಿರುವ ಬಿಜೆಪಿ, ನವೆಂಬರ್ 7 ರಂದು ಶ್ರೀನಗರದಲ್ಲಿ ನಡೆಯಲಿರುವ ಪ್ರಧಾನಿ ಮೋದಿ ಅವರ ರ್ಯಾಲಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯನ್ನಿಟ್ಟುಕೊಂಡಿದೆ.
ವಿಧಾನಸಭಾ ಚುನಾವಣೆಯ ಸೋಲಿನಿಂದ ಆಘಾತದಿಂದ ಇನ್ನೂ ಹೊರಬರದ ವಿರೋಧ ಪಕ್ಷಗಳು ಪ್ರಧಾನಿಯವರ ಭೇಟಿಯ ಸಂದರ್ಭದಲ್ಲಿ ತೊಡಕನ್ನುಂಟು ಮಾಡಲು ಪ್ರಯತ್ನ ನಡೆಸುತ್ತಿವೆ ಎಂದು ಸಹ ಬಿಜೆಪಿ ಆರೋಪಿಸಿದೆ.
ಜಮ್ಮು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ವರಿಷ್ಠ ಮತ್ತು ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ ಮೋದಿ ಶ್ರೀನಗರದಿಂದ ಪಾಕಿಸ್ತಾನಕ್ಕೆ ಸ್ನೇಹದ ಕೈ ವಿಸ್ತರಿಸಬೇಕು ಎಂದು ಹಲವು ಬಾರಿ ಅಭಿಲಾಷೆಯನ್ನು ವ್ಯಕ್ತ ಪಡಿಸಿದ್ದರು. ಆದರೆ ಸರ್ಕಾರದ ಪಾಲುದಾರ ಬಿಜೆಪಿ ಏಕಪಕ್ಷೀಯ ಜಾತ್ಯತೀತ ಪ್ರೇಮ ಸಂಬಂಧಗಳು ಎಂದಿಗೂ ಯಶಸ್ಸು ಕಾಣಲಾರದು ಎಂದು ವಾದಿಸುತ್ತಿದೆ.
ಮೋದಿಯವರ ರ್ಯಾಲಿ ಯಲ್ಲಿ ಭಾಗವಹಿಸಲು ಬಯಸುವ ಯಾರಿಗೂ ನಿರ್ಬಂಧವಿಲ್ಲ. ಅಂದು ಅನಗತ್ಯ ತೊಡಕನ್ನುಂಟು ಮಾಡುವ ಜನರನ್ನು ನಿಯಂತ್ರಿಸಲು ಸರ್ಕಾರ ಸರ್ವ ಸನ್ನದ್ಧವಾಗಿದೆ ಎಂದು ಹಿರಿಯ ಬಿಜೆಪಿ ನಾಯಕ ಮತ್ತು ಜಮ್ಮು ಮತ್ತು ಕಾಶ್ಮಿರದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಚೌಧರಿ ಲಾಲ್ ಸಿಂಗ್ ಹೇಳಿದ್ದಾರೆ.
ಪ್ರಧಾನಿ ರ್ಯಾಲಿಗೆ 1 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ನಮ್ಮದು ಎಂದು ಅಶಾವಾದವನ್ನು ವ್ಯಕ್ತ ಪಡಿಸಿದ್ದಾರೆ.