ರಾಷ್ಟ್ರೀಯ

ಶಾರುಕ್ ಖಾನ್ ಒಬ್ಬ ಶ್ರೇಷ್ಠ ನಟ: ಉಲ್ಟಾ ಹೊಡೆದ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ

Pinterest LinkedIn Tumblr

Kailash-Vijayvargiya

ನವದೆಹಲಿ: ನಟ ಶಾರುಕ್ ಖಾನ್ ಬಗ್ಗೆ ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದ್ದು, ನನಗೆ ಯಾರಿಗೂ ನೋವುಂಟು ಮಾಡುವ ಉದ್ದೇಶವಿರಲಿಲ್ಲ ಎಂದು ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಅವರು ಬುಧವಾರ ಹೇಳಿದ್ದಾರೆ.

ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಅಮಿತಾಭ್ ಬಚ್ಚನ್ ನಂತರ ಶಾರುಕ್ ಖಾನ್ ಶ್ರೇಷ್ಠ ನಟರಾಗಿದ್ದು, ನನಗೆ ಯಾರನ್ನೂ ನೋವುಂಟು ಮಾಡುವ ಉದ್ದೇಶವಿರಲಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನನ್ನ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆಂದು ಹೇಳಿದ್ದಾರೆ.

ಸೋಮವಾರವಷ್ಟೇ 50ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಶಾರುಕ್ ಖಾನ್ ಅವರು ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ಹೇಳಿದ್ದರು.

ಈ ಹೇಳಿಕೆಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ನಾಯಕ ಶಾರುಕ್ ಖಾನ್ ಒಬ್ಬ ದೇಶದ್ರೋಹಿ. ಅವರು ಭಾರತದಲ್ಲೇ ನೆರೆಸಿದ್ದರೂ ಆತ್ಮ ಮಾತ್ರ ಪಾಕಿಸ್ತಾನದಲ್ಲಿದೆ. ಅವರ ಚಿತ್ರಗಳಿಗೆ ಕೋಟಿಗಟ್ಟಲೆ ಹಣ ಭಾರತದಿಂದ ಬರುತ್ತದೆ. ಆದರೆ ಇಂದು ಭಾರತದಲ್ಲಿಯೇ ಅಸಹಿಷ್ಣುತೆಯಿದೆ ಎಂದು ಆಲೋಚಿಸುತ್ತಿದ್ದಾರೆಂದು ಎಂದು ಹೇಳಿದ್ದರು.
ವಿಜಯವರ್ಗೀಯ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.

ಕೈಲಾಶ್ ವಿಜಯವರ್ಗೀಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಪ್ರಕಾಶ್ ಜವಡೇಕರ್ ಅವರು, ವಿಜವರ್ಗೀಯ ಬಿಜೆಪಿ ವಕ್ತಾರ ಅಲ್ಲ. ಪಕ್ಷದ ಪರವಾಗಿ ಮಾತನಾಡುವ ಹಕ್ಕು ಅವರಿಗಿಲ್ಲ ಎಂದು ಹೇಳಿದ್ದಾರೆ.

ವಿಜಯವರ್ಗೀಯ ಹೇಳಿಕೆ ಬಗ್ಗೆ ಈ ವರೆಗೂ ಮಾಹಿತಿ ಇಲ್ಲ. ಅವರು ಏನೇ ಹೇಳಿಕೆ ನೀಡಿದ್ದರು ಅದು ಅವರ ವೈಯಕ್ತಿಕ ಹೇಳಿಕೆಯಾಗಿದ್ದು, ಹೇಳಿಕೆ ಪಕ್ಷದ್ದಲ್ಲ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.

ವಿಜಯವರ್ಗೀಯ ಹೇಳಿಕೆ ಕುರಿತಂತೆ ಈಗಾಗಲೇ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು, ಕೈಲಾಶ್ ವಿಜಯವರ್ಗೀಯ ಅವರು ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಶಾರುಕ್ ಖಾನ್ ಅವರನ್ನು ದೇಶದ್ರೋಹಿ ಎಂದು ಹೇಳಿದ್ದಾರೆ. ವರ್ಗೀಯ ಅವರ ಹೇಳಿಕೆಗೆ ಮೋದಿ ಹಾಗೂ ಅಮಿತ್ ಶಾ ಸಮರ್ಥನೆ ನೀಡುವುದಿಲ್ಲವೇ? ವರ್ಗೀಯ ವಿರುದ್ಧ ಕ್ರಮ ಕೈಗೊಳ್ಳುತ್ತಾರೆಯೇ? ನಟನ ವಿರುದ್ಧ ಬಿಜೆಪಿ ಕಾರ್ಯದರ್ಶಿ ಈ ರೀತಿ ಹೇಳಿಕೆ ನೀಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಬಗ್ಗೆ ವೈಯಕ್ತಿಕವಾಗಿ ನಟನಲ್ಲಿ ಕ್ಷಮೆಯಾಚಿಸಬೇಕಿದೆ ಎಂದು ಹೇಳಿದ್ದಾರೆ.

ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ. ನಿಮ್ಮ ಹೇಳಿಕೆಯಿಂದಾದರೂ ದೇಶದಲ್ಲಿ ಸಹಿಷ್ಣುತೆ ವಾತಾವರಣ ನಿರ್ಮಾಣವಾಗಲಿ ಎಂಬುದು ನಮ್ಮ ಆಶಯ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶಾರುಕ್ ಖಾನ್ ಅವರ ಹೇಳಿಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Write A Comment