ರಾಷ್ಟ್ರೀಯ

ಸಂಪುಟ ವಿಸ್ತರಣೆ ಕಗ್ಗಂಟು: ಉಪಮುಖ್ಯಮಂತ್ರಿ ಹುದ್ದೆಗೆ ಜಿ. ಪರಮೇಶ್ವರ್ ಪಟ್ಟು

Pinterest LinkedIn Tumblr

digನವದೆಹಲಿ: ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ಕಾಂಗ್ರೆಸ್‌ ಹೈಕಮಾಂಡ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದ್ದರೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಈ ಹುದ್ದೆಗೆ ಪಟ್ಟು ಹಿಡಿದಿರುವುದರಿಂದ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಷಯ ಮಂಗಳವಾರವೂ ಕಗ್ಗಂಟಾಗಿಯೇ ಉಳಿದಿದೆ.

ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಹಾಗೂ ಯಾವ ಖಾತೆ ನೀಡಬೇಕು ಎನ್ನುವುದು ಮುಖ್ಯಮಂತ್ರಿ ಅವರ ಪರಮಾಧಿಕಾರ ಎಂದು ಹೇಳುವ ಮೂಲಕ ಪಕ್ಷದ ವರಿಷ್ಠರು ಸಿದ್ದರಾಮಯ್ಯ ಅವರ ಪರವಾಗಿ ನಿಂತಿದ್ದಾರೆ. ಆದರೂ ಪರಮೇಶ್ವರ್ ಅವರು ತಮ್ಮ ನಿಲುವು ಬದಲಿಸದೇ ಇರುವುದು ಹೈಕಮಾಂಡ್‌ಗೆ ತಲೆನೋವಾಗಿದೆ. ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಕೂಗು ಎದ್ದಿರುವ ಸಂದರ್ಭದಲ್ಲಿ ಪರಮೇಶ್ವರ್‌ಗೆ ಸೂಕ್ತ ಸ್ಥಾನ ನೀಡದೇ ಇದ್ದರೆ ತಪ್ಪು ಸಂದೇಶ ರವಾನೆಯಾಗುವ ಆತಂಕವೂ ಪಕ್ಷದ ವರಿಷ್ಠರನ್ನು ಕಾಡುತ್ತಿದೆ.

ಪರಮೇಶ್ವರ್‌ ಅವರು ಮಂಗಳವಾರ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗದೇ ದೂರ ಉಳಿದರು. ತಾವು ಎರಡನೇ ಬಾರಿಗೂ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯುವ ಸಂದೇಶವನ್ನು ಅವರು ರವಾನಿಸಿದ್ದಾರೆ ಎನ್ನಲಾಗಿದೆ. ಎರಡನೇ ಬಾರಿಗೆ ಕೆಪಿಸಿಸಿ ಅಧ್ಯಕ್ಷತೆ ಅಥವಾ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಲು ಹೈಕಮಾಂಡ್‌ ನಿರಾಕರಿಸಿದರೆ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಇರುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಅವರೊಂದಿಗೆ ಮಂಗಳವಾರ ಸಂಜೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಪರಮೇಶ್ವರ್ ಅವರನ್ನು ಸಂಪುಟಕ್ಕೆ ತೆಗೆದುಕೊಂಡು ಸಂಪುಟ ವಿಸ್ತರಣೆ ಮಾಡಲು ತಾವು ಸಿದ್ಧರಿರುವುದಾಗಿ ಹಾಗೂ ಪರಮೇಶ್ವರ ಅವರಿಗೆ ಅವರು ಕೇಳಿದ ಖಾತೆಯನ್ನು ನೀಡುವುದಾಗಿ ಸಿದ್ದರಾಮಯ್ಯ ಸೋನಿಯಾಂಧಿ ಅವರಿಗೆ ತಿಳಿಸಿದರು ಎನ್ನಲಾಗಿದೆ.

ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆ ಸಮೀಪಿಸುತ್ತಿರುವುದರಿಂದ ಈಗ ಸಂಪುಟ ವಿಸ್ತರಣೆಯನ್ನು ಮಾತ್ರ ಮಾಡಿ ಮುಂದಿನ ಫೆಬ್ರುವರಿಯಲ್ಲಿ ಸಂಪುಟ ಪುನರ್‌ರಚನೆ ಮಾಡುವುದಾಗಿ ಸಿದ್ದರಾಮಯ್ಯ ಸೋನಿಯಾ ಗಾಂಧಿ ಅವರಿಗೆ ತಿಳಿಸಿದರು ಎಂದು ಮೂಲಗಳು ಹೇಳಿವೆ.

ಇದಲ್ಲದೆ ಅವರು ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳುವ ಶಾಸಕರ ಪಟ್ಟಿಯನ್ನೂ ನೀಡಿದರು ಎನ್ನಲಾಗಿದೆ. ಪರಮೇಶ್ವರ್‌ ಅವರಲ್ಲದೆ ಎ.ಮಂಜು, ವಿನಯ್‌ ಕುಲಕರ್ಣಿ, ಕಾಗೋಡು ತಿಮ್ಮಪ್ಪ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದರು ಎನ್ನಲಾಗಿದೆ.
ಮಾಹಿತಿ ತಂತ್ರಜ್ಞಾನ ಸಚಿವ ಎಸ್‌.ಆರ್‌.ಪಾಟೀಲ್‌ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಲು ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರನ್ನು ವಿಧಾನ ಸಭೆ ಅಧ್ಯಕ್ಷರನ್ನಾಗಿ ನೇಮಿಸುವುದಕ್ಕೂ ಮುಖ್ಯಮಂತ್ರಿ ಸಲಹೆ ನೀಡಿದರು ಎನ್ನಲಾಗಿದೆ.

ಜಯಚಂದ್ರ ಅವರು ಸಚಿವ ಸ್ಥಾನದಲ್ಲಿಯೇ ಮುಂದುವರಿಯುವ ಬಯಕೆ ಹೊಂದಿದ್ದರೂ ಮುಖ್ಯಮಂತ್ರಿ ಜಯಚಂದ್ರ ಮನ ಒಲಿಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರೊಂದಿಗೆ ಬುಧವಾರ ಇನ್ನೊಂದು ಸುತ್ತಿನ ಮಾತುಕತೆ ನಡೆಸುವಂತೆ ಸೋನಿಯಾ ಗಾಂಧಿ ಅವರು ದಿಗ್ವಿಜಯ್‌ ಸಿಂಗ್‌ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಪರಮೇಶ್ವರ ಅವರು ಸಚಿವ ಸಂಪುಟ ಸೇರಲು ನಿರಾಕರಿಸಿದರೆ ಸಂಪುಟ ಪುನರ್ ರಚನೆ ಪಂಚಾಯ್ತಿ ಚುನಾವಣೆ ಮುಗಿಯುವವರೆಗೆ ಮುಂದಕ್ಕೆ ಹೋಗಲಿದೆ.

ಸಿ.ಎಂ ಬೆಂಬಲಕ್ಕೆ ಹೈಕಮಾಂಡ್
ಉಪ ಮುಖ್ಯಮಂತ್ರಿ ಸ್ಥಾನ ತಮಗೆ ಸಿಗಲೇಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹಟ ಹಿಡಿದಿದ್ದರೂ, ಅದಕ್ಕೆ ಸೊಪ್ಪು ಹಾಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಕ್ಕೆ ಕಾಂಗ್ರೆಸ್‌ ವರಿಷ್ಠರು ನಿಂತಿದ್ದಾರೆ.

‘ಸಂಪುಟದ ವಿಸ್ತರಣೆ ಅಥವಾ ಪುನರ್‌ ರಚನೆ ಮುಖ್ಯಮಂತ್ರಿಯ ಪರಮಾಧಿಕಾರ. ಮಧ್ಯಪ್ರದೇಶದ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಾನು ಸ್ವತಂತ್ರವಾಗಿ ಸಂಪುಟ ಸಚಿವರ ನೇಮಕ ಮಾಡಿಕೊಳ್ಳುತ್ತಿದ್ದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ದಿಗ್ವಿಜಯ್ ಸಿಂಗ್ ಸುದ್ದಿಗಾರರ ಬಳಿ ಹೇಳಿದರು.

‘ನಿಮಗೆ ಇದ್ದಂತಹ ಸ್ವಾತಂತ್ರ್ಯ ಸಿದ್ದರಾಮಯ್ಯ ಅವರಿಗೂ ಇದೆಯೇ’ ಎಂಬ ಪ್ರಶ್ನೆಗೆ, ‘ಖಂಡಿತ ಇದೆ. ಕರ್ನಾಟಕದಲ್ಲಿ ನಿಗಮ ಮತ್ತು ಮಂಡಳಿಗಳಿಗೆ ಈಚೆಗೆ ನೇಮಕಾತಿ ಮಾಡುವಾಗ, ಮುಖ್ಯಮಂತ್ರಿ ನೀಡಿದ ಶಿಫಾರಸಿಗೆ ಎಐಸಿಸಿ ಮೂವತ್ತು ನಿಮಿಷಗಳಲ್ಲಿ ಅನುಮೋದನೆ ನೀಡಿತ್ತು’ ಎಂದು ಉತ್ತರಿಸಿದರು.

‘ಸಿದ್ದರಾಮಯ್ಯ ಅವರು ಸಂಪುಟ ಪುನರ್‌ ರಚಿಸುತ್ತಾರೋ, ವಿಸ್ತರಿಸುತ್ತಾರೋ’ ಎಂದು ಕೇಳಿದಾಗ, ‘ಪರಿಶೀಲನಾ ಕಾರ್ಯ ನಡೆದಿದೆ. ಏನಾಗುತ್ತದೆ ನೋಡೋಣ. ಈ ಕೆಲಸ ಬೇಗ ಪೂರ್ಣಗೊಳ್ಳುತ್ತದೆ’ ಎಂದು ಉತ್ತರಿಸಿದರು.

ಕರ್ನಾಟಕ ಕಾಂಗ್ರೆಸ್ಸಿನ ಕೆಲವರು ಸಿದ್ದರಾಮಯ್ಯ ಅವರ ಬದಲು ಬೇರೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಬೇಡಿಕೆ ಇಟ್ಟಿರುವ ಬಗ್ಗೆ ಕೇಳಿದಾಗ, ‘ಹುದ್ದೆ ಖಾಲಿ ಇಲ್ಲ’ ಎಂದು ದಿಗ್ವಿಜಯ್ ತಿರುಗೇಟು ನೀಡಿದರು.

Write A Comment