. ಬಹರೈನ್ ; ದ್ವೀಪದ ಅನಿವಾಸಿ ಬಂಟರ ಸಂಘಟನೆಯಾದ “ಬಂಟ್ಸ್ ಬಹರೈನ್ ” ” ವನಸ್ ತೆನಸ್ ” ಎನ್ನುವ ಬ್ರಹತ್ ಖಾದ್ಯೋತ್ಸವವನ್ನು ಇಲ್ಲಿನ ಇಂಡಿಯನ್ ಕ್ಲಬ್ಬಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಅದಕ್ಕೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ .
ಈ ಕಾರ್ಯಕ್ರಮವು ಇದೆ ಅಕ್ಟೋಬರ್ ತಿಂಗಳ 30 ನೇ ತಾರೀಖಿನ ಶುಕ್ರವಾರ ಸಂಜೆ 5 ಘಂಟೆಗೆ ಪ್ರಾರಂಭವಾಗಲಿದ್ದು ಸಮುದಾಯದ ಮಹಿಳೆಯರು ಮನೆಯಲ್ಲಿಯೇ ತಯಾರಿಸಲಿರುವ ಸಸ್ಯಾಹಾರಿ , ಮಾಂಸಹಾರಿ ಆಹಾರ ಪದಾರ್ಥಗಳು ಹಾಗು ಸಿಹಿತಿನಿಸುಗಳು ಪ್ರಧಾನ ಆಕರ್ಷಣೆಯಾಗಿರುತ್ತದೆ . ತಾಯ್ನಾಡಿನಲ್ಲೂ ಅಪರೂಪವೆನಿಸುವ ಆಹಾರಪದಾರ್ಥಗಳೂ ಸೇರಿದಂತೆ ಸುಮಾರು 100 ಕ್ಕೂ ಹೆಚ್ಚಿನ ಆಹಾರ ಪದಾರ್ಥಗಳು ಹಾಗು ಸಿಹಿತಿನಿಸುಗಳು ಪ್ರದರ್ಶನದಲ್ಲಿರುವುದು ಮಾತ್ರವಲ್ಲದೆ ಇವುಗಳನ್ನು ಸವಿಯಬಹುದಾಗಿದೆ . ಈ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಲು “ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ” ” ಉಳಿದವರು ಕಂಡಂತೆ ” ಮುಂತಾದ ಚಿತ್ರಗಳ ತಮ್ಮ ವಿಭಿನ್ನ ನಿರ್ದೇಶನ ಹಾಗು ನಟನೆಯಿಂದ ಕನ್ನಡಿಗರ ಮನೆಮಾತಾಗಿರುವ ಕನ್ನಡ ಚಲನ ಚಿತ್ರ ರಂಗದ ಭರವಸೆ ಮೂಡಿಸಿರುವ ಪ್ರತಿಭಾವಂತ ಯುವ ನಟ ,ನಿರ್ದೇಶಕ ರಕ್ಷಿತ್ ಶೆಟ್ಟಿ ಯವರು ವಿಶೇಷವಾಗಿ ದ್ವೀಪಕ್ಕೆ ಆಗಮಿಸಿ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಿರುವರು . ಬಂಟ ಸಮುದಾಯದ ಹೆಮ್ಮೆಯ ಕಲಾವಿದ ನಾಡಿನ ಖ್ಯಾತ ಜಾದುಗಾರ ವಿಕ್ರಮ್ ಜಾದುಗಾರ್ ರವರು ತಮ್ಮ ಕಲಾ ಪ್ರದರ್ಶನವನ್ನು ನೀಡಿ ನೆರೆದವರನ್ನು ರಂಜಿಸಲಿದ್ದಾರೆ . ಬಂಟ ಸಮುದಾಯದ ಪ್ರತಿಭಾವಂತ ನ್ರತ್ಯ ಪಟುಗಳು ವೈವಿಧ್ಯಮಯ ನ್ರತ್ಯ ಪ್ರದರ್ಶನವನ್ನು ನೀಡಲಿರುವರು .
ಶ್ರೀ ಜಗನ್ನಾಥ್ ಶೆಟ್ಟಿ ಯವರು ಪ್ರಸಕ್ತ ಸಾಲಿನ “ಬಂಟ್ಸ್ ಬಹರೈನ್” ಅಧ್ಯಕ್ಷರಾಗಿ ಸಾರಥ್ಯವನ್ನು ವಹಿಸಿದ್ದು ,ಇವರ ನೇತ್ರತ್ವದಲ್ಲಿ ಇದಾಗಲೇ ಅನೇಕ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿವೆ . ” ವನಸ್ -ತೆನಸ್ ” ಕಾರ್ಯಕ್ರಮಕ್ಕ್ಕೆ ಪ್ರವೇಶ ಉಚಿತವಾಗಿದ್ದು ಕಾರ್ಯಕ್ರಮದ ಬಗೆಗಿನ ಹೆಚ್ಚಿನ ವಿವರಗಳಿಗಾಗಿ ಶ್ರೀ ಜಗನ್ನಾಥ್ ಶೆಟ್ಟಿ ಯವರನ್ನು ದೂರವಾಣಿ ಸಂಖ್ಯೆ 00973-39739900 ಮುಖೇನ ಸಂಪರ್ಕಿಸಬಹುದಾಗಿದೆ .
ವರದಿ-ಕಮಲಾಕ್ಷ ಅಮೀನ್


