-ಮೃತ್ಯುಂಜಯ ಬೋಸ್
ಮುಂಬೈ: ದೇಶದ ಚಿತ್ರನಗರಿ ಚೇಂಬೂರಿನ ತಿಲಕ್ ನಗರದ ಚಿತ್ರ ಮಂದಿರಗಳ ಮುಂದೆ 70ರ ದಶಕದಲ್ಲಿ ಬ್ಲ್ಯಾಕ್ ಟಿಕೆಟ್ ಮಾರಾಟ ಮಾಡುತ್ತಿದ್ದ ಕಪ್ಪನೆಯ ಕುಳ್ಳಗಿನ ವ್ಯಕ್ತಿ ದೇಶದ ನಂಬರ್ 2 ಡಾನ್ ಆಗಿ ಬೆಳೆಯುತ್ತಾನೆ ಎಂದು ಬಹುಶಃ ಯಾರೂ ಊಹಿಸಿರಲಿಲ್ಲ.
ಮುಂಬೈ ಮಹಾನಗರದ ಮಧ್ಯಮ ವರ್ಗದ ಮರಾಠಿ ಕುಟುಂಬದಲ್ಲಿ ಜನಿಸಿದ ರಾಜೇಂದ್ರ ಸದಾಶಿವ ನಿಕಾಲಜೆ ಶಾಲೆ ಮೆಟ್ಟಿಲು ಹತ್ತಿದ್ದಕ್ಕಿಂತ ಪೊಲೀಸ್ ಠಾಣೆಗಳ ಮೆಟ್ಟಿಲೇರಿದ್ದೇ ಹೆಚ್ಚು.
70ರ ದಶಕದಲ್ಲಿ ಚೇಂಬೂರ್ ಸುತ್ತಮುತ್ತಲ ಪ್ರದೇಶಗಳಲ್ಲಿ ತಮಿಳುನಾಡು ಮೂಲದ ರಾಜನ್ ನಾಯರ್ ಅಲಿಯಾಸ್ ಬಡಾ ರಾಜನ್ ತನ್ನದೇ ಗ್ಯಾಂಗ್ ಕಟ್ಟಿಕೊಂಡು ಹೆಸರು ಮಾಡಿದ್ದ. ಆತನ ಜತೆ ಸೇರಿದ ರಾಜೇಂದ್ರ ‘ಛೋಟಾ ರಾಜನ್’ ಎಂದು ಹೆಸರುವಾಸಿಯಾದ.
ಬಡಾ ರಾಜನ್ ಮರಣದ ನಂತರ ತಮಿಳುನಾಡು ಮೂಲದ ಮತ್ತೊಬ್ಬ ಡಾನ್ ವರದರಾಜನ್ ಮೊದಲಿಯಾರ್ ಅಲಿಯಾಸ್ ವರದ್ ಭಯ್ಯಾ ಸ್ನೇಹ ಕುದುರಿಸಿದ. ಜತೆಗೆ ಅರುಣ್ ಗವಳಿ ತಂಡದಲ್ಲೂ ಓಡಾಡಿಕೊಂಡಿದ್ದ.
ಹೊಸ ಪಾತಕಿ ಉದಯ: ಮುಂಬೈ ಭೂಗತ ಜಗತ್ತನ್ನು ದಶಕಗಳ ಕಾಲ ಆಳಿದ ಹಾಜಿ ಮಸ್ತಾನ್, ಕರಿಂ ಲಾಲಾ ಮರಣದ ನಂತರ 80ರ ದಶಕದಲ್ಲಿ ದಾವೂದ್ ಇಬ್ರಾಹಿಂ ಎಂಬ ಮತ್ತೊಂದು ಹೆಸರು ಭೂಗತ ಲೋಕದಲ್ಲಿ ಕೇಳಿ ಬರತೊಡಗಿತ್ತು.
ಗವಳಿ ಗ್ಯಾಂಗ್ನಿಂದ ಹೊರಬಿದ್ದ ರಾಜನ್, ನೇರವಾಗಿ ಸೇರಿದ್ದು ದಾವೂದ್ ತಂಡವನ್ನು. ಆಗ ಕರೀಂ ಲಾಲಾ ಸಹೋದರನ ಮಗ ಸಮದ್ ಖಾನ್ ದಾವೂದ್ನ ಆಪ್ತನಾಗಿದ್ದ. ಆತನ ಹತ್ಯೆಯ ಬಳಿಕ ರಾಜನ್, ದಾವೂದ್ಗೆ ಮತ್ತಷ್ಟು ಹತ್ತಿರನಾದ.
ದಾವೂದ್ ಸಹೋದರ ನೂರ್ ಮೂಲಕ ಛೋಟಾ ಶಕೀಲ್ ಹಾಗೂ ಅಬು ಸಲೇಂ ದಾವೂದ್ಗೆ ಹತ್ತಿರವಾಗ ತೊಡಗಿದ್ದರು. ಇದರಿಂದ ಅಸಮಾಧಾನದಿಂದ ಕುದಿಯುತ್ತಿದ್ದ ರಾಜನ್ ಮಾನಸಿಕವಾಗಿ ಆತನಿಂದ ದೂರವಾಗುತ್ತಲ್ಲಿದ್ದ.
ಬಾಬ್ರಿ ಮಸೀದಿ ಧ್ವಂಸ ಹಾಗೂ 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ದಾವೂದ್ ಮತ್ತು ಛೋಟಾ ರಾಜನ್ ನಡುವಿನ ಸಂಬಂಧಕ್ಕೆ ಹುಳಿ ಹಿಂಡಿದವು. ಅಲ್ಲಿಂದ ಹೊರಬಿದ್ದ ಆತ ತನ್ನದೇ ತಂಡ ಕಟ್ಟ ತೊಡಗಿದ.
1995ರ ವೇಳೆಗೆ ಛೋಟಾ ರಾಜನ್ ‘ಹಿಂದೂ ಡಾನ್’ ಎಂದು ತನ್ನನ್ನು ತಾನು ಬಿಂಬಿಸಿಕೊಂಡಿದ್ದ. ‘ದೇಶಭಕ್ತ ಡಾನ್’ ಎಂದು ಕರೆದುಕೊಂಡು ಭಾರತೀಯರ ಅನುಕಂಪಗಳಿಸಲು ಯತ್ನಿಸಿದ್ದ.
ನಂ 2 ಡಾನ್ ಹತ್ಯೆ ಯತ್ನ: ದಾವೂದ್ ವೈರತ್ವ ಕಟ್ಟಿಕೊಂಡ ನಂತರ ರಾಜನ್, ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ತನ್ನ ಸಾಮ್ರಾಜ್ಯ ಕಟ್ಟಿಕೊಂಡಿದ್ದ.
ದೂರದ ಬ್ಯಾಂಕಾಕ್ನಲ್ಲಿ ನೆಲೆಸಿದ್ದ ರಾಜನ್ ಮೇಲೆ 2000ರಲ್ಲಿ ಹತ್ಯೆ ಯತ್ನ ನಡೆದಿತ್ತು. ಶಕೀಲ್ ಎಂಜಿನಿಯರ್ ನಡೆಸಿದ ದಾಳಿಯಲ್ಲಿ ರಾಜನ್ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದ. ಆತನ ಮತ್ತೊಬ್ಬ ಸಹಚರ ರೋಹಿತ್ ವರ್ಮಾ ಗುಂಡೇಟಿಗೆ ಬಲಿಯಾಗಿದ್ದ.
ಗುಂಡೇಟಿನಿಂದ ಗಾಯಗೊಂಡಿದ್ದ ರಾಜನ್ ಬ್ಯಾಂಕಾಕ್ ಆಸ್ಪತ್ರೆಯಿಂದ ಸಿನಿಮೀಯ ರೀತಿಯಲ್ಲಿ ಪಾರಾಗಿದ್ದ.
ಭಾರತದ ಸಂಸ್ಥೆಗಳಿಗೆ ಮಾಹಿತಿ: ಭಾರತದ ಬೇಹುಗಾರಿಕಾ ಸಂಸ್ಥೆಗಳಾದ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (ರಾ), ಜಾಗೃತ ದಳಗಳಿಗೆ ದಾವೂದ್ ಚಟುವಟಿಕೆಗಳ ಬಗ್ಗೆ ಆತ ಆಗಾಗ ಅನೇಕ ರಹಸ್ಯ ಮಾಹಿತಿ ರವಾನಿಸುತ್ತಿದ್ದ.
ಭಾರತದ ಅನೇಕ ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಜತೆ ಆತನಿಗೆ ನಿಕಟ ಸಂಪರ್ಕವಿತ್ತು ಎನ್ನಲಾಗಿದೆ. ಅದನ್ನು ಬಳಸಿಕೊಂಡು ಆತ ದಾವೂದ್ನ ಅನೇಕ ಸಹಚರರನ್ನು ಮುಗಿಸುವಲ್ಲಿಯೂ ಯಶಸ್ವಿಯಾಗಿದ್ದ.
ಕೈಕೊಟ್ಟ ಆರೋಗ್ಯ: ವಯಸ್ಸಾಗುತ್ತಾ ರಾಜನ್ ಆರೋಗ್ಯ ಕೈಕೊಟ್ಟಿತು. ದಾವೂದ್ ಸುಮ್ಮನೆ ಕೂಡುವುದಿಲ್ಲ ಎಂದು ಆತನಿಗೆ ಗೊತ್ತಿತ್ತು. ಛೋಟಾ ಶಕೀಲ್ ತನ್ನ ಕೊಲೆಗೆ ಯತ್ನಿಸುತ್ತಿದ್ದಾನೆ ಎಂಬ ಸತ್ಯವೂ ಗೊತ್ತಿದ್ದ ಕಾರಣ ಆಸ್ಟ್ರೇಲಿಯಾ, ಸಿಂಗಪುರ. ಮಲೇಷ್ಯಾ, ಇಂಡೊನೇಷ್ಯಾ ಮುಂತಾದ ಸುರಕ್ಷಿತ ಸ್ಥಳಗಳಿಗೆ ಅಡಗುತಾಣಗಳನ್ನು ಆಗಾಗ ಬದಲಿಸುತ್ತಿದ್ದ.
ಕುಸಿಯುತ್ತಿದ್ದ ಸಾಮ್ರಾಜ್ಯ: ಆತನ ನೆಚ್ಚಿನ ಹಾಗೂ ನಂಬುಗೆಯ ಬಂಟರು ಒಬ್ಬರಾದ ನಂತರ ಒಬ್ಬರು ಆತನನ್ನು ತೊರೆದು ಹೋದರು. ಇತ್ತ ಮುಂಬೈನಲ್ಲಿ ಕಟ್ಟಿಕೊಂಡಿದ್ದ ಸಾಮ್ರಾಜ್ಯ ಕೂಡ ಕುಸಿಯತೊಡಗಿತ್ತು. ಮುಂಬೈನಲ್ಲಿ ಆತನ ಸಹಚರರು ಎದುರಾಳಿ ಗ್ಯಾಂಗ್ ಜತೆ ಕೈ ಜೋಡಿಸಿ ಮಾಹಿತಿ ರವಾನಿಸುತ್ತಿದ್ದರು.
ದಾವೂದ್ನ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದ ಶರದ್ ಶೆಟ್ಟಿಯನ್ನು ದುಬೈ ಇಂಡಿಯಾ ಕ್ಲಬ್ನಲ್ಲಿ 2003ರಲ್ಲಿ ಛೋಟಾ ರಾಜನ್ ಬಂಟರು ಹೊಡೆದುರುಳಿಸಿದ್ದು ಇಬ್ಬರು ಡಾನ್ಗಳ ಸಂಘರ್ಷಕ್ಕೆ ದೊಡ್ಡ ತಿರುವು ನೀಡಿತು.
1993ರ ಮುಂಬೈ ಬಾಂಬ್ ಸ್ಫೋಟಕ್ಕೆ ದಾವೂದ್ಗೆ ನೆರವು ನೀಡಿದ ಕೆಲವರನ್ನು ರಾಜನ್ ಮುಗಿಸಿದ್ದ. ಕಳೆದ ಏಳು ವರ್ಷಗಳಿಂದ ಈಚೆಗೆ ಈತನ ಗ್ಯಾಂಗ್ ಸಂಪೂರ್ಣ ಒಡೆದು ಹೋಗಿತ್ತು. ಇದರಿಂದ ಆತನ ಶಕ್ತಿಯೂ ಕುಂದಿತ್ತು. ಆದರೂ, ಅಪಹರಣ, ಹಣ ವಸೂಲಿ ದಂಧೆ ಯಾವ ಅಡೆತಡೆಗಳಿಲ್ಲದೆ ಮುಂದುವರೆದಿದ್ದವು.
ಗುಜರಾತನಲ್ಲೂ ಪ್ರಕರಣ: ಇಂಡೊನೇಷ್ಯಾ ಪೊಲೀಸರು ಬಂಧಿಸಿ ರುವ ಛೋಟಾ ರಾಜನ್, ಎಂಟು ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರಿಗೂ ಬೇಕಾಗಿದ್ದಾನೆ. 8 ಪ್ರಕರಣಗಳ ಸಂಪೂರ್ಣ ವಿವರಗಳನ್ನು ಪೊಲೀಸರು ಕ್ರೋಡೀಕರಿಸುತ್ತಿದ್ದಾರೆ.
ಬಲೆಗೆ ಬಿದ್ದ ಪಾತಕಿಗಳು: ಒಬ್ಬರಾದ ನಂತರ ಒಬ್ಬರಂತೆ ಪಾತಕಿಗಳು ಬಲೆಗೆ ಬೀಳುತ್ತಿದ್ದು, ಅಬು ಸಲೇಂ, ಬನ್ನಂಜೆ ರಾಜನ ನಂತರ ಛೋಟಾ ರಾಜನ್ ಬಂಧನವಾಗಿದೆ. ಆದರೆ, ದಾವೂದ್ ಸೆರೆ ಯಾವಾಗ ಎನ್ನುವ ಪ್ರಶ್ನೆ ಹುಟ್ಟಿದೆ.