ಶ್ರೀನಗರ: ಭಾರತದ ವಿರುದ್ಧ ನೇರವಾಗಿ ಯುದ್ಧ ಮಾಡಲಾಗದ ಪಾಕಿಸ್ತಾನ ಇದೀಗ ಪರೋಕ್ಷವಾಗಿ ಯುದ್ಧ ಮಾಡಲು ಮುಂದಾಗಿದ್ದು, ಎಂಜಿನಿಯರ್ ಭಯೋತ್ಪಾದನೆ ಮೂಲಕ ಭಾರತದಲ್ಲಿ ಹಿಂಸೆ ಹರಡಲು ಯತ್ನಿಸುತ್ತಿದೆ.
ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ಬರ ಶಂಕೆಯಂತೆ ಭಾರತದ ಪ್ರಮುಖ ಗಡಿಭಾಗಗಳಾದ ಕಥುವಾ ಮತ್ತು ಸಾಂಬಾ ಸೆಕ್ಟರ್ ನಲ್ಲಿ ಪಾಕಿಸ್ತಾನ ತನ್ನ ಎಂಜಿನಿಯರ್ ಭಯೋತ್ಪಾದನೆ ಹರಡಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಸೇನೆಯ ಮಾಜಿ ಅಧಿಕಾರಿ ಜನರಲ್ ಗೋವರ್ಧನ್ ಸಿಂಗ್ ಮತ್ತು ಮಾಜಿ ಕೇಂದ್ರ ಸಚಿವ ಗುಲ್ ಚೈನ್ ಸಿಂಗ್ ಚರಕ್ ಅವರು, ಗಡಿ ಭಾಗದಲ್ಲಿ ಎಂಜಿನಿಯರ್ ಭಯೋತ್ಪಾದನೆ ಕುರಿತ ಕುರುಹುಗಳು ಲಭ್ಯವಾಗುತ್ತಿದ್ದು, ಭಾರತದ ಗಡಿ ಭಾಗದಲ್ಲಿ ಅಶಾಂತಿ ಪಸರಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಭಾರತದ ಗಡಿ ಪ್ರದೇಶದಲ್ಲಿರುವ ಜನರಲ್ಲಿ ಎಚ್ಚರಿಕೆ ಮೂಡಿಸುವ ನಿಟ್ಟಿನಲ್ಲಿ ಭಾರತೀಯ ಸೇನೆ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಇಂದು “ಜಾಗರೂಕ್ ಹಿಂದೂಸ್ತಾನಿ ಬಾರ್ಡರ್ ಏರಿಯಾ ಕ್ರಿಕೆಟ್ ಲೀಗ್” ಸರಣಿಯ ಫೈನಲ್ ಪಂದ್ಯದ ಸಂದರ್ಭದಲ್ಲಿ ಗೋವರ್ಧನ್ ಸಿಂಗ್ ಮತ್ತು ಗುಲ್ ಚೈನ್ ಸಿಂಗ್ ಚರಕ್ ಅವರು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, “ಈ ಹಿಂದೆಯೂ ಕೂಡ ಪಾಕಿಸ್ತಾನದ ಕೆಲವರು ಭಾರತದ ಗಡಿಯಲ್ಲಿ ಎಂಜಿನಿಯರ್ ಭಯೋತ್ಪಾದನೆ ಹರಡಲು ಯತ್ನಿಸಿದ್ದರು. ಬಹುಶಃ ಇದು ಭವಿಷ್ಯದಲ್ಲಿಯೂ ಮುಂದುವರೆಯುತ್ತದೆ. ಹೀಗಾಗಿ ಇಂತಹ ಎಂಜಿನಿಯರಿಂಗ್ ವಿನ್ಯಾಸಗಳ ಕುರಿತು ಎಚ್ಚರಿಕೆಯಿಂದ ಇರಬೇಕು. ಗಡಿಭಾಗದಲ್ಲಿ ನೆಲೆಸಿರುವ ಸೇನಾ ಕಮಾಂಡರ್ ಗಳು ಸೇರಿದಂತೆ ಸ್ಥಳೀಯರು ಈ ಬಗ್ಗೆ ಎಚ್ಚರದಿಂದ ಇದ್ದು ಪಾಕಿಸ್ತಾನದ ಪ್ರಯತ್ನವನ್ನು ವಿಫಲ ಮಾಡಬೇಕು ಎಂದು ಗೋವರ್ಧನ್ ಸಿಂಗ್ ಹೇಳಿದರು.
“ಜಾಗರೂಕ್ ಹಿಂದೂಸ್ತಾನಿ ಬಾರ್ಡರ್ ಏರಿಯಾ ಕ್ರಿಕೆಟ್ ಲೀಗ್” ಸರಣಿ ಕೇವಲ ಮನರಂಜನೆಗಾಗಿ ಅಲ್ಲ. ಬದಲಿಗೆ ಗಡಿ ಪ್ರದೇಶದಲ್ಲಿರುವ ಮಕ್ಕಳಲ್ಲಿ ದೇಶಪ್ರೇಮ ಮತ್ತು ಸೈನಿಕರ ತ್ಯಾಗ-ಬಲಿದಾನ ಕುರಿತು ಅರಿವು ಮೂಡಿಸಲು ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬ್ರಿಗೇಡಿಯರ್ ರಾಜೀಂದರ್ ಸಿಂಗ್ ಹೇಳಿದರು.