ರಾಷ್ಟ್ರೀಯ

ಬಿಹಾರ್ ಜಂಗಲ್‌ರಾಜ್‌ ಇದ್ರೆ, ಹರಿಯಾಣಾದಲ್ಲಿ ಮಂಗಲ್ ರಾಜ್ ಇದೆಯೇ?: ನಿತೀಶ್ ಕುಮಾರ್

Pinterest LinkedIn Tumblr

nitishಮೀನಾಪುರ್: ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ನಾಯಿ ಹೇಳಿಕೆ ಹಾಗೂ ಹರಿಯಾಣದಲ್ಲಿ ಇಬ್ಬರು ದಲಿತರ ಹತ್ಯೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಬಿಹಾರ್ ಸಿಎಂ ನಿತೀಶ್ ಕುಮಾರ್, ಕೆಲವರು ಬಿಹಾರ್ ರಾಜ್ಯವನ್ನು ಜಂಗಲ್ ರಾಜ್ ಎಂದು ಕರೆಯುತ್ತಿದ್ದರು. ಆದರೆ, ಈ ಘಟನೆಗಳು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿಯೇ ಮಂಗಲ್ ರಾಜ್‌‌ನಲ್ಲಿ ನಡೆದಿದೆ ಎಂದು ಲೇವಡಿ ಮಾಡಿದ್ದಾರೆ.

ಹರಿಯಾಣಾದ ಮತದಾರರು ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸಿ ಸರಕಾರ ರಚಿಸಲು ಅವಕಾಶ ನೀಡಿದ್ದಾರೆ. ಆದರೆ, ರಾಜ್ಯದಲ್ಲಿ ದಲಿತರನ್ನು ಜೀವಂತವಾಗಿ ದಹಿಸಲಾಗುತ್ತಿದೆ. ಒಂದು ವೇಳೆ ಬಿಹಾರ್‌ನಲ್ಲಿ ಜಂಗಲ್ ರಾಜ್ ಇದ್ದರೆ ಹರಿಯಾಣಾದಲ್ಲಿ ಮಂಗಲ್ ರಾಜ್ ಇದೆಯೇ ಎಂದು ತಿರುಗೇಟು ನೀಡಿದ್ದಾರೆ.

ನಾಯಿಯ ಮೇಲೆ ಕಲ್ಲು ಹೊಡೆದರೂ ಕೂಡಾ ಕೇಂದ್ರ ಸರಕಾರದ ಮೇಲೆ ಆರೋಪ ಹೊರಿಸಲಾಗುತ್ತದೆ ಎಂದು ಕೇಂದ್ರ ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ. ಇಬ್ಬರು ದಲಿತ ಮಕ್ಕಳ ಹತ್ಯೆಯನ್ನು ನಾಯಿಗೆ ಕಲ್ಲು ಹೊಡೆಯುವ ಬಗ್ಗೆ ಹೋಲಿಸುತ್ತಿರುವ ವ್ಯಕ್ತಿಗಳ ನಡತೆ ಬಗ್ಗೆ ನಿಮಗೆ ಯೋಚಿಸಲು ಸಾಧ್ಯವಿಲ್ಲವೇ ಎಂದು ಮತದಾರರನ್ನು ಪ್ರಶ್ನಿಸಿದ್ದಾರೆ.

ಪ್ರಧಾನ ಮಂತ್ರಿ ಡಿಎನ್‌ಎ ಹೇಳಿಕೆ ವಿರುದ್ಧ ವಾಗ್ದಾಳಿ ಮುಂದುವರಿಸಿದ ನಿತೀಶ್, ನಿಮ್ಮ ಡಿಎನ್‌ಎ ಸರಿಯಾಗಿಲ್ಲ ಎನ್ನುವು ಕಾರಣಕ್ಕೆ ಮತದಾರರು ನಿಮ್ಮನ್ನು ತಿರಸ್ಕರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಮುಜಾಫರ್‌ಪುರ್‌ನಲ್ಲಿ ಪ್ರಧಾನಿ ನನ್ನ ಡಿಎನ್‌ಎ ಸರಿಯಾಗಿಲ್ಲವೆಂದು ಹೇಳಿದ್ದಾರೆ. ಒಂದು ವೇಳೆ ನನ್ನ ಡಿಎನ್‌ಎ ಸರಿಯಾಗಿರದಿದ್ದಲ್ಲಿ 10 ವರ್ಷಗಳ ಅವಧಿಗೆ ನನ್ನನ್ನು ಮುಖ್ಯಮಂತ್ರಿಯಾಗಿ ಯಾಕೆ ಮುಂದುವರಿಸಲಾಯಿತು. ನನ್ನ ಡಿಎನ್‌ಎ ಕೂಡಾ ಇತರ ಬಿಹಾರಿಗಳಂತಿದೆ ಎಂದು ತಿರುಗೇಟು ನೀಡಿದ್ದಾರೆ.

Write A Comment