ರಾಷ್ಟ್ರೀಯ

ಆರೋಗ್ಯ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ವಿಫಲ: ‘ಲ್ಯಾನ್ಸೆಟ್’ ವೈದ್ಯಕೀಯ ನಿಯತಕಾಲಿಕದಿಂದ ಅಧ್ಯಯನ

Pinterest LinkedIn Tumblr

Modi___________ಹೊಸದಿಲ್ಲಿ, ಅ.23: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರವು ಅಧಿಕಾರಕ್ಕೆ ಬಂದಂದಿನಿಂದ ಆರೋಗ್ಯ ಕ್ಷೇತ್ರವನ್ನು ಉಪೇಕ್ಷಿಸಲಾಗಿದೆ ಎಂದು ಪ್ರಮುಖ ವೈದ್ಯಕೀಯ ನಿಯತಕಾಲಿಕ ‘ಲ್ಯಾನ್ಸೆಟ್’ ತೀವ್ರವಾಗಿ ಟೀಕಿಸಿದೆ.
ಮಧುಮೇಹ ಮತ್ತು ಹೃದಯದ ಸಮಸ್ಯೆಗಳಂತಹ ಅಸಾಂಕ್ರಾಮಿಕ ರೋಗಗಳ ತಡೆಯುವಿಕೆಗೆ ಸಾಕಷ್ಟು ಹಣ ವಿನಿಯೋಗ ಮಾಡಲು ಸರಕಾರವು ವಿಫಲವಾದಲ್ಲಿ, ದೊಡ್ಡ ದುರಂತ ಕಾದಿದೆ ಎಂದು ನಿಯತಕಾಲಿಕವು ಎಚ್ಚರಿಸಿದೆ.
ಜಾಗತಿಕ ಆರೋಗ್ಯ ತಜ್ಞರು ಬರೆದಿರುವ ಈ ಅಧ್ಯಯನ ವರದಿ ಇದೇ ಡಿಸೆಂಬರ್ 11ರಂದು ಪ್ರಕಟವಾಗಲಿದೆ. ಸಾಮೂಹಿಕ ಆರೋಗ್ಯ ಸೇವೆಗಳ ವಿಚಾರದಲ್ಲಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಲಾದ ಆಶ್ವಾಸನೆಯನ್ನು ಈಡೇರಿಸುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದಾರೆಂದು ನಿಯತಕಾಲಿಕವು ಟೀಕಿಸಿದೆ. ಭಾರತದ ಪಾಲಿಗೆ ಆರೋಗ್ಯ ಎಂಬುದು ರಾಷ್ಟ್ರೀಯ ಭದ್ರತೆಯಾಗಿದೆ. ಆದರೂ ಪ್ರಧಾನಿ ಮೋದಿಯವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ‘ಲ್ಯಾನ್ಸೆಟ್’ನ ಪ್ರಧಾನ ಸಂಪಾದಕ ರಿಚರ್ಡ್ ಹೊರ್ಟನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
‘ಕೇಂದ್ರ ಸರಕಾರದ ಬಳಿ ಯಾವುದೇ ಹೊಸ ನೀತಿಗಳು, ಯಾವುದೇ ಹೊಸ ಕಲ್ಪನೆಗಳು, ಯಾವುದೇ ಮಹತ್ವದ ಸಾರ್ವಜನಿಕ ಬದ್ಧತೆಗಳು ಕಾಣುತ್ತಿಲ್ಲ. ಬಹಳ ಮಹತ್ವದ ವಿಷಯವೆಂದರೆ, ಆರೋಗ್ಯ ಕ್ಷೇತ್ರಕ್ಕೆ ಯಾವುದೇ ಹಣಕಾಸು ಭರವಸೆಗಳು ಸಿಕ್ಕಿಲ್ಲ’ ಎಂದು ಹೊರ್ಟನ್ ತಿಳಿಸಿದ್ದಾರೆ.
ಮೋದಿಯವರು ಅಧಿಕಾರಕ್ಕೆ ಬಂದಂದಿನಿಂದ ಆರೋಗ್ಯ ಸೇವೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ದೇಶವು ಬಿಕ್ಕಟ್ಟಿನ ಅಂಚಿನಲ್ಲಿದೆ. ಪ್ರಧಾನಿಯವರು ಆರೋಗ್ಯ ಕ್ಷೇತ್ರವನ್ನು ಸಮರ್ಪಕವಾಗಿ ನಿರ್ವಹಿಸದೇ ಇದ್ದಲ್ಲಿ, ಏರಿಕೆಯಾಗುತ್ತಿರುವ ಜನಸಂಖ್ಯೆಯನ್ನು ಒಳಗೊಂಡ ಭಾರತದ ಅರ್ಥವ್ಯವಸ್ಥೆಯು ಸುಸ್ಥಿರವಾಗಲಾರದು ಎಂದು ಹೊರ್ಟನ್ ಹೇಳಿದ್ದಾರೆ.
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಬಂಡವಾಳ ಹೂಡಿಕೆಯ ಕೊರತೆ ಹಾಗೂ ಖಾಸಗಿ ಆರೋಗ್ಯ ಕ್ಷೇತ್ರದ ಅನಿಯಂತ್ರಿತ ಬೆಳವಣಿಗೆ -ಇವು ಭಾರತದ ಎರಡು ಮುಖ್ಯ ಸಮಸ್ಯೆಗಳಾಗಿವೆ ಎಂದು ಹೊರ್ಟನ್ ತಿಳಿಸಿದ್ದಾರೆ.
ಅನಿಯಂತ್ರಿತ ಖಾಸಗಿ ಕ್ಷೇತ್ರ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ನಡುವಣ ಅಸಮತೋಲನದಿಂದಾಗಿ ಬಹಳಷ್ಟು ಪ್ರಕರಣಗಳಲ್ಲಿ ಚಿಕಿತ್ಸೆಯ ಗುಣಮಟ್ಟ ಶೋಚನೀಯವಾಗಿದೆ. ದೇಶದ ಏರಿಕೆಯಾಗುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಹರಸಾಹಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ದೇಶವು ಪ್ರಸ್ತುತ ತನ್ನ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇಕಡ 1ರಷ್ಟನ್ನು ಮಾತ್ರ ಸಾರ್ವಜನಿಕ ಆರೋಗ್ಯ ಸೇವೆಗಳ ಮೇಲೆ ಖರ್ಚು ಮಾಡುತ್ತಿದೆ. ಈ ಮೊತ್ತವನ್ನು ಪ್ರಧಾನಿಯವರು ಹೆಚ್ಚಿಸಬೇಕೆಂದು ಹೊರ್ಟನ್ ಒತ್ತಾಯಿಸಿದ್ದಾರೆ.
ಮೋದಿಯವರು ತಮ್ಮ ವೈಯಕ್ತಿಕ ನಾಯಕತ್ವವನ್ನು ಬಳಸಿಕೊಂಡು ಸಾಮೂಹಿಕ ಆರೋಗ್ಯ ಸೌಲಭ್ಯಗಳನ್ನು ಜಾರಿಗೆ ತರಬೇಕು. ನವಜಾತ ಶಿಶುಗಳು ಮತ್ತು ತಾಯಂದಿರ ಅಕಾಲಿಕ ಸಾವಿನ ಪ್ರಮಾಣವನ್ನು ಕಡಿತಗೊಳಿಸಬೇಕು. ಅಸಾಂಕ್ರಾಮಿಕ ರೋಗಗಳ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

Write A Comment