ಹೊಸದಿಲ್ಲಿ,ಅ.23: ಕೇಂದ್ರ ಸಾಹಿತ್ಯ ಅಕಾಡಮಿ ಕೊನೆಗೂ ತನ್ನ ವೌನವನ್ನು ಮುರಿದಿದೆ. ಸಾಹಿತಿಗಳ ಮೇಲಿನ ದಾಳಿ ಘಟನೆಗಳನ್ನು ಶುಕ್ರವಾರ ಖಂಡಿಸಿರುವ ಅದು, ತಮ್ಮ ಪ್ರಶಸ್ತಿಗಳನ್ನು ವಾಪಸ್ ಪಡೆದುಕೊಳ್ಳುವಂತೆ ಸಾಹಿತಿಗಳನ್ನು ಆಗ್ರಹಿಸಿದೆ. ಇದಕ್ಕೂ ಮುನ್ನ ದೇಶಾದ್ಯಂತದಿಂದ ಆಗಮಿಸಿದ್ದ ಸಾಹಿತಿಗಳು ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಬಗ್ಗೆ ಅಕಾಡಮಿಯ ವೌನವನ್ನು ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಯನ್ನು ನಡೆಸಿದರು.
ಕನ್ನಡ ವಿದ್ವಾಂಸ ಎಂ.ಎಂ.ಕಲಬುರ್ಗಿಯವರ ಹತ್ಯೆಯನ್ನು ನಾವು ಖಂಡಿಸುತ್ತೇವೆ. ತಮ್ಮ ಪ್ರಶಸ್ತಿಗಳನ್ನು ವಾಪಸ್ ಮಾಡಿರುವ ಸಾಹಿತಿಗಳು ಅವುಗಳನ್ನು ಮರಳಿ ಪಡೆಯಬೇಕು ಮತ್ತು ಅಕಾಡಮಿಗೆ ರಾಜೀನಾಮೆ ಸಲ್ಲಿಸಿರುವವರು ತಮ್ಮ ಸ್ಥಾನಗಳಿಗೆ ಮರಳಬೇಕು ಎಂದು ನಾವು ಸರ್ವಾನುಮತದಿಂದ ನಿರ್ಧರಿಸಿದ್ದೇವೆ ಎಂದು ಸಾಹಿತ್ಯ ಅಕಾಡಮಿಯ ಕಾರ್ಯಕಾರಿ ಸದಸ್ಯ ಡಾ.ಕೃಷ್ಣಸ್ವಾಮಿ ನಾಚಿಮುತ್ತು ಅವರು ಹೇಳಿದರು. ಖ್ಯಾತ ಬರಹಗಾರರಾದ ಗೀತಾ ಹರಿಹರನ್ ಮತ್ತು ಕೇಕಿ ಎನ್.ದಾರುವಾಲಾ ನೇತೃತ್ವದ ಸಾಹಿತಿಗಳ ನಿಯೋಗವೊಂದು ಇಂದು ಬೆಳಗ್ಗೆ ಇಲ್ಲಿಯ ಕೇಂದ್ರ ಸಾಹಿತ್ಯ ಅಕಾಡಮಿಯ ಕಚೇರಿಗೆ ತೆರಳಿ ದೇಶಾದ್ಯಂತ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ವಿರೋಧಿಸಿ ಪ್ರತಿಭಟನಾರ್ಥ ಪ್ರಶಸ್ತಿಗಳನ್ನು ಮರಳಿಸುತ್ತಿರುವ ಸಾಹಿತಿಗಳನ್ನು ಅಕಾಡಮಿಯು ಬೆಂಬಲಿಸಬೇಕು ಎಂದು ಆಗ್ರಹಿಸಿತು.ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಿಯೋಗದ ಸದಸ್ಯರು ಕಲಬುರ್ಗಿ ಹತ್ಯೆ,ದಾದ್ರಿ ಹತ್ಯೆ ಮತ್ತು ಇಂತಹುದೇ ಇತರ ಘಟನೆಗಳ ಬಗ್ಗೆ ಅಕಾಡಮಿಯ ವೌನವನ್ನು ಪ್ರಶ್ನಿಸಿದರು.
ಸರಕಾರ ಮತ್ತು ಸರಕಾರದ ಬೆಂಬಲಿತ ವ್ಯಕ್ತಿಗಳು ಭಿನ್ನಾಭಿಪ್ರಾಯದ ಧ್ವನಿಗಳನ್ನು ವ್ಯವಸ್ಥಿತವಾಗಿ ದಮನಿಸುತ್ತಿರುವ ವಿರುದ್ಧ ಕಳೆದ ಎರಡು ತಿಂಗಳುಗಳಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಹಲವಾರು ಸಾಹಿತಿಗಳು ಮಾತನಾಡಿದ್ದಾರೆ. ವಿಕ್ರಂ ಸೇಠ್ ಅವರಂತಹ ಖ್ಯಾತ ಲೇಖಕರೂ ಈ ಸಾಹಿತಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸಾಹಿತಿಗಳ ಒಂದು ವರ್ಗವು ಪ್ರಶಸ್ತಿಗಳ ವಾಪಸಾತಿಯನ್ನು ವಿರೋಧಿಸಿದೆ. ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ವೌನವಾಗಿದ್ದ ಈ ಸಾಹಿತಿಗಳು ಆಷಾಢಭೂತಿಗಳೆಂದು ಅದು ಆರೋಪಿಸಿದೆ. 1984ರ ಸಿಖ್ ವಿರೋಧಿ ದಂಗೆಗಳ ಪ್ರಕರಣದ ಆರೋಪಿ ಮಾಜಿ ಕೇಂದ್ರ ಸಚಿವ ಜಗದೀಶ ಟೈಟ್ಲರ್ ಅವರಿಂದ ವಿಕ್ರಂ ಸೇಠ್ ಅವರು ಪ್ರಶಸ್ತಿ ಸ್ವಿಕರಿಸಿದ್ದನ್ನೂ ಅದು ಪ್ರಶ್ನಿಸಿದೆ.
ರಾಷ್ಟ್ರೀಯ