ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ಪೈಕಿ 2014ರಲ್ಲಿ ಆರು ಮಂದಿ ವಾದ ಮಂಡಿಸಿರುವ ಎಲ್ಲ ಪ್ರಕರಣಗಳು ಸೋಲು ಕಂಡಿವೆ. ಉಳಿದ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಆರೋಪಿಗಳಿಗೆ ಶಿಕ್ಷೆಯಾಗುವ ರೀತಿ ಪರಿಣಾಮಕಾರಿಯಾಗಿ ವಾದ ಮಂಡಿಸಿಲ್ಲ.
ವಿಶೇಷ ವರದಿ: ♦ ಸುನೀಲ್ ಕುಮಾರ್ ಮಿಂಡಿಗಲ್
ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಕಳೆದ ವರ್ಷ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಒಬ್ಬ ಅರೋಪಿಗೂ ಶಿಕ್ಷೆಯಾಗಿಲ್ಲ ಎಂಬ ಅಚ್ಚರಿಯ-ಆಘಾತಕಾರಿ ಸಂಗತಿ ಬಯಲಾಗಿದೆ.
2014ರಲ್ಲಿ ರಾಜ್ಯದಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯಗಳ ಕುರಿತು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲ್ವಿಚಾರಣೆ ಮತ್ತು ಬಲ ವರ್ಧನ ಸಮಿತಿಯು ನಡೆಸಿದ ಸಮೀಕ್ಷೆಯಿಂದ ಈ ಅಂಶವು ಬೆಳಕಿಗೆ ಬಂದಿದೆ.
2014ನೆ ಸಾಲಿನಲ್ಲಿ ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 1,950 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಒಬ್ಬ ಆರೋಪಿಗೂ ಶಿಕ್ಷೆಯಾಗಿಲ್ಲ. ಅಲ್ಲದೆ, ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂಬ ಸಂಗತಿ ವರದಿಯಿಂದ ಬಹಿರಂಗವಾಗಿದೆ.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ಪೈಕಿ 2014ರಲ್ಲಿ ಆರು ಮಂದಿ ವಾದ ಮಂಡಿಸಿರುವ ಎಲ್ಲ ಪ್ರಕರಣಗಳು ಸೋಲು ಕಂಡಿವೆ. ಉಳಿದ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಆರೋಪಿಗಳಿಗೆ ಶಿಕ್ಷೆಯಾಗುವ ರೀತಿ ಪರಿಣಾಮಕಾರಿಯಾಗಿ ವಾದ ಮಂಡಿಸಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿನ 30 ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಮೂರು ವರ್ಷಗಳಲ್ಲಿ 4,481ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ. ಅದರಲ್ಲಿ 841 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದಾರೆ. 48 ಪ್ರಕರಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗಿದೆ ಎಂಬ ಅಂಶವನ್ನು ವರದಿಯಲ್ಲಿ ಹೇಳಲಾಗಿದೆ.
2014ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆ.ಕೃಷ್ಣಮೂರ್ತಿ ಅವರು 30 ಪ್ರಕರಣಗಳಲ್ಲಿ ವಾದ ಮಂಡಿಸಿದ್ದು 29 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಎಸ್‌ಪಿಪಿ ಎಸ್.ಎಂ.ಬೆಳ್ಳಕ್ಕಿ ಅವರು ವಾದಿಸಿರುವ 10, ದಾವಣಗೆರೆಯ ಎಸ್.ಎ.ಹುದ್ದಾರ್ 11, ಕೊಡಗು ಜಿಲ್ಲೆ ಎ.ಪಿ.ಫಿರೋಝ್ ಖಾನ್ 16, ಉತ್ತರ ಕನ್ನಡ ಜಿಲ್ಲೆಯ ಡಿ.ಎ.ಬಂಡೇಕರ್ 8 ಹಾಗೂ ಉಡುಪಿ ಜಿಲ್ಲೆಯ ಟಿ.ಎಸ್.ಜೆತುರಿ 4 ಪ್ರಕರಣಗಳಲ್ಲಿ ವಾದ ಮಂಡಿಸಿದ್ದು, ಎಲ್ಲವೂ ಖುಲಾಸೆಯಾಗಿವೆ.
ಇನ್ನು ಕಲಬುರಗಿ ಜಿಲ್ಲೆಯ ಬಲಭೀಮ ಅವರು ವಾದಿಸಿರುವ 2 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾದರೆ, 126 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗಿದ್ದಾರೆ. ಅದೇ ರೀತಿ ಕೋಲಾರದ ರಂಗಸ್ವಾಮಿಯವರು ವಾದಿಸಿರುವ 2 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದ್ದು, 65 ಪ್ರಕರಣಗಳಲ್ಲಿ ಆರೋಪಿಗಳ ಪರವಾಗಿ ತೀರ್ಪು ಬಂದಿದೆ.
ತುಮಕೂರು, ರಾಮನಗರ, ರಾಯಚೂರು, ಮೈಸೂರು, ಚಿಕ್ಕಬಳ್ಳಾಪುರ ಸೇರಿದಂತೆ ಬಹುಪಾಲು ಜಿಲ್ಲೆಗಳ ಎಸ್‌ಪಿಪಿಗಳು ವಾದ ಮಂಡಿಸಿರುವ ಪ್ರಕರಣಗಳಲ್ಲಿ ಶೇ.90ರಷ್ಟು ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗಿರುವ ಆತಂಕಕಾರಿ ವಿಷಯ ವರದಿಯಲ್ಲಿದೆ.
ಸಮಿತಿಯು 1989ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಸಮೀಕ್ಷೆ ನಡೆಸಿದೆ. ಪ್ರತಿ ಜಿಲ್ಲೆಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಯಾವ ರೀತಿ ಪ್ರಕರಣಗಳನ್ನು ನಿಭಾಯಿಸಿದ್ದಾರೆ ಎಂಬ ಬಗ್ಗೆ ಅಂಕಿ ಅಂಶಗಳನ್ನು ಸಂಗ್ರಹಿಸಿದೆ. ಅಲ್ಲದೇ, ದೌರ್ಜನ್ಯ ಪ್ರಕರಣಗಳಲ್ಲಿ ದಲಿತರಿಗೆ ನ್ಯಾಯ ಸಿಗಬೇಕಾದರೆ ಯಾವ ಕ್ರಮಕೈಗೊಳ್ಳಬೇಕು ಎಂಬ ಬಗ್ಗೆಯೂ ಸರಕಾರಕ್ಕೆ ಶಿಫಾರಸು ಮಾಡಿದೆ.
ರಾಜ್ಯದ 15 ಜಿಲ್ಲೆಗಳನ್ನು ‘ದೌರ್ಜನ್ಯ ಪ್ರವೃತ್ತಿ ಹೆಚ್ಚಿರುವ ಜಿಲ್ಲೆಗಳು’ ಎಂದು ರಾಜ್ಯ ಸರಕಾರ ಘೋಷಿಸಿದ್ದು, ಕೇವಲ 8 ಜಿಲ್ಲೆಗಳಲ್ಲಿ ಮಾತ್ರ ವಿಶೇಷ ನ್ಯಾಯಾಲಯಗಳಿವೆ. ದಲಿತರಿಗೆ ತ್ವರಿತವಾಗಿ ನ್ಯಾಯ ದೊರಕಿಸಿ ಕೊಡುವ ಉದ್ದೇಶದಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದು ಸಮಿತಿಯ ಸಂಚಾಲಕಿ ಪಿ.ಯಶೋಧಾ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಸಾಮಾನ್ಯ ಸರಕಾರಿ ಅಭಿಯೋಜಕರಿಗೆ ನೀಡುವ ವೇತನಕ್ಕಿಂತ ಎರಡು ಪಟ್ಟು ವೇತನವನ್ನು ವಿಶೇಷ ಸರಕಾರಿ ಅಭಿಯೋಜಕ(ಎಸ್‌ಪಿಪಿ)ರಿಗೆ ನೀಡಲಾಗುತ್ತದೆ. ಆದರೂ, ಬಹುಪಾಲು ಅಭಿಯೋಜಕರು ನೂರಾರು ಪ್ರಕರಣಗಳಲ್ಲಿ ದಲಿತರಿಗೆ ನ್ಯಾಯ ಒದಗಿಸಲು ವಿಫಲವಾಗಿದ್ದು, ಅವರನ್ನು ಕೆಲಸದಿಂದ ತೆಗೆದುಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.
♦♦♦
ಇಚ್ಛಾಶಕ್ತಿಯುಳ್ಳವರನ್ನು ನೇಮಿಸಿ
ದಲಿತರು ಹಾಗೂ ಮುಸ್ಲಿಮರಿಗೆ ಸಂಬಂಧಿಸಿದ ಯಾವುದೇ ಕಾಯ್ದೆ ಜಾರಿಗೆ ಬಂದರೂ ಅನುಷ್ಠಾನಗೊಳ್ಳುವುದಿಲ್ಲ. ದೇಶದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ರಕ್ಷಣೆಗಾಗಿ ಹಲವು ಕಾಯ್ದೆಗಳಿವೆ. ಆದರೆ, ಅವುಗಳನ್ನು ಅನುಷ್ಠಾನಗೊಳಿಸುವ ಇಚ್ಛಾಶಕ್ತಿ ಯಾರಿಗೂ ಇಲ್ಲ. ದಲಿತರ ಪರ ವಾದಿಸುವ ಇಚ್ಛಾಶಕ್ತಿ ಹೊಂದಿರುವವರು ವಾದ ಮಂಡಿಸಿದರೆ ದಲಿತರಿಗೆ ನ್ಯಾಯ ಸಿಗಲು ಸಾಧ್ಯ.
– ಡಾ.ಸಿ.ಎಸ್.ದ್ವಾರಕಾನಾಥ್, ಹಿಂ.ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ
♦♦♦
ಸರಕಾರಿ ಅಭಿಯೋಜಕರು, ಆರೋಪಿಗಳು ಹಾಗೂ ಅವರ ಪರ ವಕೀಲರೊಂದಿಗೆ ಶಾಮೀಲಾಗಿ ಸಮರ್ಪಕವಾದ ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸದೆ ಕೇಸು ಸೋಲುವಂತೆ ಮಾಡುತ್ತಾರೆ. ಇಂತಹ ಅಭಿಯೋಜಕರ ಕುರಿತು ಸಮಾಜ ಕಲ್ಯಾಣ ಹಾಗೂ ಕಾನೂನು ಇಲಾಖೆಯ ಸಚಿವರು ಗಂಭೀರ ಚಿಂತನೆ ನಡೆಸಿ ಅವರನ್ನು ಕೆಲಸದಿಂದ ತೆಗೆದುಹಾಕಿ ಪ್ರಾಮಾಣಿಕರನ್ನು ನೇಮಿಸಬೇಕು.
– ವೈ.ಮರಿಸ್ವಾಮಿ, ಸಮಾಜ ಪರಿವರ್ತನ ಜನಾಂದೋಲನ ಸಮಿತಿ ಅಧ್ಯಕ್ಷ
ರಾಷ್ಟ್ರೀಯ