ರಾಷ್ಟ್ರೀಯ

ಹರ್ಯಾಣದಲ್ಲಿ ಪೊಲೀಸರಿಂದ ದಲಿತ ಬಾಲಕನ ಹತ್ಯೆ

Pinterest LinkedIn Tumblr

Pigeongಚಂಡಿಗಡ: ಅ.23: ಹರ್ಯಾಣದಲ್ಲಿ ದಲಿತ ಮಕ್ಕಳಿಬ್ಬರನ್ನು ಸಜೀವ ದಹನ ಮಾಡಿದ ದುರಂತ ಘಟನೆ ನಡೆದು ಕೇವಲ ಎರಡೇ ದಿನಗಳಲ್ಲಿ ಸೋನಿಪತ್‌ನಗೊಹಾನಾ ಪೊಲೀಸ್ ಠಾಣೆಯಲ್ಲಿ ಬುಧವಾರ ಪಾರಿವಾಳಗಳ ಕಳವಿನ ಕುರಿತು ವಿಚಾರಣೆಗೊಳಪಡಿಸಿದ 14ರ ಹರೆಯದ ದಲಿತ ಬಾಲಕನನ್ನು ಕೆಲವೇ ತಾಸುಗಳ ಬಳಿಕ ಪೊಲೀಸರು ಕೊಂದಿದ್ದಾರೆಂದು ಆರೋಪಿಸಲಾಗಿದೆ.
ಗೋವಿಂದನೆಂಬ ಈ ಬಾಲಕನ ಮೃತ ದೇಹವು ಗುರುವಾರ ಮುಂಜಾನೆ ಗೊಹಾನಾದ ಗೋವಿಂದಪುರ ಪ್ರದೇಶದಲ್ಲಿ, ಅವನ ಮನೆಯ ಸಮೀಪದ ಖಾಲಿ ನಿವೇಶನವೊಂದರಲ್ಲಿ ಪತ್ತೆಯಾಗಿದ್ದು, ಆತನ ಸಾವಿಗೆ ಪೊಲೀಸರೇ ಕಾರಣವೆಂದು ಕುಟುಂಬದ ಸದಸ್ಯರು ಆಪಾದಿಸಿದ್ದಾರೆ.
ಇದನ್ನ ಪ್ರತಿಭಟಿಸಿ ಸ್ಥಳೀಯರು ರಸ್ತೆ ಹಾಗೂ ಸ್ಥಳೀಯ ರೈಲು ಮಾರ್ಗವನ್ನು ಮೂರು ತಾಸಿಗೂ ಹೆಚ್ಚುಕಾಲ ತಡೆದ ಬಳಿಕ, ಗೊಹಾನಾ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಯ ವಿರುದ್ಧ ಪೊಲೀಸರು ಹತ್ಯೆಯ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಮೃತ ಬಾಲಕನ ಸೋದರ ಗೌತಂ ಎಂಬವರು ನೀಡಿರುವ ದೂರಿನ ಮೇಲೆ ಸಹಾಯಕ ಉಪನಿರೀಕ್ಷಕರಾದ ಸುಭಾಷ್ ಹಾಗೂ ಅಶೋಕ್ ಎಂಬವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆಯೆಂದು ಘಟನೆಯ ಬಳಿಕ ಕಾನೂನು ಮತ್ತು ಸುವ್ಯವಸ್ಥೆಯನ್ನು ನೋಡಿಕೊಳ್ಳುತ್ತಿರುವ ಪೊಲೀಸ್ ಉಪಾಧೀಕ್ಷಕ ಸತೀಶ್ ಕುಮಾರ್ ತಿಳಿಸಿದ್ದಾರೆ.
ನೆರೆಮನೆಯಿಂದ ಪಾರಿವಾಳಗಳನ್ನು ಕದ್ದ ಆರೋಪದಲ್ಲಿ ಗೋವಿಂದನನ್ನು ಗೌತಂ ಹಾಜರುಪಡಿಸಿದ್ದರು. ಪೊಲೀಸ್ ಠಾಣೆಯಲ್ಲಿ ಮಾತುಕತೆಯ ಬಳಿಕ ಎರಡೂ ಪಕ್ಷಗಳು ರಾಜಿಯಾಗಿದ್ದವೆಂದು ಪೊಲೀಸರು ಪ್ರತಿಪಾದಿಸಿದ್ದಾರೆ.
ಆದಾಗ್ಯೂ ಗೋವಿಂದನನ್ನು ಪೊಲೀಸರು ಕೊಂದಿದ್ದಾರೆಂದು ಅವನ ಕುಟುಂಬಿಕರು ಆರೋಪಿಸಿದ್ದಾರೆ. ಆತನ ಬಿಡುಗಡೆಗಾಗಿ ಪೊಲೀಸರು ತಮ್ಮಿಂದ ರೂ. 10ಸಾವಿರ ಲಂಚವನ್ನೂ ತೆಗೆದುಕೊಂಡಿದ್ದರು. ಆದರೆ, ಅವರಾತನನ್ನು ಬಿಡುಗಡೆಗೊಳಿಸಲಿಲ್ಲವೆಂದು ಸ್ಥಳೀಯ ಮಾಧ್ಯಮವೊಂದಕ್ಕೆ ಗೌತಂ ತಿಳಿಸಿದ್ದಾರೆ.
ಗುರುವಾರ ಮುಂಜಾನೆ ಗೋವಿಂದನ ಕುಟುಂಬಿಕರು ಹಾಗೂ ಇತರ ಪ್ರತಿಭಟನಾಕಾರರು ಗೊಹನಾ-ಜುಲ್ಲಾನಾ ರಸ್ತೆಯಲ್ಲಿ ಸೇರಿದರು. ಮೊದಲು ಅವರು ರಸ್ತೆ ತಡೆ ನಿರ್ಮಿಸಿದರು. ಬಳಿಕ ರೈಲು ತಡೆ ನಿರ್ಮಿಸಿದರು. ಪ್ರತಿಭಟನಾಕಾರರು ಪ್ರತಿ ದಾಳಿ ನಡೆಸಿದಾಗ ಪೊಲೀಸರು ಅಲ್ಲಿಂದ ಪಲಾಯನ ಮಾಡಬೇಕಾಯಿತೆಂದು ಮೂಲಗಳು ವಿವರಿಸಿವೆ.
ಕೊಲೆಯಲ್ಲ, ಆತ್ಮಹತ್ಯೆ: ಖಟ್ಟರ್: ಗೊಹಾನಾದಲ್ಲಿ ಪಾರಿವಾಳಗಳನ್ನು ಕದ್ದ ಆರೋಪಿ 15ರ ಹರೆಯದ ದಲಿತ ಬಾಲಕನ ಸಾವು ಆತ್ಮಹತ್ಯೆಯ ಪ್ರಕರಣವಾಗಿದ್ದು, ಪೊಲೀಸರು ಆತನ ವಿಚಾರಣೆ ನಡೆಸಿರಲಿಲ್ಲವೆಂದು ಹರ್ಯಾಣದ ಮುಖ್ಯಮಂತ್ರಿ ಎಂ.ಎಲ್.ಖಟ್ಟರ್ ಶುಕ್ರವಾರ ಹೇಳಿದ್ದಾರೆ.
ಕುಟುಂಬವು ದೂರಿನೊಂದಿಗೆ ಪೊಲೀಸ್ ಠಾಣೆಗೆ ಬಂದಿತ್ತು ಹಾಗೂ ವಿವಾದ ಪರಿಹಾರವಾದೊಡನೆ ಮನೆಗೆ ಮರಳಿತ್ತೆಂದು ಅವರು ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.
ದಲಿತ ಬಾಲಕ ಗೋವಿಂದ ಎಂಬಾತ ಪೊಲೀಸ್ ಕಸ್ಟಡಿಯಲ್ಲಿ ಸತ್ತಿದ್ದಾನೆ ಹಾಗೂ ಆತನ ಬಿಡುಗಡೆಗಾಗಿ ಪೊಲೀಸರು ಹಣ ಕೇಳಿದ್ದರೆಂದು ಕುಟುಂಬ ಪ್ರತಿಪಾದಿಸಿದೆ.

Write A Comment