ಲಖನೌ (ಪಿಟಿಐ): ಕೇಂದ್ರ ಸಚಿವ ವಿ.ಕೆ.ಸಿಂಗ್ ಅವರ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಅವರು ವಿ.ಕೆ.ಸಿಂಗ್ ಅವರನ್ನು ಜೈಲಿಗೆ ಕಳುಹಿಸಿ ಎಂದು ಕಿಡಿಕಾರಿದ್ದಾರೆ.
ಫರಿದಾಬಾದ್ ದಲಿತ ಹಸುಳೆಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿ.ಕೆ.ಸಿಂಗ್ ದಲಿತರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ. ಕೂಡಲೇ ಅವರನ್ನು ಸಂಪುಟದಿಂದ ವಜಾ ಮಾಡಿ ಜೈಲಿಗೆ ಕಳುಹಿಸಬೇಕು ಎಂದು ಮಾಯಾವತಿ ಆಗ್ರಹಿಸಿದ್ದಾರೆ.
ಕೂಡಲೇ ಪ್ರಧಾನಮಂತ್ರಿಗಳು ಮಧ್ಯ ಪ್ರವೇಶಿಸಿ ವಿ.ಕೆ. ಸಿಂಗ್ ಅವರನ್ನು ವಜಾ ಮಾಡಿ ಜೈಲಿಗೆ ಕಳುಹಿಸಬೇಕು ಮತ್ತು ದಲಿತ ಹಸುಳೆಗಳ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ದೇಶದಲ್ಲಿ ದಲಿತರು ಮತ್ತು ಮುಸ್ಲಿಮರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು ಪ್ರಧಾನಮಂತ್ರಿಗಳು ತಪ್ಪಿತಸ್ಥರ ವಿರುದ್ಧ ಏಕೆ ಕ್ರಮಗೈಗೊಳ್ಳುತ್ತಿಲ್ಲ ಎಂದು ಅವರ ಪ್ರಶ್ನಿಸಿದರು.
ಫರೀದಾಬಾದ್ ಪ್ರಕರಣದಲ್ಲಿ ಹರಿಯಾಣ ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ ಎಂದು ಮಾಯಾವತಿ ಗಂಭೀರ ಆರೋಪ ಮಾಡಿದರು.
ನಾಯಿಗಳಿಗೆ ಕಲ್ಲು: ಫರೀದಾಬಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿ.ಕೆ.ಸಿಂಗ್ ಅವರು, ‘ನಾಯಿಗಳನ್ನು ಯಾರಾದರೂ ಕಲ್ಲು ಹೊಡೆದು ಕೊಂದರೆ ಸರ್ಕಾರ ಏನು ಮಾಡುವುದಕ್ಕೆ ಆಗುತ್ತದೆ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.
