ನವದೆಹಲಿ, ಅ.19: ರಾಜಧಾನಿ ದೆಹಲಿ ಮಂಗೋಲ್ಪುರಿ ಪ್ರದೇಶದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ ಪರಿಣಾಮ ಕೊಳಚೆ ಪ್ರದೇಶದ ಭಾಗದಲ್ಲಿ ಸ್ಥಳೀಯ ನಿವಾಸಿಗಳು ಕಟ್ಟಿರುವ ಸುಮಾರು 400ಕ್ಕೂ ಅಧಿಕ ಗುಡಿಸಲುಗಳು ಬೆಂಕಿಗಾಹುತಿಯಾಗಿದ್ದು ಸೂರಿಲ್ಲದೇ ನೂರಾರು ಮಂದಿ ನಿರಾಶ್ರಿತರಾಗಿದ್ದಾರೆ.
ಇಂದು ನಸುಕಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಸುದ್ದಿ ತಿಳಿದ ತಕ್ಷಣವೇ ಅಗ್ನಿ ಶಾಮಕ ದಳದ 28ಕ್ಕೂ ಹೆಚ್ಚು ವಾಹನಗಳು ಕೊಳಗೇರಿಗೆ ದೌಡಯಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟಿವೆ.
ಮಂಗೋಲ್ಪುರಿ ಪ್ರದೇಶದಲ್ಲಿ ಇಂದು ಬೆಳಗ್ಗೆ ಭಾರಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಕೊಳಗೇರಿಯ ಗುಡಿಸಲುಗಳು ಸುಟ್ಟಿ ಹೋಗಿದ್ದು ದಿನನಿತ್ಯದ ವಸ್ತುಗಳಿಗೂ ಜನರು ಪರದಾಡುವಂತಾಗಿದೆ. ಕೊಳಚೆ ಪ್ರದೇಶದಲ್ಲಿ ಸಂಭವಿಸಿದ ಈ ಬೆಂಕಿ ಅನಾಹುತದಿಂದ ಮಹಿಳೆಯರು ಮಕ್ಕಳು ಬೀದಿಪಾಲಾಗಿದ್ದು ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಬೆಂಕಿ ಅವಘಡದಿಂದ ನಮ್ಮ ಎಲ್ಲ ವಾಸಸ್ಥಾನಗಳು ಹಾಗೂ ಸಾಮಗ್ರಿಗಳು ಸುಟ್ಟಿವೆ. ಈಗ ನಮ್ಮ ಬಳಿ ಧರಿಸಿರುವ ಬಟ್ಟೆಗಳು ಮಾತ್ರ ಇವೆ ಎಂದು ಕೊಳಚೆ ಪ್ರದೇಶದ ನಿವಾಸಿಯೊಬ್ಬರು ತಿಳಿಸಿದ್ದಾರೆ. ಇಂದು ನಸುಕಿನಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕಕ್ಕೆ ಇದುವರೆಗೂ ಕಾರಣವೆನೆಂದು ತಿಳಿದು ಬಂದಿಲ್ಲ.ಬೆಳಂ ಬೆಳಗ್ಗೆ ಇನ್ನೂ ಕಣ್ಣು ಬಿಡದ ಸಮಯದಲ್ಲಿ ದಿಡೀರ್ ಬೆಂಕಿ ಕಾಣಿಸಿಕೊಂಡು ಪರಿಣಾಮ ನಾವು ಮಕ್ಕಳು ಮರಿ. ಮಹಿಳೆಯರನ್ನು ಮನೆ ಯಿಂದ ಹೊರಗೆ ಎಳೆದುತಂದು ರಕ್ಷಿಸಿದ್ದೇವೆ ಆದರೆ ಇದೀಗ ಜೀವನ ನಡೆಸುವುದು ಹೇಗೆ ಎಂಬ ಕೊರುಗು ಕಾಡುತ್ತಿದೆ ಎಂದು ನಿರಾಶ್ರಿತರು ತಮ್ಮ ಅಳಲು ತೊಡಿಕೊಂಡಿದ್ದಾರೆ. 400 ಗುಡಿಸಲುಗಳು ಹೊತ್ತಿ ಉರಿಯುತ್ತಿದ್ದು ಮಧ್ಯಹ್ನಾದವರೆಗೂ ಬೆಂಕಿ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ ಎನ್ನಲಾಗಿದೆ.
