ಪುಣೆ: ಅದೊಂದು ಸುಂದರ ಸಂಸಾರ. ಗಂಡ – ಹೆಂಡತಿ ಐಟಿ ಉದ್ಯೋಗಿಗಳು. ಅವರಿಗೊಂದು ಮುದ್ದಾದ ಮಗು. ತಿಂಗಳಿಗೆ ಲಕ್ಷಗಟ್ಟಲೇ ದುಡಿಯುವ ಈ ದಂಪತಿ ಐಶಾರಾಮಿ ಫ್ಲಾಟ್‌ವೊಂದರಲ್ಲಿ ವಾಸಿಸುತ್ತಿದೆ. ಎಲ್ಲವೂ ಸರಿಯಿದ್ದ ಕುಟುಂಬ ಕ್ಷುಲ್ಲಕ ಕಾರಣಕ್ಕೆ ಹಾಳಾಗಿದೆ. ತಾಯಿಯೇ ತನ್ನ ಐದು ವರ್ಷದ ಮಗನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ಸಿಂಹಗಡ ರಸ್ತೆಯಲ್ಲಿ ಬರುವ ಮಾಣಿಕಬಾಗ್ ನಿಖಿಲ್ ಗಾರ್ಡನ್ ಸೊಸೈಟಿ ಕಟ್ಟಡದ ಮೂರನೇ ಮಹಡಿಯಲ್ಲಿ ಇಂಜಿನಿಯರ್ ತೇಜಸ್ ಅಂಕುಶ ಮೋರೆ (35), ಪತ್ನಿ ದೀಪ್ತಿ ತೇಜಸ್ ಮೋರೆ (32) ಹಾಗೂ ಐದು ವರ್ಷದ ಮಗ ಅರ್ಣವ ಮೊರೆ ವಾಸವಾಗಿದ್ದರು.
ರವಿವಾರದಂದು ದೀಪ್ತಿಯ ಹುಟ್ಟುಹಬ್ಬವಿತ್ತು. ಹುಟ್ಟುಹಬ್ಬ ಹೇಗೆ ಆಚರಿಸಬೇಕು ಎಂಬ ವಿಷಯವಾಗಿ ಗಂಡ – ಹೆಂಡತಿ ಶನಿವಾರ ರಾತ್ರಿ ಜಗಳವಾಡಿದ್ದಾರೆ. ಜಗಳ ಅತಿರೇಕಕ್ಕೆ ಹೋಗಿ ರವಿವಾರ ಬೆಳಿಗ್ಗೆ ಪತಿ ಮಲಗಿದ್ದ ಬೆಡ್ ರೂಮಿನ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿದ ದೀಪ್ತಿ ಮಗ ಅರ್ಣವ ಮಲಗಿದ್ದ ಕೋಣೆಗೆ ತೆರಳಿ ಆತನ ಮಣಿಕಟ್ಟಿನ ನರ ಕತ್ತರಿಸಿ ಕೊಲೆ ಮಾಡಿದ್ದಾಳೆ. ನಂತರ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ತಾನೂ ಸಹ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಘಟನೆ ನಂತರ ತಾಯಿ, ಮಗನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಬದುಕುಳಿಯಲಿಲ್ಲ. ಈ ಘಟನೆಯಿಂದ ಮನನೊಂದ ಪತಿ ತೇಜಸ್ ಶಾಕ್‌ಗೆ ಒಳಗಾಗಿ ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
