ರಾಷ್ಟ್ರೀಯ

ಬಿಹಾರದಲ್ಲಿ ನರೇಂದ್ರಮೋದಿ ಬಹಿರಂಗ ಪ್ರಚಾರಕ್ಕೆ ನಿರಾಕರಣೆ

Pinterest LinkedIn Tumblr

moಪಾಟ್ನಾ , ಅ.11- ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ನಾಳೆ ಬಿಜೆಪಿ ನಡೆಸಲು ಉದ್ದೇಶಿಸಿದ್ದ ಕಾರ್ಯಕರ್ತರ ಬಹಿರಂಗ ಪ್ರಚಾರಕ್ಕೆ ಪ್ರಧಾನಿ ನರೇಂದ್ರಮೋದಿಗೆ ಅವಕಾಶ ನಿರಾಕರಿಸಲಾಗಿದೆ. ಕಾರಣ ಬಿಹಾರದ ಅತ್ಯಂತ ಅಪಾಯಕಾರಿ ಹಾಗೂ ನಕ್ಸಲ್ ಪೀಡಿತ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಕೈಮೂರ್ ಜಿಲ್ಲೆಯಲ್ಲಿ ನಾಳೆ ಪ್ರಧಾನಿಯವರ ಬಹಿರಂಗ ಸಮಾವೇಶವಿತ್ತು. ಆದರೆ, ಇಲ್ಲಿನ ಜಿಲ್ಲಾಧಿಕಾರಿ ದ್ವೇಶ್‌ಶಹರಾ ಅವರು ಅನುಮತಿಯನ್ನು ನಿರಾಕರಣೆ ಮಾಡಿದ್ದಾರೆ. ಈ ಹಿಂದೆ ಒಂದು ಬಾರಿ ಬಿಜೆಪಿಗೆ ಅನುಮತಿಯನ್ನು ನಿರಾಕರಿಸಿದ್ದರು.

ಪುನಃ ಎರಡನೆ ಬಾರಿಗೆ ಸ್ಥಳೀಯ ಬಿಜೆಪಿ ನಾಯಕರು ಮನವಿ ಮಾಡಿಕೊಂಡಿದ್ದರು. ಆದರೆ, ಜಿಲ್ಲಾಧಿಕಾರಿ ಪ್ರಧಾನಿಗೆ ಜೀವಬೆದರಿಕೆ ಇರುವ ಕಾರಣ ರ್ಯಾ ಲಿ ನಡೆಸಲು ಅನುಮತಿ ನಿರಾಕರಿಸಿದ್ದಾರೆ. ಇಲ್ಲಿನ ಬಹುಬನ ಕ್ರೀಡಾಂಗಣದಲ್ಲಿ ನಾಳೆ ಬಿಜೆಪಿಯ 50 ಸಾವಿರ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಕೈಮೂರ್ ಜಿಲ್ಲೆ ಜಾರ್ಖಂಡ್, ಉತ್ತರ ಪ್ರದೇಶ ಗಡಿಗೆ ಹೊಂದಿಕೊಂಡಿದೆ. ಗಡಿ ಭಾಗದಲ್ಲಿ ನಕ್ಸಲ್ ಚಟುವಟಿಕೆಗಳು ಹೆಚ್ಚಾಗಿರುವ ಕಾರಣ ಪ್ರಧಾನಿಯವರ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿಲ್ಲ.ಈ ಭಾಗದಲ್ಲಿ ನಕ್ಸಲೀಯರ ಚಟುವಟಿಕೆಗಳು ಹೆಚ್ಚಾಗಿವೆ. ಪ್ರಧಾನಿಗೆ ಮೊದಲಿನಿಂದಲೂ ಕೆಲವು ಸಮಾಜಘಾತುಕ ಶಕ್ತಿಗಳಿಂದ ಜೀವ ಬೆದರಿಕೆ ಇರುವ ಕಾರಣ ನಾವು ಅನುಮತಿ ನೀಡಿಲ್ಲ.

ಇಂದು ಸಂಜೆಯೊಳಗೆ ಮತ್ತೊಂದು ಸುತ್ತಿನ ಭದ್ರತಾ ವ್ಯವಸ್ಥೆಯನ್ನು ಪರಾಮರ್ಶಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ. ಸೇನಾಪಡೆ, ಅರೆಸೇನಾ ಪಡೆ ಒದಗಿಸಿದ ಬಳಿಕವೇ ಪ್ರಧಾನಿಯವರ ಕಾರ್ಯಕ್ರಮ ನಿಗದಿಯಾಗಲಿದೆ ಎಂದು ತಿಳಿಸಿದ್ದಾರೆ. ಆದರೆ, ಜಿಲ್ಲಾಧಿಕಾರಿಗಳ ತೀರ್ಮಾನಕ್ಕೆ ಸ್ಥಳೀಯ ಬಿಜೆಪಿ ಕಿಡಿಕಾರಿದೆ. ರಾಜ್ಯಸರ್ಕಾರದ ಆಣತಿಯಂತೆ ಜಿಲ್ಲಾಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೋದಿಯವರ ರ್ಯಾ ಲಿಗೆ ಹೆಚ್ಚಿನ ಜನರು ಆಗಮಿಸಿದರೆ ನಮಗೆ ಹಿನ್ನಡೆಯಾಗುತ್ತದೆ ಎಂದು ಜೆಡಿಯು ದುರುದ್ದೇಶಪೂರ್ವಕವಾಗಿ ತಡೆದಿದೆ ಎಂದು ಸ್ಥಳೀಯ ನಾಯಕರು ದೂರಿದ್ದಾರೆ. ಈ ಸಂಬಂಧ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಅಜಯ್ ವಿ.ನಾಯಕ್‌ಗೆ ದೂರು ನೀಡಿದ್ದು, ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಕೋರಿದೆ. ಪ್ರಧಾನಿಗೆ ಎಸ್‌ಜಿಬಿ ಭದ್ರತೆ ಸೇರಿದಂತೆ ಎನ್‌ಎಸ್‌ಜಿ ಸೇರಿದಂತೆ ವಿವಿಧ ಸ್ಥರದ ಭದ್ರತೆ ಇರುತ್ತದೆ. ಆದರೂ ಜಿಲ್ಲಾಧಿಕಾರಿಗಳು ದುರುದ್ದೇಶದಿಂದ ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಆಯೋಗಕ್ಕೆ ದೂರು ನೀಡಲಾಗಿದೆ. ಜಿಲ್ಲಾಧಿಕಾರಿಗಳು ತಕ್ಷಣವೇ ವಸ್ತುಸ್ಥಿತಿ ವರದಿ ನೀಡುವಂತೆ ಆಯೋಗ ಸೂಚನೆ ಕೊಟ್ಟಿದೆ.

Write A Comment