ಭೋಪಾಲ್, ಅ.5: ಇತ್ತೀಚಿನ ದಿನಗಳಲ್ಲಿ ಸೆಲ್ಫಿ ಕ್ರೇಜ್ ಎಷ್ಟೊಂದು ಇದೆ ಅಂದರೆ, ಸೆಲ್ಫಿ ಫೋಟೊ ತೆಗೆಯಲು ಹೋಗಿ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡ ಉದಾಹರಣೆಗಳನ್ನು ಪ್ರತಿ ದಿನ ನಾವು ಓದುತ್ತಲೇ ಇರುತ್ತೇವೆ. ಅಂತಹದ್ದೇ ಘಟನೆಯೊಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.
ಬಾಲಘಾಟ್ ಜಿಲ್ಲೆಯಲ್ಲಿ ಅಭಿ ಡುಬೇ ಎಂಬ 10 ವರ್ಷದ ಬಾಲಕ ಹಾಗೂ ಅವನ ಸಹೋದರ ಅಮನ್ ಇಬ್ಬರೂ ಕಾಲುವೆ ಬಳಿ ಸೆಲ್ಫಿ ತೆಗೆಯುವ ಧಾವಂತದಲ್ಲಿರುವಾಗ ನಿಯಂತ್ರಣ ತಪ್ಪಿದ ಇಬ್ಬರೂ ಕಾಲುವೆಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ತಂದೆ ಸಂಜಯ್ ಗುಪ್ತಾ ಮಕ್ಕಳನ್ನು ಬಚಾವ್ ಮಾಡಲು ನೀರಿಗೆ ಜಿಗಿದು ಹುಡುಕಾಡಿದ್ದಾರೆ.
ಮಕ್ಕಳನ್ನು ಕಾಪಾಡಲು ಹೋದ ತಂದೆ ನೀರಿನಲ್ಲಿ ಮುಳುಗಿ ಹೋಗಿದ್ದಾರೆ. ಮಗ ಅಭಿ ಸಹ ನೀರಿನಲ್ಲಿ ಮುಳಗಿದ್ದು ಇನ್ನೂ ಆತನ ಹುಡುಕಾಟ ಮುಂದುವರೆದಿದೆ. ಈ ವೇಳೆ ಇನ್ನೊಬ್ಬ ಪುತ್ರ ಅಮನ್‌ನನ್ನು ಕಾಲುವೆ ಬಳಿ ಹೋಗುತ್ತಿದ್ದ ಬಾಲಕನೊಬ್ಬ ಕಾಪಾಡಿದ್ದಾನೆ.
