ಕರ್ನಾಟಕ

ಕೊಚ್ಚಿಹೋಗುತ್ತಿದ್ದ ಬಾಲಕನನ್ನು ಸಿನಿಮೀಯ ಶೈಲಿಯಲ್ಲಿ ರಕ್ಷಿಸಿದ ಮಹಿಳೆ

Pinterest LinkedIn Tumblr

asasa

ಶಿವಮೊಗ್ಗ, ಅ.5: ರಾಜಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಅಮಾಯಕ ಶಾಲಾ ಬಾಲಕನನ್ನು ಮಹಿಳೆಯೊಬ್ಬರು ಸಿನಿಮೀಯ ಶೈಲಿಯಲ್ಲಿ ರಕ್ಷಣೆ ಮಾಡಿದ ಘಟನೆ ನಗರದ ಬಾಲರಾಜ ಅರಸ್ ರಸ್ತೆಯ ಮಹಾವೀರ ವೃತ್ತದಲ್ಲಿ ನಡೆಯಿತು.

ರಾಗಿಗುಡ್ಡ ಬಡಾವಣೆಯ ನಿವಾಸಿ ರಿಹಾನ (8) ರಕ್ಷಣೆಗೊಳಗಾದ ಶಾಲಾ ಬಾಲಕನೆಂದು ಗುರುತಿಸಲಾಗಿದೆ. ಈತ ರಾಗಿಗುಡ್ಡದ ಎ.ಎಸ್. ಶಾಲೆಯಲ್ಲಿ 3 ನೇ ತರಗತಿ ಅಭ್ಯಾಸ ಮಾಡುತ್ತಿದ್ದಾನೆ. ಬಾಲಕನ ಕೈ-ಕಾಲಿಗೆ ಸಣ್ಣಪುಟ್ಟ ಗಾಯವಾಗಿದೆ. ಉಳಿದಂತೆ ಬಾಲಕನಿಗೆ ಯಾವುದೇ ಅನಾಹುತವಾಗಿಲ್ಲ. ಪವಾಡ ಸದೃಶ್ಯ ರೀತಿಯಲ್ಲಿ ಜೀವಾಪಾಯದಿಂದ ಪಾರಾಗಿದ್ದಾನೆ. ಆದರೆ ಆತನ ಶಾಲಾ ಬ್ಯಾಗ್, ಶೂಗಳು ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿವೆ.

ನಗರದ ಬಡಾವಣೆಯೊಂದರ ನಿವಾಸಿಯಾದ ಲೋಕೇಶ್ವರಿ ಎಂಬ ಮಹಿಳೆಯ ಸಮಯ ಪ್ರಜ್ಞೆ, ಧೈರ್ಯವಂತಿಕೆಯಿಂದ ರಾಜ ಕಾಲುವೆಯಲ್ಲಿ ಕೊಚ್ಚಿ ಹೋಗಬೇಕಾಗಿದ್ದ ಬಾಲಕ ಬದುಕುಳಿಯುವಂತಾಯಿತು. ಮಹಿಳೆಯ ಸಕಾಲಿಕ ಕ್ರಮಕ್ಕೆ ಸ್ಥಳದಲ್ಲಿ ನೆರೆದಿದ್ದ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದುದು ಕಂಡುಬಂದಿತು.

ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದ ಬಾಲಕನಿಗೆ ಹೆಚ್‍ಡಿಎಫ್‍ಸಿ ಇನ್ಸೂರೆನ್ಸ್‍ನ ಮ್ಯಾನೇಜರ್ ಪ್ರವೀಣ್‍ಕುಮಾರ್ ಮತ್ತವರ ಸಹವರ್ತಿಗಳಾದ ಲಿಂಗರಾಜು, ಮಾದೇಗೌಡ, ಮಂಜುನಾಥ್, ಧನಂಜಯ ಹಾಗೂ ಪರಿಸರ ಹೋರಾಟಗಾರ ಪರಿಸರ ಸಿ. ರಮೇಶ್‍ರವರು ಸಮಾಧಾನ ಪಡಿಸಿದರು. ಬಾಲಕನ ತಾಯಿ ಕೆಲಸ ಮಾಡುತ್ತಿದ್ದ ಅಂಗಡಿಗೆ ಆತನನ್ನು ಕರೆತಂದು ತಾಯಿಯ ಸುಪರ್ದಿಗೆ ಒಪ್ಪಿಸಿದರು.

ಹೇಗಾಯ್ತು?: ಬಾಲಕನು ಶಾಲೆಯಲ್ಲಿ ನಡೆಯುತ್ತಿದ್ದ ಪರೀಕ್ಷೆ ಮುಗಿಸಿಕೊಂಡು ತಾಯಿ ಕೆಲಸ ಮಾಡುತ್ತಿದ್ದ ಅಂಗಡಿಗೆ ಸಿಟಿ ಬಸ್‍ನಲ್ಲಿ ಆಗಮಿಸಿದ್ದಾನೆ. ಮಹಾವೀರ ವೃತ್ತದಲ್ಲಿ ಇಳಿದುಕೊಂಡಿದ್ದಾನೆ. ವೃತ್ತಕ್ಕೆ ಸಮೀಪದ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಬರುವಾಗ, ರಾಜಕಾಲುವೆಯ ಮೇಲ್ಭಾಗದಲ್ಲಿ ಹಾಕಿದ್ದ ಸಿಮೆಂಟ್‍ನ ಮೇಲು ಹೊದಿಕೆ ಕಿತ್ತು ಹೋಗಿರುವುದನ್ನು ಗಮನಿಸದೆ ನೇರವಾಗಿ ರಾಜಕಾಲುವೆಗೆ ಬಿದ್ದಿದ್ದಾನೆ.

ಬಾಲಕನ ಹಿಂದೆಯೇ ಬರುತ್ತಿದ್ದ ಲೋಕೇಶ್ವರಿ ಎಂಬ ಮಹಿಳೆಯು ತಕ್ಷಣವೇ ಬಾಲಕನ ಕೈ ಹಿಡಿದು ಮೇಲಕ್ಕೇತ್ತುವ ಮೂಲಕ ಆತನ ಜೀವ ರಕ್ಷಣೆ ಮಾಡಿದ್ದಾರೆ. ಅದೇ ಮಾರ್ಗದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಹೆಚ್‍ಡಿಎಫ್‍ಸಿ ಬ್ಯಾಂಕ್‍ನ ಮಲ್ಲಿಕಾರ್ಜುನ ಮತ್ತವರ ಸಿಬ್ಬಂದಿಗಳು ಹಾಗೂ ಪರಿಸರ ಹೋರಾಟಗಾರ ರಮೇಶ್‍ರವರು ಘಟನೆಯಿಂದ ತೀವ್ರ ಆಘಾತಕ್ಕೀಡಾಗಿ ಅಳುತ್ತಿದ್ದ ಬಾಲಕನನ್ನು ಸಮಾಧನಪಡಿಸಿದರು.

ತದನಂತರ ಬಾಲಕನು ತನ್ನ ತಾಯಿಯು ಲಕ್ಷ್ಮೀ ಗೆಲಾಕ್ಸಿ ಕಟ್ಟಡದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮಾಹಿತಿ ನೀಡಿದ್ದಾನೆ. ಇದರ ಆಧಾರದ ಮೇಲೆ ಕಾರಿನಲ್ಲಿಯೇ ಬಾಲಕನನ್ನು ಕರೆತಂದು, ಅನು ಕಿಡ್ಸ್ ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ತಾಯಿ ಸಾಜೀದಾರವರ ವಶಕ್ಕೊಪ್ಪಿಸಿದರು. ಘಟನೆಯ ವೃತ್ತಾಂತದ ಮಾಹಿತಿ ನೀಡಿದರು.

ಕಣ್ಣೀರಿಟ್ಟ ತಾಯಿ: ಮಗ ಅಪಾಯದಲ್ಲಿ ಸಿಲುಕಿದ್ದ ಎಂಬ ಮಾಹಿತಿ ಕೇಳಿ ತಾಯಿ ಸಾಜೀದಾ ಕಣ್ಣೀರಿಟ್ಟರು. ‘ತನಗಿರುವ ಏಕೈಕ ಮಗ ಈತನಾಗಿದ್ದಾನೆ. ಶಾಲೆಯಲ್ಲಿ ಈತನಿಗೆ ಪರೀಕ್ಷೆಯಿತ್ತು. ಪರೀಕ್ಷೆ ಮುಗಿಸಿಕೊಂಡು ಅಂಗಡಿಗೆ ಬರುವಂತೆ ತಿಳಿಸಿದ್ದೆ. ಚರಂಡಿಯಲ್ಲಿ ಬಿದ್ದು ಕೊಚ್ಚಿ ಹೋಗುತ್ತಿದ್ದ ವಿಷಯ ಕೇಳಿ ಗಾಬರಿಯಾಯ್ತು. ನನ್ನ ಮಗನನ್ನು ರಕ್ಷಣೆ ಮಾಡಿದವರಿಗೆ ಧನ್ಯವಾದ ಅರ್ಪಿಸುವುದಾಗಿ’ ತಿಳಿಸಿದರು.

ಅಂಗಡಿಯ ಮಾಲೀಕ ನಜರುಲ್ಲಾರವರು ಮಾತನಾಡಿ, ‘ಈ ವಿಷಯ ಕೇಳಿ ತನಗೂ ಕೂಡ ಅರೆಕ್ಷಣ ಗಾಬರಿಯಾಗುವಂತಾಯಿತು. ನಾಗರೀಕರ ಸಕಾಲಿಕ ಪ್ರಯತ್ನದಿಂದ ಬಾಲಕ ರಿಹಾನ ರಕ್ಷಣೆಯಾಗುವಂತಾಯಿತು. ಇನ್ನಾದರೂ ಬಾಲಕ ಬಿದ್ದ ರಾಜಕಾಲುವೆಯ ದುರಸ್ತಿಗೆ ಸಂಬಂಧಿಸಿದವರು ಕ್ರಮಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

Write A Comment