ರಾಷ್ಟ್ರೀಯ

ದಾದ್ರಿ ಹತ್ಯೆ: ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಅಖಿಲೇಶ್ ಯಾದವ್ ಭರವಸೆ

Pinterest LinkedIn Tumblr

1akilesjhಲಕ್ನೋ, ಅ. 4: ದಾದ್ರಿಯಲ್ಲಿ ಗುಂಪಿನಿಂದ ಹತ್ಯೆಗೀಡಾದ ಇಖ್ಲಾಕ್‌ರ ಕುಟುಂಬಕ್ಕೆ ನ್ಯಾಯ ಒದಗಿಸಲಾಗುವುದು ಹಾಗೂ ಪಾತಕಿಗಳು ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ರವಿವಾರ ಭರವಸೆ ನೀಡಿದ್ದಾರೆ.
ಇಖ್ಲಾಕ್ ಕುಟುಂಬದ ಮೂವರು ಸದಸ್ಯರು ಮುಖ್ಯಮಂತ್ರಿಯನ್ನು ಲಕ್ನೋದ ಅವರ ನಿವಾಸದಲ್ಲಿ ಭೇಟಿಯಾದ ವೇಳೆ ಈ ಭರವಸೆ ನೀಡಿದರು.
ಅಖ್ಲಾಕ್‌ರ ತಾಯಿ ಅಸ್ಗರಿ ಮತ್ತು ಇಬ್ಬರು ಮಕ್ಕಳಾದ ಸರ್ತಾಜ್ ಮತ್ತು ಶಾಹಿಸ್ತಾ ಮುಖ್ಯಮಂತ್ರಿಯನ್ನು ಭೇಟಿಯಾದವರು. ಇಖ್ಲಾಕ್‌ರ ಕುಟುಂಬ ಸದಸ್ಯರು ಮಾತ್ರವಲ್ಲದೆ, ಗೌತಮ್ ಬುದ್ಧ ನಗರದ ಆಡಳಿತ ಅಧಿಕಾರಿಗಳೂ ಲಕ್ನೋಗೆ ಹೋಗಿದ್ದಾರೆ.
‘‘ಅವರ ದು:ಖದಲ್ಲಿ ನಾವು ಭಾಗಿಯಾಗಿದ್ದೇವೆ. ಅವರಿಗೆ ನ್ಯಾಯ ಸಿಗುತ್ತದೆ ಹಾಗೂ ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದು’’ ಎಂದು ಇಖ್ಲಾಕ್‌ರ ಸಂಬಂಧಿಕರನ್ನು ಭೇಟಿಯಾದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್ ಹೇಳಿದರು.
‘‘ಇಂಥ ವಿಷಯಗಳಲ್ಲಿ ಸಮಾಜವಾದಿಗಳು ಎಂದಿಗೂ ರಾಜಕೀಯ ಮಾಡುವುದಿಲ್ಲ’’ ಎಂದು ಮುಖ್ಯಮಂತ್ರಿ ನುಡಿದರು.
‘‘ನಾವು ಅವರಿಗೆ ಸಹಾಯ ಮಾಡುತ್ತೇವೆ. ಅಗತ್ಯವಿದ್ದರೆ ಅವರಿಗೆ ಉದ್ಯೋಗವನ್ನೂ ದೊರಕಿಸಿಕೊಡುತ್ತೇವೆ’’ ಎಂದರು.
‘‘ನಮಗೆ ಬೆಂಬಲ ನೀಡಿದ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ಗೆ ನಾವು ಧನ್ಯವಾದ ಹೇಳುತ್ತೇವೆ. ನ್ಯಾಯ ಸಿಗುತ್ತದೆ ಎಂದು ನಾವು ನಂಬುತ್ತೇವೆ’’ ಎಂದು ಇಖ್ಲಾಕ್‌ರ ಕುಟುಂಬ ಹೇಳಿದೆ.
ಆರೋಪಿಗಳನ್ನು ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯಡಿ ಬಂಧಿಸಲಾಗುವುದು ಎಂಬುದಾಗಿ ಅಖಿಲೇಶ್ ಈ ಮೊದಲು ಘೋಷಿಸಿದ್ದರು.
ಉತ್ತರಪ್ರದೇಶ ಗೃಹ ಕಾರ್ಯದರ್ಶಿ ದೇಬಸಿಶ್ ಪಾಂಡ ಇದನ್ನು ಶನಿವಾರ ಪುನರುಚ್ಚರಿಸಿದ್ದಾರೆ. ಪ್ರಕರಣ ಎನ್‌ಎಸ್‌ಎಯಡಿ ದಾಖಲಾದರೆ, ಆರೋಪಿಗಳನ್ನು 12 ತಿಂಗಳವರೆಗೆ ಬಂಧಿಸಿಡಲು ಪೊಲೀಸರಿಗೆ ಸಾಧ್ಯವಾಗಲಿದೆ.
ಪೊಲೀಸರು ಈವರೆಗೆ ಸುಮಾರು 10 ಆರೋಪಿಗಳನ್ನು ಬಂಧಿಸಿದ್ದಾರೆ. ವಿಶಾಲ್ ಮತ್ತು ಶಿವಂ ಸೇರಿ ಅವರ ಪೈಕಿ ನಾಲ್ವರು ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Write A Comment