ರಾಷ್ಟ್ರೀಯ

ಮೋದಿಯಿಂದ ಜನರಿಗೆ ವಂಚನೆ; ಅವರಿಗೆ ಶಿಕ್ಷೆಯಾಗಬೇಕು: ಜೇಠ್ಮಲಾನಿ

Pinterest LinkedIn Tumblr

2jathmalani_660_091813025346ಹೊಸದಿಲ್ಲಿ, ಅ. 4: ಪ್ರಧಾನಿ ನರೇಂದ್ರ ಮೋದಿ ಭಾರತದ ಜನತೆಯನ್ನು ವಂಚಿಸಿದ್ದಾರೆ ಎಂದು ರವಿವಾರ ಆರೋಪಿಸಿದ ಖ್ಯಾತ ವಕೀಲ ರಾಮ್ ಜೇಠ್ಮಲಾನಿ, ಅದಕ್ಕಾಗಿ ಅವರನ್ನು ಶಿಕ್ಷಿಸಬೇಕು ಎಂದು ಹೇಳಿದರು.

ತಾನು ಯಾರ ಪರವಾಗಿಯಾದರೂ ಮತ ಹಾಕುವುದಿದ್ದರೆ, ಜೆಡಿಯು ನಾಯಕ ನಿತೀಶ್ ಕುಮಾರ್ ಸರಕಾರದ ಪರವಾಗಿ ಮತ ಹಾಕುವುದಾಗಿ ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮಾಜಿ ರಾಜ್ಯಸಭಾ ಸದಸ್ಯ ಹೇಳಿದರು.

‘‘ಮತ ಹಾಕಲೇಬೇಕಾಗಿದ್ದರೆ ನಿತೀಶ್ ಸರಕಾರದ ಪರವಾಗಿ ಹಾಕುತ್ತೇನೆ. ಮೋದಿ ಸೋಲಬೇಕೆಂದು ನಾನು ಬಯಸುತ್ತೇನೆ’’ ಎಂದು ಹಿರಿಯ ವಕೀಲ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಪ್ರಧಾನಿ ಮೋದಿಯೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಂಡಿರುವುದಾಗಿ ಜೇಠ್ಮಲಾನಿ ಈ ವರ್ಷದ ಜೂನ್ ತಿಂಗಳಲ್ಲಿ ಘೋಷಿಸಿದ್ದರು. ಮೋದಿಯ ಬಗೆಗಿದ್ದ ತನ್ನ ಗೌರವ ಮುಕ್ತಾಯವಾಗಿದೆ ಎಂದು ಅವರು ಆ ಸಂದರ್ಭದಲ್ಲಿ ಹೇಳಿದ್ದರು.

ಒಂದು ಕಾಲದಲ್ಲಿ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿಯನ್ನು ಬಲವಾಗಿ ಬೆಂಬಲಿಸಿದ್ದ ಉಚ್ಚಾಟಿತ ಬಿಜೆಪಿ ಸಂಸದ, ಜಾಗೃತದಳದ ಮುಖ್ಯ ಕಮಿಶನರ್ ಆಗಿ ಸಿಬಿಡಿಟಿಯ ಮಾಜಿ ಅಧ್ಯಕ್ಷ ಕೆ.ವಿ. ಚೌಧರಿಯನ್ನು ಸರಕಾರ ನೇಮಿಸಿದ್ದನ್ನು ಬಲವಾಗಿ ವಿರೋಧಿಸಿದ್ದರು.

ರಾಷ್ಟ್ರಪತಿಯವರು ಈ ನೇಮಕಾತಿಗೆ ಅಂಕಿತ ಹಾಕಿದ ಬಳಿಕ ತಾನು ಸರಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

‘‘ಈಗ ನಾವು ಸುಪ್ರೀಂ ಕೋರ್ಟ್ ಹಾಗೂ ಜನರ ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕಾಗಿದೆ. ನಿಮ್ಮ ಬಗ್ಗೆ ನನ್ನಲ್ಲಿ ಕಡಿಮೆಯಾಗುತ್ತಾ ಬಂದಿರುವ ಗೌರವ ಇಂದು ಕೊನೆಯಾಗಲಿದೆ’’ ಎಂದು ಮೋದಿಗೆ ಬರೆದ ಪತ್ರವೊಂದರಲ್ಲಿ ಜೇಠ್ಮಲಾನಿ ಹೇಳಿದ್ದಾರೆ.
‘‘ಪ್ರಧಾನಿ ನರೇಂದ್ರ ಮೋದಿಯೊಂದಿಗಿನ ನನ್ನ ಸಂಪರ್ಕ ಕಡಿತ’’ ಎಂಬ ಹೆಸರಿನ ಪತ್ರವನ್ನು ಜೇಠ್ಮಲಾನಿ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ.

Write A Comment