ರಾಷ್ಟ್ರೀಯ

ಚೆರ್ವತ್ತೂರು ಬ್ಯಾಂಕ್ ದರೋಡೆ ಪ್ರಕರಣ: ನಾಲ್ವರು ಆರೋಪಿಗಳ ಸೆರೆ

Pinterest LinkedIn Tumblr

Kasargodಕಾಸರಗೋಡು, ಅ.4: ಚೆರ್ವತ್ತೂರು ವಿಜಯಾ ಬ್ಯಾಂಕ್ ದರೋಡೆ ಪ್ರಕರಣವನ್ನು ಒಂಬತ್ತೇ ದಿನಗಳಲ್ಲಿ ಭೇದಿಸಿರುವ ಕಾಸರಗೋಡು ಪೊಲೀ ಸರು, ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಳವು ಗೈದ ಕೋಟ್ಯಂತರ ರೂ. ವೌಲ್ಯದ ನಗ-ನಗದನ್ನು ತನಿಖಾ ತಂಡ ವಶಪಡಿಸಿಕೊಂಡಿದೆ.
ಕಾಞಂಗಾಡ್‌ನಲ್ಲಿರುವ ಡಿವೈಎಸ್ಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಶ್ರೀನಿವಾಸ್ ಈ ಬಗ್ಗೆ ಮಾಹಿತಿ ನೀಡಿದರು. ಮಡಿಕೇರಿ ಕುಶಾಲನಗರ ಬೈತನ ಹಳ್ಳಿಯ ಎಸ್.ಸುಲೈಮಾನ್ ಯಾನೆ ಇಸ್ಮಾಯೀಲ್(50), ಕಾಸರಗೋಡು ಸಂತೋಷ್ ನಗರ ನಿವಾಸಿ ಹಾಗೂ ಪ್ರಸ್ತುತ ಕಾಞಂಗಾಡ್ ಬಲಾಲ್ನಲ್ಲಿರುವ ಅಬ್ದುಲ್ಲತೀಫ್(35), ಚೆರ್ಕಳ ಬೇರ್ಕ ನಿವಾಸಿ ಮುನಾಫ್ ಅಬ್ದುಲ್ ಖಾದರ್ ಯಾನೆ ಮುನಾಫ್(30) ಹಾಗೂ ಕಾಞಂಗಾಡ್ ಬಲ್ಲ ನಿವಾಸಿ ಮುಬಶ್ಶಿರ್(21) ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣದಲ್ಲಿ ಒಟ್ಟು ಏಳು ಮಂದಿ ಶಾಮೀಲಾಗಿದ್ದು, ಈ ಪೈಕಿ ಇಡುಕ್ಕಿಯ ರಾಜೇಶ್ ಮುರಳಿ, ಕೊಡಗಿನ ಅಶ್ರಫ್ ಸೇರಿದಂತೆ ಮೂವರು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಶೋಧ ಮುಂದುವರಿದೆ ಎಂದು ಎಸ್ಪಿ ತಿಳಿಸಿದರು.
ಬಂಧಿತರು ನೀಡಿದ ಸುಳಿವಿನ ಆಧಾರದಲ್ಲಿ ಚೆರ್ಕಳದ ಚೇರೂರಿನ ನಿರ್ಜನ ಪ್ರದೇಶದಲ್ಲಿನ ಬಾವಿಯಲ್ಲಿ ಹಾಗೂ ಸಮೀಪದ ಮನೆಯೊಂದರ ಶೆಡ್‌ನೊಳಗೆ ಹೂತಿಟ್ಟಿದ್ದ ನಗ-ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಈ ಹಿಂದೆ ನಡೆದ ಹಲವು ದರೋಡೆ ಪ್ರಕರಣಗಳ ಆರೋಪಿಗಳನ್ನು ಕೇಂದ್ರೀಕರಿಸಿ ತನಿಖಾ ತಂಡವು ತನಿಖೆ ನಡೆಸಿತ್ತು.
ಇದೇ ವೇಳೆ ಬ್ಯಾಂಕ್ ಕಾರ್ಯಾಚರಿಸುತ್ತಿರುವ ಕಟ್ಟಡದ ತಳ ಅಂತಸ್ತಿನಲ್ಲಿ ಅಂಗಡಿ ಕೊಠಡಿ ಪಡೆದವರ ವಿವರವನ್ನು ಪರಿಶೀಲಿಸಿದಾಗ ಬಂಧಿತ ಸುಲೈಮಾನ್ ಮಂಜೇಶ್ವರದ ನಕಲಿ ವಿಳಾಸ ನೀಡಿರುವುದು ಪತ್ತೆಯಾಗಿತ್ತು. ಅಂಗಡಿ ಪಡೆಯಲು ನೆರವಾಗಿದ್ದ ಅಬ್ದುಲ್ಲತೀಫ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕೃತ್ಯ ಬಯಲಿಗೆ ಬಂದಿದೆ. ಬಂಧಿತರ ಪೈಕಿ ಮುನಾಫ್ ಕಳವುಗೈದ ಸೊತ್ತುಗಳನ್ನು ಬಚ್ಚಿಡಲು ನೆರವಾಗಿದ್ದನು. ಆರೋಪಿಗಳ ಪತ್ತೆಗೆ ಸೈಬರ್ ಸೆಲ್‌ನ ನೆರವು ಕೂಡಾ ಪಡೆಯಲಾಗಿದೆ ಎಂದವರು ತಿಳಿಸಿದರು.
ಕೃತ್ಯದ ರೂವಾರಿ ಅಬ್ದುಲ್ಲತೀಫ್
ಮೂಲತಃ ಕಾಸರಗೋಡು ಸಂತೋಷ್ ನಗರ ನಿವಾಸಿಯಾಗಿರುವ ಅಬ್ದುಲ್ಲತೀಫ್ ಈ ದರೋಡೆ ಕೃತ್ಯದ ರೂವಾರಿ. ಈತ 2010ರಲ್ಲಿ ಕಾಞಂಗಾಡ್‌ನ ಜ್ಯುವೆಲ್ಲರಿಯೊಂದಕ್ಕೆ ಹಾಡಹಗಲೇ ನುಗ್ಗಿ 3 ಕೋ.ರೂ. ಮೌಲ್ಯದ ಚಿನ್ನಾಭರಣ ಕಳವುಗೈದಿದ್ದನು. ಕೃತ್ಯದ ಬಳಿಕ ಸೆರೆಸಿಕ್ಕ ಈತ ಜೈಲುವಾಸ ಅನುಭವಿಸಿಬಿಡುಗಡೆಗೊಂಡಿದ್ದನು. ಇದೀಗ ಐದು ವರ್ಷಗಳ ಬಳಿಕ ಅಂತಹದೇ ಕೃತ್ಯ ಎಸಗಿ ಸಿಕ್ಕಿಬಿದ್ದಿದ್ದಾನೆ. ಗಲ್ಫ್ ಉದ್ಯೋಗಿಯಾಗಿದ್ದ ಅಬ್ದುಲ್ಲತೀಫ್ ಕೆಲ ವರ್ಷಗಳಿಂದ ಊರಲ್ಲಿ ನೆಲೆಸಿ ಕಳವು ಕೃತ್ಯಗಳಲ್ಲಿ ತೊಡಗಿದ್ದ ಎಂದು ಎಸ್ಪಿ ಹೇಳಿದರು.
ಆರೋಪಿಗಳು ವ್ಯಾಪಾರ ಮಳಿಗೆ ಆರಂಭಿಸುವ ನೆಪದಲ್ಲಿ ಬ್ಯಾಂಕ್ ಇದ್ದ ಕಟ್ಟಡ ಸಂಕೀಣದಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದರು. ಸೆ.25ರಿಂದ 27ರ ತನಕ ಬ್ಯಾಂಕ್‌ಗೆ ರಜೆ ಇತ್ತು. ಈ ಅವಕಾಶವನ್ನು ಬಳಸಿಕೊಂಡ ದರೋಡೆಕೋರರು, ಸೆ.26ರಂದು ಬ್ಯಾಂಕ್‌ನ ಕೆಲ ಅಂತಸ್ತಿನಿಂದ ಕನ್ನ ಹಾಕಿ ಭದ್ರತಾ ಕೊಠಡಿಯನ್ನು ಪ್ರವೇಶಿಸಿದ್ದರು. ಬಳಿಕ 4.75 ಕೋಟಿ ರೂ. ಮೌಲ್ಯದ 19.75 ಕೆ.ಜಿ. ಚಿನ್ನಾಭರಣ ಮತ್ತು 2.75 ಲಕ್ಷ ರೂ.ವನ್ನು ಕದ್ದೊಯ್ದಿದ್ದರು ಎಸ್ಪಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ತನಿಖಾ ತಂಡದ ನೇತೃತ್ವ ವಹಿಸಿದ್ದ ಡಿವೈಎಸ್ಪಿ ಹರಿಶ್ಚಂದ್ರ ನಾಯಕ್, ಸಿಬ್ಬಂದಿ ಉಪಸ್ಥಿತರಿದ್ದರು.

3 ತಿಂಗಳ ಹಿಂದೆಯೇ ಸಂಚು
ಚೆರ್ವತ್ತೂರು ವಿಜಯಾ ಬ್ಯಾಂಕ್ ದರೋಡೆಗೆ ಮೂರು ತಿಂಗಳ ಹಿಂದೆಯೇ ಸಂಚು ರೂಪಿಸಲಾಗಿತ್ತು. ಇದಕ್ಕಾಗಿ ಅಂಗಡಿ ಮಳಿಗೆಗೆಂದು ಬ್ಯಾಂಕ್ ಕಾರ್ಯಾಚರಿಸುತ್ತಿರುವ ಕಟ್ಟಡದ ಕೆಳಗಿನ ಅಂತಸ್ತಿನಲ್ಲಿ ಸುಲೈಮಾನ್ ಮಂಜೇಶ್ವರದ ಇಸ್ಮಾಯೀಲ್ ಎಂಬ ನಕಲಿ ವಿಳಾಸ ನೀಡಿ ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದನು. ಈ ವೇಳೆ ಬ್ಯಾಂಕ್‌ನ ಭದ್ರತಾ ರೂಮ್‌ನ ನೇರ ಕೆಳಗಡೆ ಇರುವ ಕೊಠಡಿಯನ್ನೇ ಗೊತ್ತುಪಡಿಸಿಕೊಂಡಿದ್ದರು.
ಸೆ.24ರಿಂದ 26ರ ತನಕ ಚೆರ್ವತ್ತೂರು ಪರಿಸರದಿಂದ ಹೊರಹೋದ ಮತ್ತು ಒಳಬಂದ 4 ಸಾವಿರಕ್ಕೂ ಅಧಿಕ ದೂರವಾಣಿ ಕರೆಗಳನ್ನು ತನಿಖಾ ತಂಡ ಪರಿಶೀಲಿಸಿದೆ . ಈ ವೇಳೆ ಲಭಿಸಿದ 2010ರ ಕಾಞಂಗಾಡ್ ಜ್ಯುವೆಲ್ಲರಿ ದರೋಡೆ ನಡೆಸಿದ ಅಬ್ದುಲ್ಲತೀಫ್‌ನ ಮೊಬೈಲ್ ನಂಬರ್ ತನಿಖೆಯ ಜಾಡು ಹಿಡಿಯಲು ಪೊಲೀಸರಿಗೆ ನೆರವಾಯಿತು.

ಬ್ಯಾಂಕ್ ಸಿಬ್ಬಂದಿಯ ನಿರ್ಲಕ್ಷದ ಬಗ್ಗೆಯೂ ತನಿಖೆ

ತನಿಖೆಯ ವೇಳೆವಿಜಯಾ ಬ್ಯಾಂಕ್ ಸಿಬ್ಬಂದಿಯ ನಿರ್ಲಕ್ಷ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಲಾಕರ್‌ನ ಎರಡು ಕೀಲಿಕೈ ನಾಪತ್ತೆಯಾಗಿದ್ದು, ಕೃತ್ಯದಲ್ಲಿ ಬ್ಯಾಂಕ್ ಸಿಬ್ಬಂದಿಯ ಕೈವಾಡ ಇದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
-ಡಾ.ಎ.ಶ್ರೀನಿವಾಸ್, ಕಾಸರಗೋಡು ಜಿಲ್ಲಾ ಎಸ್ಪಿ

ಒಂಬತ್ತು ದಿನಗಳಲ್ಲೇ ಕೃತ್ಯ ಬಯಲಿಗೆ

ಕೂಡ್ಲು ಬ್ಯಾಂಕ್ ದರೋಡೆ ಪ್ರಕರಣವನ್ನು ಹತ್ತು ದಿನಗಳೊಳಗೆ ಭೇದಿಸಿದ್ದರೆ, ಚೆರ್ವತ್ತೂರು ಬ್ಯಾಂಕ್ ದರೋಡೆ ಪ್ರಕರಣವನ್ನು ಒಂಬತ್ತು ದಿನಗಳೊಳಗೆ ಬಯಲಿಗೆ ತರುವಲ್ಲಿ ಜಿಲ್ಲಾ ಎಸ್ಪಿ ಡಾ.ಎ.ಶ್ರೀನಿವಾಸ್ ಮತ್ತು ಡಿವೈಎಸ್ಪಿ ಹರಿಶ್ಚಂದ್ರ ನಾಯಕ್ ನೇತೃತ್ವದ ಪೊಲೀಸ್ ತಂಡ ಯಶಸ್ವಿಯಾಗಿದೆ.

Write A Comment