ರಾಷ್ಟ್ರೀಯ

ನಾವು ಭಯದಲ್ಲಿ ಬದುಕುತ್ತಿದ್ದೇವೆ…ಹಳ್ಳಿಯನ್ನೇ ಬಿಡುತ್ತಿದ್ದೇವೆ ಬರ್ಬರ ಹತ್ಯೆಗೆ ಸಾಕ್ಷಿಯಾದ ಬಿಸಾಡಾದ ಮುಸ್ಲಿಮರ ಅಳಲು

Pinterest LinkedIn Tumblr

ashlaq_motherಗ್ರೇಟರ್ ನೊಯ್ಡ,ಅ.1: ಸೋಮವಾರ ರಾತ್ರಿ ತನ್ನ ನಿವಾಸದಲ್ಲಿ ದನವನ್ನು ಕಡಿದ ಆರೋಪದಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆಗೆ ಸಾಕ್ಷಿಯಾಗಿದ್ದ ಇಲ್ಲಿಯ ಬಿಸಾಡಾ ಗ್ರಾಮದಲ್ಲಿನ ಮುಸ್ಲಿಮರು ಜೀವಭಯದಲ್ಲಿ ಬದುಕುತ್ತಿದ್ದಾರೆ. ಬುಧವಾರ ಅಲ್ಲಿಯ ಹಲವಾರು ಮುಸ್ಲಿಂ ಕುಟುಂಬಗಳು ಗ್ರಾಮವನ್ನು ತೊರೆಯಲು ನಿರ್ಧರಿಸಿದ್ದವು.

ಉನ್ಮತ್ತ ಗುಂಪಿನಿಂದ ಥಳಿಸಲ್ಪಟ್ಟು ದಾರುಣ ಸಾವನ್ನಪ್ಪಿದ ಇಖ್ಲಾಕ್(58)ರ ಕುಟುಂಬವೂ ಗ್ರಾಮವನ್ನು ಬಿಟ್ಟು ಹೋಗಲು ಸಿದ್ಧವಾಗಿತ್ತು. ಆದರೆ ಕೊನೆಗೂ ಜಿಲ್ಲಾಡಳಿತವು ಅವರ ಸುರಕ್ಷತೆಯ ಭರವಸೆ ನೀಡುವುದರೊಂದಿಗೆ ಇಖ್ಲಾಕ್ ಸಾವಿಗೆ ಕಾರಣರಾದವರನ್ನು ಬಂಧಿಸುವ ಪಣ ತೊಟ್ಟ ನಂತರ ಈ ಹತಾಶ ಮುಸ್ಲಿಮ್ ಕುಟುಂಬಗಳು ತಮ್ಮ ನಿರ್ಧಾರವನ್ನು ಕೈಬಿಟ್ಟಿವೆ.14,000 ಜನಸಂಖ್ಯೆಯಿರುವ ಗ್ರಾಮದಲ್ಲಿ ಸುಮಾರು 50 ಮುಸ್ಲಿಮ್ ಕುಟುಂಬಗಳು ವಾಸವಾಗಿವೆ. ನನ್ನ ಮಗನನ್ನು ಕೊಲ್ಲಲಾಗಿದೆ. ನನ್ನ ಕಿರಿಯ ಮೊಮ್ಮಗ ಸಾವುಬದುಕಿನ ಹೋರಾಟ ನಡೆಸುತ್ತಿದ್ದಾನೆ. ಈಗೇನೋ ಪೊಲೀಸರು ನಮಗೆ ರಕ್ಷಣೆ ನೀಡುತ್ತಿದ್ದಾರೆ. ಆದರೆ ಅವರೇನೂ ಗ್ರಾಮದಲ್ಲಿ ಶಾಶ್ವತವಾಗಿ ಇರುವುದಿಲ್ಲ. ಇಂತಹ ಇನ್ನಷ್ಟು ದಾಳಿಗಳು ನಡೆಯಬಹುದೆಂದು ನಾವು ಭಯಭೀತರಾಗಿದ್ದೇವೆ. ನಾವು ನಮ್ಮ ಬಂಧುಗಳೊಂದಿಗೆ ಸಂಪರ್ಕದಲ್ಲಿದ್ದೇವೆ, ಗ್ರಾಮವನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳಲು ಯೋಚಿಸಿದ್ದೇವೆ ಎಂದು ಇಖ್ಲಾಕ್‌ರ ವಯೋವೃದ್ಧ ತಾಯಿ ಅಸ್ಗರಿ ತನ್ನನ್ನು ಭೇಟಿಯಾದ ಸುದ್ದಿಗಾರರಲ್ಲಿ ಅಳಲು ತೋಡಿಕೊಂಡರು. ಗುಂಪಿನ ಹಲ್ಲೆಯಲ್ಲಿ ಆಕೆಯೂ ಗಾಯಗೊಂಡಿದ್ದಾರೆ.ಗ್ರಾಮವನ್ನು ತೊರೆದು ಹೋಗುವಂತೆ ಬಂಧು ಗಳೂ ಈ ನತದೃಷ್ಟ ಕುಟುಂಬಕ್ಕೆ ಸಲಹೆ ನೀಡಿದ್ದಾರೆ ಎಂದು ಹತ ಇಖ್ಲಾಕ್‌ರ ಭಾವ ಕಲ್ವಾ ಹೇಳಿದರು. ಅವರೀಗ ತಮ್ಮ ಮನೆಯಲ್ಲಿ ಇರುವುದು ಸುರಕ್ಷಿತವಲ್ಲ. ಕೆಲವು ದಿನಗಳ ಮಟ್ಟಿಗಾದರೂ ಗ್ರಾಮವನ್ನು ತೊರೆದು ಹೋಗುವಂತೆ ಅವರಿಗೆ ಸೂಚಿಸಿದ್ದೇವೆ ಎಂದರು.

ತಮ್ಮ ಕುಟುಂಬಗಳು ಸುರಕ್ಷಿತವಾಗಿರಬೇಕಾದರೆ ಗ್ರಾಮವನ್ನೇ ಶಾಶ್ವತವಾಗಿ ತೊರೆಯುವುದು ಏಕೈಕ ಮಾರ್ಗವಾಗಬಹುದು ಎಂದು ಅಲ್ಲಿಯ ಹೆಚ್ಚಿನ ಮುಸ್ಲಿಮರು ಒಪ್ಪಿಕೊಂಡರು. ಇದು ನಾವು ಹುಟ್ಟಿ ಬೆಳೆದಿರುವ ಗ್ರಾಮ,ಆದರೆ ಇನ್ನು ಮುಂದೆ ಭಯದಲ್ಲಿಯೇ ಇಲ್ಲಿ ಬದುಕುವುದು ಸಾಧ್ಯವಿಲ್ಲ. ಬಹಳಷ್ಟು ಕುಟುಂಬಗಳು ಈಗಾಗಲೇ ಸುರಕ್ಷಿತ ಸ್ಥಾನಗಳನ್ನು ಅರಸಿಕೊಂಡು ಇಲ್ಲಿಂದ ಹೊರಟು ಹೋಗಿವೆ. ನಾವೂ ಗ್ರಾಮವನ್ನು ತೊರೆಯಲು ಬುಧವಾರ ಬೆಳಿಗ್ಗೆ ನಿರ್ಧರಿಸಿದ್ದೆವು. ಯಾರೂ ನಮ್ಮ ಮನೆಗಳಿಗೆ ಬರಲು ಬಯಸುತ್ತಿಲ್ಲ, ನಮ್ಮ ಜೀವನೋಪಾಯಕ್ಕೂ ಧಕ್ಕೆಯಾಗಿದೆ. ಮುಂಬರುವ ದಿನಗಳಲ್ಲಿ ಗ್ರಾಮದಲ್ಲಿ ಶಾಂತಿ ಮರಳುವ ಸಾಧ್ಯತೆ ತೀರ ಕಡಿಮೆ ಎಂದು ಗ್ರಾಮದ ನಿವಾಸಿ ಇಲ್ಯಾಸ್ ಹೇಳಿದರು.
ಆದರೆ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ರಾಜೇಶ್ ಯಾದವ್ ಅವರು ಗ್ರಾಮಕ್ಕೆ ಧಾವಿಸಿ ಸಂತ್ರಸ್ತ ಕುಟುಂಬವನ್ನು ಮತ್ತು ಗ್ರಾಮದಲ್ಲಿಯ ಇತರ ಮುಸ್ಲಿಮರನ್ನು ಭೇಟಿಯಾದ ನಂತರ ಮುಸ್ಲಿಮ್ ಕುಟುಂಬಗಳು ಗ್ರಾಮವನ್ನು ತೊರೆಯುವ ತಮ್ಮ ನಿರ್ಧಾರವನ್ನು ಸದ್ಯಕ್ಕೆ ಕೈ ಬಿಟ್ಟಿವೆ. ಅವರಿಗೆ ಸುರಕ್ಷತೆಯ ಭರವಸೆ ನೀಡಿರುವ ಯಾದವ ಬಿಸಾಡಾವನ್ನು ತೊರೆಯದಂತೆ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಮಾಯಕ ಜೀವವನ್ನು ಬಲಿ ತೆಗೆದುಕೊಂಡಿರುವ ಗೂಂಡಾ ಪಡೆಯನ್ನು ನಿಯಂತ್ರಿಸುವಲ್ಲಿ ಅವರು ಯಶಸ್ವಿಯಾಗುತ್ತಾರೆಯೇ? ಕಾದು ನೋಡಬೇಕು.

ಅವರೀಗ ತಮ್ಮ ಮನೆಯಲ್ಲಿ ಇರುವುದು ಸುರಕ್ಷಿತವಲ್ಲ. ಕೆಲವು ದಿನಗಳ ಮಟ್ಟಿಗಾದರೂ ಗ್ರಾಮವನ್ನು ತೊರೆದು ಹೋಗುವಂತೆ ಅವರಿಗೆ ಸೂಚಿಸಿದ್ದೇವೆ.-ಇಖ್ಲಾಕ್‌ರ ಭಾವ ಕಲ್ವಾ
ಈಗೇನೋ ಪೊಲೀಸರು ನಮಗೆ ರಕ್ಷಣೆ ನೀಡುತ್ತಿದ್ದಾರೆ. ಆದರೆ ಅವರೇನೂ ಗ್ರಾಮದಲ್ಲಿ ಶಾಶ್ವತವಾಗಿ ಇರುವುದಿಲ್ಲ.
-ಹತ ಇಖ್ಲಾಕ್ ತಾಯಿ ಅಸ್ಗರಿ
ಗೋಹತ್ಯೆ ನಡೆದಿರಲಿಲ್ಲ: ಪೊಲೀಸರು
ಇಕ್ಲಾಖ್ ಹತ್ಯೆ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಪೊಲೀಸರು ಹತ ವ್ಯಕ್ತಿಯ ಮನೆಯಲ್ಲಿ ಗೋಮಾಂಸವನ್ನು ಸೇವಿಸಲಾಗುತ್ತಿದೆ ಎಂದು ಸ್ಥಳೀಯ ದೇವಸ್ಥಾನದಿಂದ ಘೋಷಣೆ ಮಾಡಿದ್ದು ಈ ಬರ್ಬರ ಹತ್ಯೆಗೆ ಮುಖ್ಯ ಕಾರಣವಾಗಿತ್ತು. ಅರ್ಚಕ ಮತ್ತು ಇಬ್ಬರು ಯುವಕರು ಈ ಪ್ರಕರಣದಲ್ಲಿಯ ‘ಮುಖ್ಯ ಕೊಂಡಿಗಳು’ ಎಂದು ಗುರುವಾರ ತಿಳಿಸಿದರು. ಗೋಮಾಂಸ ಸೇವನೆಯ ವಿಷಯವನ್ನು ಧ್ವನಿವರ್ಧಕದಲ್ಲಿ ಪ್ರಕಟಿಸುವಂತೆ ಈ ಯುವಕರು ಅರ್ಚಕನನ್ನು ಬಲವಂತಗೊಳಿಸಿದ್ದರು ಮತ್ತು ದಾಳಿಗೆ ಇದೇ ಕಾರಣವಾಗಿತ್ತು ಎಂದರು.ಈ ಸಂಬಂಧ ಐಪಿಸಿಯ ವಿವಿಧ ಕಲಮ್‌ಗಳಡಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಗೋಮಾಂಸದ ಉಲ್ಲೇಖವಿಲ್ಲ. ಗೋಹತ್ಯೆ ನಡೆದಿತ್ತು ಎನ್ನುವುದು ದಾಳಿಕೋರರ ಆರೋಪವಾಗಿತ್ತಷ್ಟೇ ಎಂದು ಪೊಲೀಸರು ಹೇಳಿದರು.ಹತ ಇಕ್ಲಾಖ್‌ರ ಕುಟುಂಬವು ಸಲ್ಲಿಸಿರುವ ದೂರಿನ ಮೇರೆಗೆ ದಾಖಲಿಸಿರುವ ಎಫ್‌ಐಆರ್‌ನಲ್ಲಿ 10ಜನರ ಜೊತೆಗೆ ಇತರ 100ಕ್ಕೂ ಅಧಿಕ ಅಪರಿಚಿತರನ್ನು ಆರೋಪಿಗಳೆಂದು ಕಾಣಿಸಲಾಗಿದೆ. ಈ ಪೈಕಿ ಏಳು ಜನರನ್ನು ಬುಧವಾರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.

Write A Comment