ಪಾಟ್ನಾ: ಬಿಹಾರ್ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಆರೋಪ, ಪ್ರತ್ಯಾರೋಪಗಳಿಗೆ ಕೊನೆಯಿಲ್ಲದಂತಾಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನರಭಕ್ಷಕ ಎಂದು ಆರ್ಜೆಡಿ ಮುಖಂಡ ಲಾಲು ಯಾದವ್ ಟೀಕಿಸಿದ್ದರೆ, ಶಾಗೆ ನ್ಯಾಯಾಲಯ ಕ್ಲೀನ್ ಚಿಟ್ ನೀಡಿದೆ ಎಂದು ಬಿಜೆಪಿ ಪ್ರತ್ಯಾರೋಪ ಮಾಡಿದೆ.
ಆರ್ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದಾಗ ಗೋದ್ರಾ ರೈಲು ದುರಂತದ ಬಗ್ಗೆ ನಕಲಿ ದಾಖಲೆಗಳ ವರದಿಯನ್ನು ಸಿದ್ದಪಡಿಸಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಕೇಂದ್ರ ಸಚಿವ ಅರುಣ್ ಜೇಟ್ಲಿ ತಿರುಗೇಟು ನೀಡಿದ್ದಾರೆ.
ಏತನ್ಮಧ್ಯೆ, ಗುಜರಾತ್ ದಂಗೆಯಲ್ಲಿ ಸಾವಿರಾರು ಜನರ ಹತ್ಯೆ ಮಾಡಿ ಜೈಲಿನಲ್ಲಿದ್ದ ಅಮಿತ್ ಶಾ ಒಬ್ಬ ನರಹಂತಕ ಎಂದು ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿ ಆರೋಪಿಸಿದ್ದಾರೆ.
ಆರ್ಜೆಡಿ ಪಕ್ಷ ಸಮಾಜವನ್ನು ಇಬ್ಬಾಗಿಸುವ ಪ್ರಯತ್ನ ಮಾಡುತ್ತಿದೆ. ಅಧಿಕಾರದಲ್ಲಿದ್ದಾಗ ಜಂಗಲ್ ರಾಜ್ ನಡೆಸಿದ ಲಾಲು ಯಾದವ್ ಇದೀಗ ಕಾಂಗ್ರೆಸ್ ಮತ್ತು ಜೆಡಿಯು ಜೊತೆ ಸೇರಿ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಜೇಟ್ಲಿ ವಾಗ್ದಾಳಿ ನಡೆಸಿದ್ದಾರೆ.
ಜನತಾ ಪರಿವಾರದ ನಾಯಕರು ಅವಕಾಶವಾದಿ ರಾಜಕಾರಣಿಗಳಾಗಿದ್ದು, ಜಂಗಲ್ ರಾಜ್ ಅಂತ್ಯಗೊಳಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಒಂದು ವೇಳೆ ಬಿಹಾರ್ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಹಲವಾರು ಭರವಸೆಗಳನ್ನು ಈಡೇರಿಸುವುದಾಗಿ ಬಿಜೆಪಿ ಮತದಾರರಿಗೆ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ.