ರಾಷ್ಟ್ರೀಯ

ಬೆಸ್ತರ ಸಮಸ್ಯೆಯ ಬಗ್ಗೆ ಪ್ರಧಾನಿಗೆ ಜಯಾ ಪತ್ರ

Pinterest LinkedIn Tumblr

1jayalಚೆನ್ನೈ, ಅ.1: ಶ್ರೀಲಂಕಾದ ನೌಕಾಪಡೆಯು ಭಾರತೀಯ ಬೆಸ್ತರನ್ನು ಸತತವಾಗಿ ಬಂಧಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ತಮಿಳುನಾಡು ಸರಕಾರ, ಕೊಲಂಬಾದ ‘ಸಂದೇಹಾಸ್ಪದ ಕ್ರಮ’ವು ಸಮುದ್ರದಲ್ಲಿ ‘ಅನಿಶ್ಚಿತ’ ಪರಿಸ್ಥಿತಿಯನ್ನು ಸೃಷ್ಟಿಸಿದೆಯೆಂದು ಕೇಂದ್ರ ಸರಕಾರಕ್ಕೆ ದೂರಿದೆ.

ಸೆ.26ರಂದು ತೂತ್ತುಕುಡಿಯಿಂದ ಮೀನುಗಾರಿಕೆಗೆ ಹೋಗಿದ್ದ ಬೆಸ್ತರನ್ನು ಬಂಧಿಸಿದ ಇತ್ತೀಚಿನ ಪ್ರಕರಣವನ್ನು ಉಲ್ಲೇಖಿಸಿದ ಮುಖ್ಯಮಂತ್ರಿ ಜಯಲಲಿತಾ, ಒಂದು ವಾರದ ಅವಧಿಯಲ್ಲಿ ಇದು ಅಂತಹ 3ನೆಯ ಘಟನೆಯೆಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದ್ದಾರೆ.

ಬದುಕಿನ ಈ ಸೂಕ್ಷ್ಮ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲು ತನ್ನ ಸರಕಾರವು ಹೊಂದಾಣಿಕೆಯ ಮನಸ್ಥಿತಿಯಲ್ಲಿ ಹಲವು ಕ್ರಮಗಳನ್ನು ಕೈಗೊಂಡಿರುವ ಹೊರತಾಗಿಯೂ, ಶ್ರೀಲಂಕಾ ಸರಕಾರದ ಸಂದೇಹಾಸ್ಪದ ಕ್ರಮದಿಂದಾಗಿ ಸಮುದ್ರದಲ್ಲಿ ಪರಿಸ್ಥಿತಿಯು ಅನಿಶ್ಚಿತವಾಗುಳಿದಿದೆಯೆಂದು ಜಯಾ ಪತ್ರವೊಂದರಲ್ಲಿ ಮೋದಿಯವರಿಗೆ ಹೇಳಿದ್ದಾರೆ.

ಸೆ.30ರಂದು ಬರೆದಿರುವ ಈ ಪತ್ರವನ್ನು ರಾಜ್ಯ ಸರಕಾರವಿಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.

ಇದು ತಮಿಳುನಾಡಿನ ಬೆಸ್ತರನ್ನು ಬಂಧಿಸಿದ ಇನ್ನೊಂದು ಘಟನೆಯಾಗಿದೆ. ಶ್ರೀಲಂಕಾದ ನೌಕಾಪಡೆಯು, ತಮ್ಮ ‘ಪಾರಂಪರಿಕ ಜಲದೊಳಗೆ’ ಮೀನುಗಾರಿಕೆ ನಡೆಸುವ ಅವರ ಹಕ್ಕನ್ನು ಮತ್ತೊಮ್ಮೆ ಕಸಿದುಕೊಂಡಿದೆಯೆಂದು ಜಯಾ ದೂರಿದ್ದಾರೆ.

‘‘ತಮಿಳುನಾಡಿನ ನಮ್ಮ ಭಾರತೀಯ ಮೀನುಗಾರರ ಹಕ್ಕುಗಳು ಮತ್ತು ಹಿತಾಸಕ್ತಿಯನ್ನು ಎತ್ತಿ ಹಿಡಿಯಲು ಪ್ರಬಲವಾದ ರಾಜತಾಂತ್ರಿಕ ವಿರೋಧವನ್ನು ದಾಖಲಿಸುವಂತೆ ನಾನು ಭಾರತ ಸರಕಾರವನ್ನು ವಿನಂತಿಸುತ್ತಿದ್ದೇನೆ. ತಮ್ಮ ಪಾರಂಪರಿಕ ಜಲದಲ್ಲಿ ಮೀನುಗಾರಿಕೆ ನಡೆಸುವ ವೇಳೆ ನಮ್ಮ ಬೆಸ್ತರ ಬಂಧನದ ಸರಣಿಯನ್ನು ಶ್ರೀಲಂಕಾ ಸರಕಾರ ಮುಂದುವರಿಸಿದೆ’’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಶ್ರೀಲಂಕಾದೊಂದಿಗಿನ ಅಂತಾರಾಷ್ಟ್ರೀಯ ಜಲಗಡಿಯು ನಿಗದಿಯಾಗಿದೆಯೆಂದು ಪರಿಭಾವಿಸಬಾರದು. ಹೊಸದಿಲ್ಲಿಯು ಕಛತೀವು ದ್ವೀಪವನ್ನು ತನ್ನ ದಕ್ಷಿಣದ ನೆರೆಗೆ ಬಿಟ್ಟುಕೊಟ್ಟ, ಕೊಲಂಬೊದೊಂದಿಗಿನ 1974 ಹಾಗೂ 1976ರ ಒಪ್ಪಂದಗಳನ್ನು ಕೇಂದ್ರ ಸರಕಾರವು ಪುನಃ ಪರಿಶೀಲಿಸಬೇಕೆಂಬ ತನ್ನ ಹಿಂದಿನ ಬೇಡಿಕೆಯನ್ನು ಜಯಾ ಪುನರುಚ್ಚರಿಸಿದ್ದಾರೆ.
ಬೆಸ್ತರಿಂದ ವಶಪಡಿಸಿ ಕೊಂಡ ದೋಣಿಗಳನ್ನು ಬಿಡುಗಡೆಗೊಳಿಸದಿರುವ ಶ್ರೀಲಂಕಾದ ‘ವ್ಯೆಹ’ವನ್ನು ಖಂಡಿಸಿರುವ ಅವರು, ಇದರಿಂದ ಅವರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮವಾಗುತ್ತಿದೆ ಎಂದಿದ್ದಾರೆ.
‘‘ಈ ಸಮಸ್ಯೆಯ ಬಗ್ಗೆ ನೀವು ವೈಯಕ್ತಿಕವಾಗಿ ಮಧ್ಯಪ್ರವೇಶಿಸಬೇಕು. ನಮ್ಮ ಬೆಸ್ತರು ಸ್ವತಂತ್ರವಾಗಿ ಹಾಗೂ ನೆಮ್ಮದಿಯಿಂದ ತಮ್ಮ ಜೀವನೋಪಾಯ ಮುಂದುವರಿಸಲು ಅವಕಾಶ ನೀಡುವಂತೆ ಎಲ್ಲ ರಾಜತಾಂತ್ರಿಕ ಮಾರ್ಗವನ್ನುಪಯೋಗಿಸಿ ಖಚಿತಪಡಿಸಬೇಕೆಂದು ನಾನು ತಮ್ಮನ್ನು ವಿನಂತಿಸುತ್ತಿದ್ದೇನೆ’’

‘‘ಈಗಾಗಲೇ ಶ್ರೀಲಂಕಾದ ವಶದಲ್ಲಿರುವ 21 ಮಂದಿ ಮೀನುಗಾರರು ಹಾಗೂ ಅವರ 30 ದೋಣಿಗಳ ಸಹಿತ ಈ 7 ಮಂದಿ ಬೆಸ್ತರ ಬಿಡುಗಡೆಗೆ ತಮ್ಮ ತಕ್ಷಣ ಮಧ್ಯಪ್ರವೇಶಕ್ಕೆ ನಾನು ಇನ್ನೊಮ್ಮೆ ಮನವಿ ಮಾಡುತ್ತಿದ್ದೇನೆ’’ ಎಂದು ಜಯಲಲಿತಾ, ಮೋದಿಯವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

Write A Comment