ಆಗ್ರಾ, ಸೆ. 30: 11 ವರ್ಷದ ಬಾಲಕಿಯೋರ್ವಳು ಜೀವಂತ ಸಮಾಧಿಯಾಗಲು ಯತ್ನಿಸಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಜೀವಂತ ಸಮಾಧಿಯಾಗಲು ಹೋದ ಬಾಲಕಿಯ ಕಥೆ ಕುತೂಹಲಕಾರಿಯಾಗಿದೆ.
ಬಾಲಕಿಯ ಅಪ್ಪ ನಿವೃತ್ತ ಶಿಕ್ಷಕ, ಆತನಿಗೆ ಐವರು ಮಕ್ಕಳು, ಆತ ಹೇಳುವ ಪ್ರಕಾರ ಬಾಲಕಿಗೆ 3 ವರ್ಷವಿದ್ದಾಗ ಊರಲ್ಲಿ ಬರ ಆವರಿಸಿತ್ತು. ಆಗ ಬಾಲಕಿ ಮಳೆಗಾಗಿ ಗ್ರಾಮದ ಹೊಲಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಳು. ಪ್ರಾರ್ಥನೆ ಸಲ್ಲಿಸಿದ ಬಾಲಕಿ ಊರಿನ ಜನಕ್ಕೆ `ಭಗವತ್ ಪಥ` ಮತ್ತು `ಬಾಂಧಾರ` ಎನ್ನೋ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲು ಸೂಚಿಸಿದರು. ಜನ ಆ ಕಾರ್ಯಕ್ರಮ ನೆರವೇರಿಸುತ್ತಿದ್ದಂತೆ ಮಳೆ ಬಂತಂತೆ.
ಇದರ ಬೆನ್ನಲ್ಲೆ ಬಾಲಕಿ ವರ್ಷಗಳಿಂದ ಮಾತು ನಿಲ್ಲಿಸಿ ಮೌನಕ್ಕೆ ಶರಣಾದಳಂತೆ. ಬಳಿಕ ತಾನು ಎಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಳೋ ಅಲ್ಲಿ ದೇಗುಲ ನಿರ್ಮಿಸುವಂತೆ ಗ್ರಾಮದ ಜನತೆಗೆ ಸೂಚಿಸಿದಳಂತೆ. ಒಂದು ವಾರದ ಹಿಂದೆ ತಮ್ಮ ತಂದೆ ತಾಯಿಗೆ ತನ್ನನ್ನು ಹಾಲು ಮತ್ತು ಗಂಗಾಜಲದಿಂದ ಸ್ನಾನ ಮಾಡಿಸುವುದಾಗಿ ಹೇಳಿದ್ದಾಳೆ. ಸ್ನಾನ ಬಳಿಕ ತಾನು ಜೀವಂತ ಸಮಾಧಿಯಾಗುವುದಾಗಿ ಹೇಳಿದ್ದಾಳೆ. ಇದೆಲ್ಲವೂ ಸನ್ನೆ ಮೂಲಕ ತುಂಡು ಪೇಪರ್ನಲ್ಲಿ ಬರೆಯುವ ಮೂಲಕ ನಡೆದಿದೆ.
ಇಷ್ಟಾದ ಮೇಲೆ ಸುದ್ದಿ ಸುತ್ತಮುತ್ತಲ ಗ್ರಾಮಗಳಿಗೆ ವ್ಯಾಪಿಸಿ ಜನ ಬಾಲಕಿ ದರ್ಶನಕ್ಕೆ ಆಗಮಿಸಿದ್ದಾರೆ. ಹಾಲು, ಗಂಗಾಜಲ ಪೂರೈಸಿದ್ದಾರೆ. ಜೀವಂತ ಸಮಾಧಿ ಆಗಲು ಹೋದ ಬಾಲಕಿಯನ್ನು ಪೊಲೀಸರು ತಡೆದಿದ್ದಾರೆ.
