ರಾಷ್ಟ್ರೀಯ

ಗೋವಾದ ಕಾಟೆಬೈನಾದಲ್ಲಿ 157 ಮನೆ ತೆರವು : ಅಪಾರ ಕನ್ನಡಿಗರು ಬೀದಿ ಪಾಲು

Pinterest LinkedIn Tumblr

goaಪಣಜಿ,ಸೆ.28- ಗೋವಾದ ಕಾಟೆಬೈನಾದಲ್ಲಿ ಅಲ್ಲಿನ ಗೋವಾ ಸರ್ಕಾರ 157 ಕನ್ನಡಿಗರ ಮನೆ ತೆರವುಗೊಳಿಸಿದ್ದು, ಇದೀಗ ಬೈನಾ ಬೀಚ್‌ನಲ್ಲಿ ಸ್ಮಶಾನ ಸದೃಶ ವಾತಾವರಣ ನಿರ್ಮಾಣವಾಗಿದೆ.

ಕನ್ನಡಿಗರು ಬದುಕಿ ಬಾಳಿದ ಮನೆಯನ್ನೇ ಸರ್ಕಾರ ಕೆಡ ಹಾಕಿ ಅನ್ಯಾಯವೆಸಗಿದೆ. ತಮ್ಮ ಮನೆಯ ಅವಶೇಷಗಳ ಬಳಿ ಕುಳಿತು ಕನ್ನಡಿಗರು ಸದ್ಯ ಕಣ್ಣೀರಿಡುತ್ತಿದ್ದು, ಅಳಿದುಳಿದ ಅವಶೇಷಗಳನ್ನು ಆಯ್ದುಕೊಳ್ಳುವಲ್ಲಿ ನಿರತರಾಗಿದ್ದಾರೆ. ಮೀನಾಮೇಷ ಏಕೆ? : ಬೈನಾದಲ್ಲಿನ ಕನ್ನಡಿಗರ ಮೇಲೆ 2004ರಿಂದ ಗೋವಾ ಸರ್ಕಾರ ಸತತ ದಬ್ಬಾಳಿಕೆ ನಡೆಸಿ ಕನ್ನಡಿಗರನ್ನು ಬೀದಿಪಾಲು ಮಾಡುತ್ತಿದ್ದರೂ ಕರ್ನಾಟಕ ಸರ್ಕಾರ ಗೋವಾ ಕನ್ನಡಿಗರ ಸಮಸ್ಯೆಯನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸದಿ ರುವುದು ದೌರ್ಭಾಗ್ಯವೇ ಸರಿ.

ದಿಢೀರನೆ ಗೋವಾ ಸರ್ಕಾರ 157 ಕನ್ನಡಿಗರ ಮನೆ ತೆರವುಗೊಳಿಸಿದ ನಂತರ ಕರ್ನಾಟಕ ಸರ್ಕಾರ ಕೂಡಲೆ ಗೋವಾ ಮುಖ್ಯಮಂತ್ರಿಗಳೊಂದಿಗೆ ನೇರವಾಗಿ ಚರ್ಚಿಸಿ ಬೈನಾ ನಿರಾಶ್ರಿತ ಕನ್ನಡಿಗರಿಗೆ ಶಾಶ್ವತ ಪುನರ್ವಸತಿಗೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಗೋವಾ ಸಿಎಂ ಭೇಟಿಗೆ ಮೀನಾಮೇಷ ಎಣಿಸುತ್ತಿರುವುದೇಕೆ…? ಎಂಬುದು ಪ್ರಶ್ನೆಯಾಗಿ ಉಳಿದಿದೆ. ಬಹುಶಃ ಗೋವಾ ಕನ್ನಡಿಗರ ಸಮಸ್ಯೆಯ, ಪರಿಸ್ಥಿತಿಯ ಗಂಭೀರತೆಯನ್ನು ಕರ್ನಾಟಕ ಸರ್ಕಾರ ಇದುವರೆಗೂ ಅರಿತುಕೊಂಡಿಲ್ಲವೇ… ಎಂದು ಗೋವಾ ಕನ್ನಡ ಸಂಘಟನೆಗಳು ಪ್ರಶ್ನಿಸುವಂತಾಗಿದೆ.

ಗಂಜಿ ಕೇಂದ್ರವೂ ಇಲ್ಲ:  ಕಾಟೆಬೈನಾ ದಲ್ಲಿ ಗೋವಾ ಸರ್ಕಾರ ಕನ್ನಡಿಗರ ಮನೆಗಳನ್ನು ಧ್ವಂಸಗೊಳಿಸಿದ್ದು, ಸದ್ಯ ಕನ್ನಡಿಗರು ಬಿರುಬಿಸಿಲಿನಲ್ಲಿ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲ ಎಂಬಂತಾಗಿದೆ. ಇಂತಹ ಪರಿಸ್ಥಿತಿಯಿದ್ದರೂ ಕೂಡ ತುರ್ತಾಗಿ ಗೋವಾ ಸರ್ಕಾರವಾಗಲೀ ಅಥವಾ ಕರ್ನಾಟಕ ಸರ್ಕಾರ ವಾಗಲೀ ಗಂಜಿ ಕೇಂದ್ರ ತೆರೆಯುವಷ್ಟು ಮಾನವೀಯತೆಯನ್ನೂ ತೋರಿಸುತ್ತಿಲ್ಲ.  ಬೈನಾ ನಿರಾಶ್ರಿತರು ಶಾಶ್ವತ ಪುನರ್ವಸತಿಗಾಗಿ ಕಳೆದೊಂದು ದಶಕಗಳಿಂದ ಹೋರಾಟ ನಡೆಸುತ್ತಲೇ ಇದ್ದರೂ ಇದುವರೆಗೂ ಯಾವುದೇ ಸರ್ಕಾರಗಳು ಮಾನವೀಯತೆಯ ದೃಷ್ಟಿಯಿಂದಲಾದರೂ ಪುನರ್ವಸತಿ ವ್ಯವಸ್ಥೆ ಕಲ್ಪಿಸಿಕೊಡಲು ಮುಂದಾಗದಿರುವುದು ವಿಷಾದಕರ ಸಂಗತಿಯೇ ಸರಿ. ಸದ್ಯ ಬೈನಾ ನಿರಾಶ್ರಿತರಿಗೆ ಕರ್ನಾಟಕ ಸರ್ಕಾರ ತುರ್ತಾಗಿ ನೆರವಿಗೆ ಧಾವಿಸಿ ಬರುವ ಅಗತ್ಯವಿದೆ.

Write A Comment