ಬೆಂಗಳೂರು, ಸೆ.28- ರಾಜ್ಯಕ್ಕೆ ರಾಹುಲ್ಗಾಂಧಿ ಭೇಟಿ ನೀಡುತ್ತಿರುವುದು ಸಂಕಷ್ಟದಲ್ಲಿರುವ ರೈತರಲ್ಲಿ ಮಂದಹಾಸ ಮೂಡಿಸುವುದೇ ? ಜಡತ್ವ ತುಂಬಿರುವ ಕಾಂಗ್ರೆಸ್ ಪಕ್ಷಕ್ಕೆ ಸ್ಫೂರ್ತಿ ತುಂಬುವುದೇ ಅಥವಾ ಬಂದಪುಟ್ಟ, ಹೋದಪುಟ್ಟ ಎಂಬಂತಾಗುವುದೇ ಎಂಬ ಜಿಜ್ಞಾಸೆ ಕಾಡತೊಡಗಿದೆ. ರಾಜ್ಯದಲ್ಲಿ ಸಾಲಬಾಧೆ ಸೇರಿದಂತೆ ವಿವಿಧ ಕಾರಣಗಳಿಂದ ಸುಮಾರು 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ ಭೇಟಿ ನೀಡಲು ಉದ್ದೇಶಿಸಿರುವ ಮಂಡ್ಯ ಮತ್ತು ಕೊಪ್ಪಳ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಡ್ಯದಲ್ಲಿರುವ ಐದು ಸಕ್ಕರೆ ಕಾರ್ಖಾನೆಗಳಾದ ಮೈಶುಗರ್ ಸಕ್ಕರೆ ಕಂಪನಿ, ಚಾಮುಂಡೇಶ್ವರಿ ಸಕ್ಕರೆ ಕಂಪನಿ, ಐಸಿಎಲ್ ಸಕ್ಕರೆ ಕಂಪನಿ, ಪಾಂಡವಪುರ ಸಕ್ಕರೆ ಕಂಪನಿಗಳಿಂದ ರೈತರಿಗೆ 45 ಕೋಟಿ ರೂ. ಬಾಕಿ ಬರಬೇಕಿದೆ.
ಈ ವರ್ಷ ಬೆಳೆದ ಕಬ್ಬು ಅರೆಯಬೇಕಾಗಿದ್ದ ಮೈಶುಗರ್ ಕಾರ್ಖಾನೆಯ ವೈಲರ್ ಕೆಟ್ಟು 2 ತಿಂಗಳಾಗಿದೆ. ಎರಡು ತಿಂಗಳಿನಿಂದ ಕಬ್ಬು ಅರೆಯುತ್ತಿಲ್ಲ. ಮಂಡ್ಯ ಜಿಲ್ಲಾಧಿಕಾರಿ ಎಲ್ಲಾ ತಾಲೂಕು ಅಧಿಕಾರಿಗಳಿಗೆ ಪತ್ರ ಬರೆದು ರೈತರು ದೀರ್ಘಾವಧಿ ಬೆಳೆ ಬೆಳೆಯದಂತೆ ಜಾಗೃತಿ ಮೂಡಿಸಬೇಕೆಂದು ಸೂಚಿಸಿದ್ದಾರೆ. ಅಣೆಕಟ್ಟಿನಲ್ಲಿ ನೀರಿಲ್ಲದ ಕಾರಣ ಅಲ್ಪಾವಧಿ ಬೆಳೆ ಬೆಳೆಯುವಂತೆ ರೈತರಲ್ಲಿ ಜಾಗೃತಿ ಮೂಡಿಸಬೇಕೆಂದು ತಾಲೂಕು ಹೋಬಳಿ ಮಟ್ಟದ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಕೆಆರ್ಎಸ್ ಮತ್ತು ಕಬಿನಿಯಲ್ಲಿರುವ ನೀರು ತಮ್ಮ ಕಣ್ಣ ಮುಂದೆಯೇ ತಮಿಳುನಾಡಿಗೆ ಹರಿದುಹೋಗುತ್ತಿದೆ. ಜಿಲ್ಲಾಧಿಕಾರಿಗಳು ದೀರ್ಘಾವಧಿ ಬೆಳೆ ಬೆಳೆಯದಂತೆ ಪತ್ರ ಬರೆದಿದ್ದಾರೆ.
ಸಾಲಬಾಧೆಯಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎಐಸಿಸಿ ಉಪಾಧ್ಯಕ್ಷರಾದ ರಾಹುಲ್ಗಾಂಧಿ ಅವರು ಮಂಡ್ಯ ಜಿಲ್ಲೆಗೆ ಭೇಟಿ ನೀಡುತ್ತಿರುವುದು ಇಲ್ಲಿನ ರೈತರೊಂದಿಗೆ ಸಂವಾದ ನಡೆಸುತ್ತಿರುವುದು ಏನಾದರೂ ಆಶಾಕಿರಣ ಉಂಟುಮಾಡುತ್ತದೆಯೇ ಎಂಬುದನ್ನು ಇಲ್ಲಿನ ಜನ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಸಾಲಬಾಧೆಯಿಂದ ರೈತರು ಆತ್ಮಹತ್ಯೆಗೆ ಶರಣಾದಾಗ ಕೇಂದ್ರ ಸಚಿವ ಎಸ್.ಎಂ.ಕೃಷ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಅಂಬರೀಶ್ ಸೇರಿದಂತೆ ಎಲ್ಲಾ ಮುಖಂಡರು ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಪ್ರತಿಪಕ್ಷದ ನಾಯಕರುಗಳೂ ಕೂಡ ಇಲ್ಲಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು.
ಸರ್ಕಾರದ ವತಿಯಿಂದ ಪರಿಹಾರವನ್ನು ಕೂಡ ನೀಡಲಾಗಿತ್ತು. ಕೊಪ್ಪಳ ಜಿಲ್ಲೆಯಲ್ಲೂ ಕೂಡ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳ ಮನೆಗಳಿಗೆ ತೆರಳಿ ಸಾಂತ್ವನ ಹೇಳಿ ಪರಿಹಾರ ನೀಡಲಾಗಿತ್ತು. ಇದೇ ರೀತಿ ಎಲ್ಲಾ ಜಿಲ್ಲೆಯಲ್ಲೂ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಪರಿಹಾರ ಘೋಷಿಸಿದ್ದರು. ಆದರೂ ರೈತರ ಆತ್ಮಹತ್ಯೆ ನಿಂತಿಲ್ಲ. ರಾಜ್ಯದಲ್ಲಿ ಸಮರ್ಪಕ ಮಳೆಯಾಗದೆ ಬರಗಾಲದ ಪರಿಸ್ಥಿತಿ ಎದುರಾಯಿತು. ಸುಮಾರು 165 ತಾಲೂಕುಗಳಲ್ಲಿ ಬರದ ಛಾಯೆ ಮೂಡಿತು. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ನೆರವಿಗೆ ಮನವಿ ಸಲ್ಲಿಸಲಾಯಿತು.
ಈ ನಡುವೆ ಉತ್ತರ ಕರ್ನಾಟಕ ಭಾಗದಲ್ಲಿ ಕಳಸಾ ಬಂಡೂರಿ ಯೋಜನೆಗಾಗಿ ಆಗ್ರಹಿಸಿ ಕಳೆದ 75 ದಿನಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಸೆ.26 ರಂದು ಈ ಯೋಜನೆ ಜಾರಿಗೆ ಆಗ್ರಹಿಸಿ ಕರ್ನಾಟಕ ಬಂದ್ ಕೂಡ ಮಾಡಲಾಗಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ನ ಭರವಸೆಯ ನಾಯಕ ರಾಹುಲ್ಗಾಂಧಿ ರಾಜ್ಯಕ್ಕೆ ಆಗಮಿಸಿ ರೈತರಿಗೆ ವಿದರ್ಭ ಮಾದರಿಯ ಪ್ಯಾಕೇಜ್ ಘೋಷಿಸುವಂತೆ ಸರ್ಕಾರಕ್ಕೆ ಸಲಹೆ ನೀಡಲಿದ್ದಾರೆಯೇ ಅಥವಾ ಕೇವಲ ಸಂವಾದ ನಡೆಸಲಿದ್ದಾರೆಯೇ?.
75 ದಿನಗಳಿಂದ ನಡೆಯುತ್ತಿರುವ ಕಳಸಾ ಬಂಡೂರಿ ಹೋರಾಟದ ಸ್ಥಳಕ್ಕೆ ತೆರಳಿ ಆ ಭಾಗದ ಜನರಿಗೆ ಆತ್ಮಸ್ಥೈರ್ಯ ತುಂಬುತ್ತಾರೆಯೇ ಕಾದು ನೋಡಬೇಕು.ಇಷ್ಟು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ಸಮಸ್ಯೆ ಬಗೆಹರಿಸಬೇಕಾದ ಜನಪ್ರತಿನಿಧಿಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಮದ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಬಗೆಹರಿಸಬೇಕು. ಈ ಬಗ್ಗೆ ರಾಹುಲ್ ಅವರು ಪ್ರತಿಭಟನಾಕಾರರಿಗೆ ಯಾವ ರೀತಿ ಭರವಸೆ ನೀಡಲಿದ್ದಾರೆ. ಅವರನ್ನು ಭೇಟಿ ಮಾಡುತ್ತಾರೆಯೇ ಅಥವಾ ಹಾಗೆಯೇ ಹಿಂದಿರುಗುತ್ತಾರೆಯೇ ಎಂಬುದು ತಿಳಿದುಬಂದಿಲ್ಲ.
ರಾಹುಲ್ ಕಾರ್ಯಕ್ರಮ ನಿಗದಿಯಂತೆ ಮಂಡ್ಯ ಮತ್ತು ಕೊಪ್ಪಳ ಜಿಲ್ಲೆಗೆ ಮಾತ್ರ ಭೇಟಿ ಇದೆ. ಈ ಭೇಟಿಯಿಂದ ರಾಜ್ಯದ ರೈತರ ಸಮಸ್ಯೆ ಬಗೆಹರಿಯುತ್ತದೆಯೇ ? ಇನ್ನು ಕಾಂಗ್ರೆಸ್ ಪಕ್ಷದಲ್ಲಿ ವಲಸಿಗ ಮತ್ತು ಮೂಲ ಕಾಂಗ್ರೆಸ್ಸಿಗರ ಭಿನ್ನಮತ ಭುಗಿಲೆದ್ದಿದೆ. ಎರಡೂವರೆ ವರ್ಷಗಳಾದರೂ ಸಚಿವ ಸಂಪುಟ ಪುನಾರಚನೆಯಾಗಿಲ್ಲ. ಬಾಕಿ ಉಳಿದಿರುವ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕವಾಗಿಲ್ಲ. ನಿಗಮ ಮಂಡಳಿಗಳ ಸದಸ್ಯ, ನಿರ್ದೇಶಕರ ನೇಮಕದ ಪಟ್ಟಿ ಶೈತ್ಯಾಗಾರ ಸೇರಿದೆ. ಎರಡೂವರೆ ವರ್ಷವಾದರೂ ಯಾವುದೇ ಒಂದು ಸಣ್ಣ ಅಧಿಕಾರ ಸಿಗದೆ ಕಾರ್ಯಕರ್ತರು ತೀವ್ರ ನಿರಾಸೆಯಾಗಿದ್ದಾರೆ. ಈ ಬಗ್ಗೆ ದೂರು ಸಲ್ಲಿಸಲು ಕೂಡ ನಿರ್ಧರಿಸಲಾಗಿದೆ.