ರಾಷ್ಟ್ರೀಯ

ಬಿಹಾರ ಚುನಾವಣಾ ಕಣಕ್ಕಿಳಿದ ಲಾಲು ಪ್ರಸಾದರ ಪುತ್ರದ್ವಯರು

Pinterest LinkedIn Tumblr

bihar-jul13-1_647_070315014804ಪಾಟ್ನಾ, ಸೆ.23: ತಮ್ಮ ತಂದೆಯ ಹೆಜ್ಜೆಗುರುತುಗಳಲ್ಲೇ ಅಡಿಯಿಡುತ್ತಿರುವ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಇಬ್ಬರು ಪುತ್ರರು ಬುಧವಾರ ಬಿಹಾರ ಚುನಾವಣಾ ಕಣವನ್ನು ಪ್ರವೇಶಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ಯಾದವ್ ಅವರು ತೇಜಪ್ರತಾಪ್ ಯಾದವ್ ಮತ್ತು ತೇಜಸ್ವಿ ಯಾದವ್ ಅವರ ಉಮೇದುವಾರಿಕೆಗಳನ್ನು ಇಲ್ಲಿ ಪ್ರಕಟಿಸಿದರು.

‘ಮಹಾ ಜಾತ್ಯತೀತ ಮೈತ್ರಿಕೂಟ’ದ ಅಭ್ಯರ್ಥಿಗಳ ಪಟ್ಟಿಯನ್ನು ಕುಮಾರ್ ಬಿಡುಗಡೆಗೊಳಿಸಿದ್ದು, ತೇಜಪ್ರತಾಪ್ ಮತ್ತು ತೇಜಸ್ವಿ ಅನುಕ್ರಮವಾಗಿ ಯಾದವರ ಪ್ರಾಬಲ್ಯವಿರುವ ವೈಶಾಲಿ ಜಿಲ್ಲೆಯ ಮಹುವಾ ಮತ್ತು ರಾಘೋಪುರ ವಿಧಾನಸಭಾ ಕ್ಷೇತ್ರಗಳಿಂದ ತಮ್ಮ ಅದೃಷ್ಟವನ್ನು ಒರೆಗೆ ಹಚ್ಚಲಿದ್ದಾರೆ. ಇವೆರಡೂ ಕ್ಷೇತ್ರಗಳು 2010ರಿಂದಲೂ ಜೆಡಿಯು ತೆಕ್ಕೆಯಲ್ಲಿದ್ದವು.

ಇದರಿಂದ ಅಸಮಾಧಾನಗೊಂಡಿರುವ ಮಹುವಾ ಶಾಸಕ ರವೀಂದ್ರ ರಾಯ್ ಅವರು ಎಚ್‌ಎಎಂ(ಎಸ್)ಗೆ ಸೇರ್ಪಡೆಗೊಂಡಿದ್ದು, ಈಗ ಆ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಅತ್ತ ರಾಘೋಪುರದಲ್ಲಿ 2010ರಲ್ಲಿ ರಾಬ್ಡಿ ದೇವಿಯವರಿಗೆ ಸೋಲಿನ ಕಹಿ ಉಣ್ಣಿಸಿದ್ದ ಸತೀಶ್ ಕುಮಾರ್ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಪಕ್ಷವು ಅವರನ್ನು ತನ್ನ ಅಭ್ಯರ್ಥಿಯಾಗಿಸಿದೆ.
ಮಖ್ದುಮ್‌ಪುರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಿಂದುಸ್ಥಾನ್ ಅವಾಮ್ ಮೋರ್ಚಾ(ಎಚ್‌ಎಎಂ-ಎಸ್)ದ ನಾಯಕ ಜಿತನ್ ರಾಂ ಮಾಂಝಿ ಅವರ ವಿರುದ್ಧ ಸೆಣಸಾಡಲು ಸುಭೇದಾರ್ ಸಿಂಗ್ ಅವರನ್ನು ತನ್ನ ಹುರಿಯಾಳನ್ನಾಗಿ ಜೆಡಿಯು ಆಯ್ಕೆ ಮಾಡಿದೆ.
ಮಾಂಜಿ ಸ್ಪರ್ಧಿಸುತ್ತಿರುವ ಇನ್ನೊಂದು ವಿಧಾನಸಭಾ ಕ್ಷೇತ್ರ ಇಮಾಮ್‌ಗಂಜ್(ಪ.ಜಾ)ನಲ್ಲಿ ಹಾಲಿ ಸ್ಪೀಕರ್ ಉದಯ ನಾರಾಯಣ ಚೌಧರಿ ಅವರು ಜೆಡಿಯು ಅಭ್ಯರ್ಥಿಯಾಗಿದ್ದಾರೆ.
25 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್‌ಗಳನ್ನು ನೀಡಲಾಗಿದ್ದು, ಇದು ಒಟ್ಟೂ ಸ್ಥಾನಗಳ ಶೇ.10ರಷ್ಟಾಗಿದೆ. ಸ್ಥಾನ ಹಂಚಿಕೆ ಒಪ್ಪಂದದಂತೆ ಜೆಡಿಯು ಮತ್ತು ಆರ್‌ಜೆಡಿ ತಲಾ 101 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 41 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ರಾಜಗೀರ್(ಪ.ಜಾ) ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ನಂತರ ಘೋಷಿಸುವುದಾಗಿ ಕುಮಾರ್ ತಿಳಿಸಿದರು.
ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯ ಬೆನ್ನ ಹಿಂದೆಯೇ ತಾವು ಬಯಸಿದ್ದ ವ್ಯಕ್ತಿಗಳಿಗೆ ಟಿಕೆಟ್ ನೀಡಲಾಗಿಲ್ಲವೆಂದು ದೂರಿ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಜೆಡಿಯು ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು.

Write A Comment