ರಾಷ್ಟ್ರೀಯ

ಬಿಹಾರ: ಜೆಡಿಯು, ಆರ್‌ಜೆಡಿ, ಕಾಂಗ್ರೆಸ್ ಅಭ್ಯರ್ಥಿಗಳ ಜಂಟಿ ಪಟ್ಟಿ ಬಿಡುಗಡೆ

Pinterest LinkedIn Tumblr

bihar-map_650x400_71428438239ಪಾಟ್ನಾ, ಸೆ.23: ಬಿಹಾರ ವಿಧಾನಸಭಾ ಚುನಾವಣೆಗೆ ಮಹಾಮೈತ್ರಿಕೂಟದ 242 ಅಭ್ಯರ್ಥಿಗಳ ಪಟ್ಟಿಯನ್ನು ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ಧುರೀಣ ನಿತೀಶ್‌ಕುಮಾರ್ ಬುಧವಾರ ಇಲ್ಲಿ ಬಿಡುಗಡೆ ಮಾಡಿದರು.
ಎಸ್‌ಸಿ/ಎಸ್‌ಟಿ ಮತ್ತು ಹಿಂದುಳಿದ ಸಮುದಾಯಗಳಿಗೆ ಮಹಾಮೈತ್ರಿಕೂಟದ ಪಟ್ಟಿಯಲ್ಲಿ ಬಹುತೇಕ ಸ್ಥಾನಗಳು ಲಭಿಸಿವೆ. ಸಮಾಜದ ಎಲ್ಲ ಸಮುದಾಯಗಳು ಮಹಾಮೈತ್ರಿಕೂಟದ ಅಭ್ಯರ್ಥಿಗಳ ಪಟ್ಟಿಯಲ್ಲಿ ಪ್ರಾತಿನಿಧ್ಯವನ್ನು ಪಡೆದುಕೊಂಡಿವೆ. ಸಾಮಾನ್ಯ ವರ್ಗಕ್ಕೆ ಶೇ.16ರಷ್ಟು, ಹಿಂದುಳಿದ ಸಮುದಾಯಗಳಿಗೆ ಶೇ.55ರಷ್ಟು, ಎಸ್‌ಸಿ/ಎಸ್‌ಟಿ ವರ್ಗಕ್ಕೆ ಶೇ.15ರಷ್ಟು ಹಾಗೂ ಅಲ್ಪಸಂಖ್ಯಾತರಿಗೆ ಶೇ.14ರಷ್ಟು ಸ್ಥಾನವನ್ನು (ಸೀಟು) ಒದಗಿಸಲಾಗಿದೆ ಎಂದು ನಿತೀಶ್‌ಕುಮಾರ್ ಈ ಸಂದರ್ಭದಲ್ಲಿ ಹೇಳಿದರು.
ಮಹಾಮೈತ್ರಿಕೂಟದಲ್ಲಿ ಒಗ್ಗಟ್ಟಿದೆ. ಎನ್‌ಡಿಎ ಕೂಟದಂತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಅವರು ತಿಳಿಸಿದರು.
ಬಿಜೆಪಿಯ ‘ವಿಭಾಜಕ’ ರಾಜಕಾರಣವನ್ನು ಬಿಹಾರದ ಜನತೆ ಗಮನಿಸುತ್ತಿದ್ದಾರೆ. ಅಸೆಂಬ್ಲಿ ಚುನಾವಣೆಯಲ್ಲಿ ಆ ಪಕ್ಷಕ್ಕೆ ತಕ್ಕ ಉತ್ತರವನ್ನು ನೀಡಲಿದ್ದಾರೆ ಎಂದು ಅವರು ನುಡಿದರು.
ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗಳೆರಡೂ ಮೀಸಲಾತಿಗೆ ವಿರೋಧಿಯಾಗಿವೆ. ಆ ಪಕ್ಷಕ್ಕೆ ಸುಪ್ರೀಂ ಕೋರ್ಟ್‌ನಂತಿರುವ ಆರ್‌ಎಸ್‌ಎಸ್‌ನ ತಾಳಕ್ಕೆ ತಕ್ಕಂತೆ ಬಿಜೆಪಿ ಕುಣಿಯುತ್ತಿದೆ ಎಂದು ಅವರು ಕಟುವಾಗಿ ಟೀಕಿಸಿದರು.
ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕನಂತಿರುವ ಆರ್‌ಎಸ್‌ಎಸ್, ಮೀಸಲಾತಿ ಸೌಲಭ್ಯದ ಪರಾಮರ್ಶೆಗೆ ‘ಸಂವಿಧಾನಬಾಹಿರ’ ಸಂಸ್ಥೆಯೊಂದನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.
‘ಪ್ರಸಕ್ತ ಮೀಸಲಾತಿ ನೀತಿಯು ಅವರಿಗೆ (ಮೋಹನ್ ಭಾಗವತ್) ಸಮರ್ಪಕವಾಗಿ ಕಂಡಿಲ್ಲ. ಬೇರೆಯೇ ಆದ ವ್ಯವಸ್ಥೆಯೊಂದು ಅವರಿಗೆ ಬೇಕಾಗಿರುವಂತಿದೆ’ ಎಂದು ನಿತೀಶ್‌ಕುಮಾರ್ ದೂರಿದರು. ಆರ್‌ಎಸ್‌ಎಸ್‌ನ ಮುಖವಾಣಿ ‘ಆರ್ಗನೈಸರ್’ ಮತ್ತು ‘ಪಾಂಚಜನ್ಯ’ಗೆ ಮೋಹನ್ ಭಾಗವತ್ ನೀಡಿರುವ ಸಂದರ್ಶನದ ಭಾಗವನ್ನು ಅವರು ಈ ಸಂದರ್ಭದಲ್ಲಿ ಓದಿ ಹೇಳಿದರು.
ನಮ್ಮ ಸಂವಿಧಾನಕ್ಕೆ ಯಾವುದೇ ತಿದ್ದುಪಡಿ ಮಾಡಬೇಕಿದ್ದಲ್ಲಿ, ಅದು ಸಂಸತ್ತಿನಲ್ಲಿ ಮಾತ್ರ ಆಗಬೇಕು. ಆದರೆ, ಸಂವಿಧಾನಕ್ಕೆ ಹೊರತಾದ ಬೇರೆ ಯಾವುದೋ, ಸಂವಿಧಾನಬಾಹಿರ ಅಧಿಕಾರ ಅವರಿಗೆ ಬೇಕಾಗಿರುವಂತಿದೆ. ಯಾರಿಗೆ ಮೀಸಲಾತಿ ಮತ್ತು ಎಷ್ಟು ವರ್ಷ ಕಾಲ ಮೀಸಲಾತಿ ಎಂಬುದನ್ನು ಅದು ಪರಾಮರ್ಶೆ ಮಾಡಬೇಕು ಎಂಬುದು ಅವರ (ಆರ್‌ಎಸ್‌ಎಸ್) ಅಭಿಪ್ರಾಯವಿರುವಂತಿದೆ ಎಂದು ನಿತೀಶ್‌ಕುಮಾರ್ ಟೀಕಿಸಿದರು.
‘ಸಂವಿಧಾನವಲ್ಲ ಇಲ್ಲವೇ ಸಂಸತ್ತೂ ಅಲ್ಲ, ಮೇಲ್ವರ್ಗದ ಸಮಿತಿಯ ಕೈಯಲ್ಲಿ ಇಂತಹ ಪರಾಮರ್ಶೆಯ ಅಧಿಕಾರವಿರಬೇಕು. ಇದು ಬಹಳ ಅಪಾಯಕಾರಿ ನಿಲುವು. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ನಿತೀಶ್‌ಕುಮಾರ್ ನುಡಿದರು.
ಮೀಸಲಾತಿ ಸೌಲಭ್ಯದ ವಿಚಾರದಲ್ಲಿ ಬಿಜೆಪಿಯ ನಿಲುವನ್ನು ಪ್ರಶ್ನಿಸಿದ ಅವರು, ಆಳುವ ಪಕ್ಷ ಈಗ ಏನೇ ಹೇಳುತ್ತಿರಲಿ, ಆರ್‌ಎಸ್‌ಎಸ್‌ನ ನಿಲುವಿಗೆ ವಿರುದ್ಧವಾಗಿ ಅದು ಹೋಗಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ಸ್ವಯಂಸೇವಕರಾಗಿ ರುವುದು ಬಹಳ ಹೆಮ್ಮೆಯ ಸಂಗತಿ ಎಂದು ಅವರೆಲ್ಲ (ಸಚಿವರು) ಪದೇಪದೇ ಹೇಳಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಆರ್‌ಎಸ್‌ಎಸ್‌ನ ನಿಲುವೇ ಅಂತಿಮ. ಬಿಜೆಪಿ ಏನೇ ಹೇಳಲಿ, ಅದಕ್ಕೆ ಅರ್ಥವಿಲ್ಲ. ಸುಪ್ರೀಂ ಕೋರ್ಟ್‌ನ ಸಂವಿಧಾನಿಕ ಪೀಠದ ತೀರ್ಪೇ ಅಂತಿಮ. ಅದಕ್ಕಿಂತ ಮುಂದೆ ಬೇರೇನಿಲ್ಲ. ಅದೇ ರೀತಿ, ಆರ್‌ಎಸ್‌ಎಸ್ ಮುಖ್ಯಸ್ಥರು ಏನಾದರೂ ಹೇಳಿದಲ್ಲಿ, ಬಿಜೆಪಿಗೆ ಬೇರೆ ಅಭಿಪ್ರಾಯವಿರುವುದಿಲ್ಲ ಎಂದು ನಿತೀಶ್‌ಕುಮಾರ್ ಲೇವಡಿ ಮಾಡಿದರು.
ಬಿಜೆಪಿಯು ಆರ್‌ಎಸ್‌ಎಸ್‌ನ ರಾಜಕೀಯ ಘಟಕ. ಸ್ವಯಂಸೇವಕರು ಮತ್ತು ಪ್ರಚಾರಕರು ಸರಕಾರದ ಭಾಗವಾಗಿದ್ದಾರೆ. ಭಾಗವತ್ ಏನು ಹೇಳುತ್ತಾರೋ ಅದೇ ಅಂತಿಮ. ಅದರ ನಂತರ ಬೇರೆ ಮಾತೇ ಇಲ್ಲ ಎಂದು ಅವರು ಟೀಕಿಸಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗಳೆರಡೂ ಮೀಸಲಾತಿಗೆ ವಿರೋಧಿಯಾಗಿವೆ. ಆ ಪಕ್ಷಕ್ಕೆ ಸುಪ್ರೀಂ ಕೋರ್ಟ್‌ನಂತಿರುವ ಆರ್‌ಎಸ್‌ಎಸ್‌ನ ತಾಳಕ್ಕೆ ತಕ್ಕಂತೆ ಬಿಜೆಪಿ ಕುಣಿಯುತ್ತದೆ.
-ನಿತೀಶ್‌ಕುಮಾರ್, ಬಿಹಾರ ಮುಖ್ಯಮಂತ್ರಿ

Write A Comment