ರಾಷ್ಟ್ರೀಯ

ಮ್ಯಾಗಿ ನಿಷೇಧದ ಹಿಂದಿನ ರೂವಾರಿ ಎಫ್‌ಎಸ್‌ಎಸ್‌ಎಐನಿಂದ ಎತ್ತಂಗಡಿ

Pinterest LinkedIn Tumblr

nestle maggiಹೊಸದಿಲ್ಲಿ,ಸೆ.23: ನೆಸ್ಲೆಯ ಜನಪ್ರಿಯ ನೂಡಲ್ ಮ್ಯಾಗಿ ನಿಷೇಧದ ಹಿಂದಿನ ರೂವಾರಿಯಾಗಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ)ದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ(ಸಿಇಒ) ಯುದ್ಧವೀರ್ ಸಿಂಗ್ ಮಲಿಕ್ ಅವರನ್ನು ಬುಧವಾರ ಹುದ್ದೆಯಿಂದ ಎತ್ತಂಗಡಿ ಮಾಡಲಾಗಿದ್ದು, ಅವರು ಇನ್ನು ಮುಂದೆ ನೀತಿ ಆಯೋಗದ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಹರ್ಯಾಣ ಕೇಡರ್‌ನ 1983ನೆ ತಂಡದ ಐಎಎಸ್ ಅಧಿಕಾರಿಯಾಗಿರುವ ಮಲಿಕ್ ಅವರನ್ನು ಕಳೆದ ವರ್ಷದ ಸೆಪ್ಟಂಬರ್‌ನಲ್ಲಷ್ಟೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದ ಎಫ್‌ಎಸ್‌ಎಸ್‌ಎಐಯ ಸಿಇಒ ಆಗಿ ನೇಮಕಗೊಳಿಸಲಾಗಿತ್ತು.
ನೀತಿ ಆಯೋಗದ ಹೆಚ್ಚುವರಿ ಕಾರ್ಯದರ್ಶಿಯಾಗಿ ಮಲಿಕ್ ನೇಮಕಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದ ನೇಮಕಾತಿ ಸಮಿತಿಯು ಒಪ್ಪಿಗೆ ನೀಡಿದೆ ಎಂದು ಸಿಬ್ಬಂದಿ ಸಚಿವಾಲಯವು ಆದೇಶದಲ್ಲಿ ತಿಳಿಸಿದೆ.
ಕೇಶ್ನಿ ಆನಂದ ಅರೋರಾ ಅವರ ನೇಮಕವನ್ನು ರದ್ದುಗೊಳಿಸಿ ಮಲಿಕ್ ಅವರನ್ನು ಈ ಹುದ್ದೆಗೆ ನಿಯೋಜಿಸಲಾಗಿದೆ. ಮಲಿಕ್ ಸಿಇಒ ಆಗಿದ್ದ ಅವಧಿಯಲ್ಲಿ ಮ್ಯಾಗಿ ನೂಡಲ್‌ನ ಸ್ಯಾಂಪಲ್‌ಗಳನ್ನು ಪ್ರಯೋಗಾಲಯ ಪರೀಕ್ಷೆಗೊಳಪಡಿಸಲಾಗಿದ್ದು,ಅದು ಮಿತಿಗಿಂತ ಅಧಿಕ ಮೊನೊಸೋಡಿಯಂ ಗ್ಲುಟಾಮೇಟ್(ಎಂಎಸ್‌ಜಿ) ಮತ್ತು ಸೀಸವನ್ನು ಹೊಂದಿದ್ದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಜೂನ್ 5ರಂದು ಮ್ಯಾಗಿ ನೂಡಲ್ಸ್‌ನ್ನು ನಿಷೇಧಿಸಿತ್ತು.
ಆದರೆ ಬಳಿಕ ಬಾಂಬೆ ಉಚ್ಚ ನ್ಯಾಯಾಲಯವು ನಿಷೇಧವನ್ನು ರದ್ದುಗೊಳಿಸಿದ್ದು, ಹೊಸದಾಗಿ ಪರೀಕ್ಷೆಗಳ ನಂತರವೇ ಮ್ಯಾಗಿ ಮಾರಾಟಕ್ಕೆ ಅನುಮತಿ ನೀಡಲಾಗುವುದೆಂದು ಸ್ಪಷ್ಟಪಡಿಸಿದೆ.

Write A Comment