ರಾಷ್ಟ್ರೀಯ

22 ಅಪಾಚೆ, 15 ಚಿನೂಕ್‌ ಹೆಲಿಕಾಪ್ಟರ್‌ ಖರೀದಿ: 16 ಸಾವಿರ ಕೋಟಿ ವ್ಯವಹಾರಕ್ಕೆ ಸಂಪುಟ ಸಮಿತಿ ಒಪ್ಪಿಗೆ

Pinterest LinkedIn Tumblr

4-chinook-helicopterನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಬೆನ್ನಲ್ಲೇ ಭದ್ರತೆಗೆ ಸಂಬಂಧಿಸಿದ  ಸಂಪುಟ ಸಮಿತಿಯು (ಸಿಸಿಎಸ್‌) ಬೋಯಿಂಗ್‌ ಕಂಪೆನಿ ಜತೆ ಬಹು ಶತಕೋಟಿ ಡಾಲರ್‌ ಮೊತ್ತದ 22 ಅಪಾಚೆ ಯುದ್ಧ ಹೆಲಿಕಾಪ್ಟರ್‌ಗಳು ಹಾಗೂ 15 ಭಾರಿ ಭಾರ ಸಾಗಿಸುವ ಚಿನೂಕ್‌ ಹೆಲಿಕಾಪ್ಟರ್‌ಗಳ ಖರೀದಿ ವ್ಯವಹಾರಕ್ಕೆ ಒಪ್ಪಿಗೆ ನೀಡಿತು.

ಅಪಾಚೆ ಮತ್ತು ಚಿನೂಕ್‌ ಹೆಲಿಕಾಪ್ಟರ್‌ಗಳ ಖರೀದಿ ವ್ಯವಹಾರಕ್ಕೆ ಸಿಸಿಎಸ್‌ ಒಪ್ಪಿಗೆ ನೀಡಿತು. ಸಂಪುಟ ಸಭೆ ಬಳಿಕ ಸೇರಿದ ಭದ್ರತೆ ಮೇಲಿನ ಸಂಪುಟ ಸಮಿತಿ 250 ಕೋಟಿ ಡಾಲರ್‌ (ಅಂದಾಜು ₹16 ಸಾವಿರ ಕೋಟಿ) ಹೆಲಿಕಾಪ್ಟರ್‌ ಖರೀದಿ ವ್ಯವಹಾರಕ್ಕೆ ಅನುಮತಿ ನೀಡಿತು. ಹೆಲಿಕಾಪ್ಟರ್‌ ದರ ನಿಗದಿ ಸಂಬಂಧದ ಚರ್ಚೆ ಅಪೂರ್ಣಗೊಂಡಿದ್ದರಿಂದ 2013ರಿಂದ ಈ ವ್ಯವಹಾರ ನನೆಗುದಿಗೆ ಬಿದ್ದಿತ್ತು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ರಕ್ಷಣೆ ಇಲಾಖೆ ಬಹುತೇಕರು ಹೆಲಿಕಾಪ್ಟರ್‌ ಖರೀದಿ ಆಗಬೇಕೆಂದು ನಿರೀಕ್ಷಿಸಿದ್ದರು. ಜೂನ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕ ರಕ್ಷಣಾ ಕಾರ್ಯದರ್ಶಿ ಆಸ್ಟನ್‌ ಕಾರ್ಟರ್‌ ಒಪ್ಪಂದಕ್ಕೆ ಸಹಿ ಹಾಕಬೇಕಿತ್ತು. ಅಪಾಚೆ ಹೆಲಿಕಾಪ್ಟರ್‌ ಖರೀದಿ ಸಂಬಂಧ ಎರಡು ಒಪ್ಪಂದಗಳಿಗೆ ಭಾರತ ಸಹಿ ಹಾಕಬೇಕಿದೆ.

ಬೋಯಿಂಗ್‌ ಕಂಪೆನಿಯೊಂದಿಗೆ ಹೆಲಿಕಾಪ್ಟರ್‌ಗಳ ಪೂರೈಕೆಗೆ, ಅಮೆರಿಕ ಸರ್ಕಾರದೊಂದಿಗೆ ರೇಡಾರ್‌ ಹಾಗೂ ಎಲೆಕ್ಟ್ರಾನಿಕ್‌ ಸಿಡಿ ತಲೆಗಳು ಸರಬರಾಜಿಗೆ ಒಪ್ಪಂದ ಮಾಡಿಕೊಳ್ಳಬೇಕಿದೆ. ಕಳೆದ ದಶಕದಲ್ಲಿ ಸಾಗರ ಕಣ್ಗಾವಲಿನ ಪಿ– 81, ಸೂಪರ್‌ ಹರ್ಕ್ಯೂಲಸ್‌ ಸಿ– 130ಜೆ, ಸಿ– 17 ಗ್ಲೋಬ್‌ ಮಾಸ್ಟರ್‌–3 ಸೇರಿ 10 ಶತ ಕೋಟಿ ಡಾಲರ್‌ ಮೌಲ್ಯದ ವಿಮಾನಗಳ ಪೂರೈಕೆ ವ್ಯವಹಾರ ಗಿಟ್ಟಿಸಿಕೊಂಡಿರುವ ಅಮೇರಿಕಾ ಅಪಾಚೆ ಮತ್ತು ಚಿನೂಕ್‌ ಹೆಲಿಕಾಪ್ಟರ್‌ ಪೂರೈಕೆ ವ್ಯವಹಾರ ಕುದುರಿಸಲೂ ಆಸಕ್ತಿ ಹೊಂದಿತ್ತು.

ಪ್ರಧಾನಿ ಮೋದಿ ವಿಶ್ವ ಸಂಸ್ಥೆ ಸಾಮಾನ್ಯ ಅಧಿವೇಶನದಲ್ಲಿ ಭಾಗವಹಿಸಲು ಬುಧವಾರ ಅಮೆರಿಕೆಗೆ ತೆರಳಲಿರುವುದರಿಂದ ಒಂದು ದಿನ ಮೊದಲು ಹೆಲಿಕಾಪ್ಟರ್‌ ಖರೀದಿ ವ್ಯವಹಾರಕ್ಕೆ ಹಸಿರು ನಿಶಾನೆ ತೋರಲಾಗಿದೆ.

Write A Comment