ರಾಷ್ಟ್ರೀಯ

ಇ–ಮೇಲ್, ಮೊಬೈಲ್ ಸಂದೇಶ ಕಾದಿಡುವ ಕರಡು ಮಸೂದೆ; ಆಕ್ರೋಶಕ್ಕೆ ಮಣಿದು ವಾಪಸ್

Pinterest LinkedIn Tumblr

watನವದೆಹಲಿ (ಪಿಟಿಐ): ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆ ಹಾಗೂ ಸಾರ್ವಜನಿಕರಿಂದ ತೀವ್ರ ಆತಂಕ ವ್ಯಕ್ತವಾದ ಕಾರಣ  ಕೇಂದ್ರ ಸರ್ಕಾರವು ವಿವಾದಿತ ಗೂಢ ಲಿಪಿ ಕರಡು ನೀತಿಯನ್ನು (ಡ್ರಾಫ್ಟ್‌ ಎನ್‌ಕ್ರಿಪ್ಷನ್‌  ಪಾಲಿಸಿ) ಮಂಗಳವಾರ ವಾಪಸ್‌ ಪಡೆದಿದೆ.

‘ವಾಟ್ಸ್‌ಆ್ಯಪ್‌, ಗೂಗಲ್‌ ಹ್ಯಾಂಗ್‌ ಔಟ್ಸ್‌ ಅಥವಾ ಆ್ಯಪಲ್‌ ಐ ಮೆಸೇಜ್‌ನಲ್ಲಿ  ಗೂಢಲಿಪಿ (ಎನ್‌ಕ್ರಿಪ್ಟೆಡ್‌  ಮೆಸೇಜಿಂಗ್‌ ಸರ್ವಿಸಸ್‌) ಮೂಲಕ ಕಳುಹಿಸುವ ಎಲ್ಲ  ಸಂದೇಶಗಳನ್ನು ಕಡ್ಡಾಯವಾಗಿ  90 ದಿನಗಳವರೆಗೆ ಕಾಯ್ದಿಟ್ಟುಕೊಳ್ಳಬೇಕಾಗುತ್ತದೆ. ತಪ್ಪಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಅಗತ್ಯ ಬಿದ್ದಲ್ಲಿ ಈ ಸಂದೇಶಗಳನ್ನು ಕಾನೂನು ಜಾರಿ ಸಂಸ್ಥೆಗಳಿಗೆ ತೋರಿಸಬೇಕಾಗುತ್ತದೆ’ ಎಂದು ಕರಡು ನೀತಿಯಲ್ಲಿ ಹೇಳಲಾಗಿತ್ತು.

‘ಬಳಕೆದಾರರು ಮಾತ್ರವಲ್ಲ, ಸೇವಾ ಕಂಪೆನಿಗಳು ಕೂಡ ಖಾಸಗಿ ಹಾಗೂ ಸೂಕ್ಷ್ಮ ಮಾಹಿತಿಗಳನ್ನು ತಮ್ಮ ಸರ್ವರ್‌ನಲ್ಲಿ 90 ದಿನಗಳ ವರೆಗೆ ಇಟ್ಟುಕೊಳ್ಳಬೇಕಾಗುತ್ತದೆ’ ಎಂದೂ ಪ್ರಸ್ತಾಪಿಸಲಾಗಿತ್ತು.

ವಿವಾದಿತ ಕರಡು ನೀತಿಯ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದೆ. ಅನೇಕರು ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ವ್ಯಕ್ತಿಯ ಖಾಸಗಿತನವನ್ನು ಅತಿಕ್ರಮಿಸುವ ಹುನ್ನಾರ ಎಂದು ಛೀಮಾರಿ ಹಾಕಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ  ಮಂಗಳವಾರ ಬೆಳಿಗ್ಗೆ ಈ ಬಗ್ಗೆ ಸ್ಪಷ್ಟನೆ ಕೊಟ್ಟಿತು.

‘ಸಾಮಾನ್ಯ ಬಳಕೆದಾರರು ಉದ್ದೇಶಿತ ನೀತಿಯ ಚೌಕಟ್ಟಿನಡಿ ಬರುವುದಿಲ್ಲ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್‌ಆ್ಯಪ್‌, ಪೇಮೆಂಟ್‌ ಗೇಟ್‌ವೇ, ಇ–ಕಾಮರ್ಸ್‌ ಹಾಗೂ ಪಾಸ್‌ವರ್ಡ್‌ ಆಧಾರಿತ ಸಂವಹನಗಳು ಇದರ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂದು ಹೇಳಿತು.

ಇದಾದ ಕೆಲವು ಗಂಟೆಗಳಲ್ಲಿಯೇ ಇಡೀ ಕರಡು ನೀತಿಯನ್ನೇ ವಾಪಸ್‌ ಪಡೆಯಲು ನಿರ್ಧರಿಸಿತು. ‘ಕರಡು ನೀತಿಯಲ್ಲಿ ಕೆಲವೊಂದು ಅಂಶಗಳು ಅನುಮಾನಕ್ಕೆ ದಾರಿಮಾಡಿಕೊಟ್ಟಿವೆ. ಆದ ಕಾರಣ ಇದನ್ನು ವಾಪಸ್‌ ಪಡೆಯುವಂತೆ ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಗೆ ಪತ್ರ ಬರೆದಿದ್ದೇನೆ. ಇದನ್ನು ಪರಿಷ್ಕರಿಸಿದ ನಂತರ ಅಂತರ್ಜಾಲಕ್ಕೆ ಹಾಕಲಾಗುತ್ತದೆ’ ಎಂದು ಕೇಂದ್ರ ದೂರಸಂಪರ್ಕ ಸಚಿವ ರವಿಶಂಕರ್‌ ಪ್ರಸಾದ್‌  ಸುದ್ದಿಗಾರರಿಗೆ ತಿಳಿಸಿದರು.

‘ಕರಡು ನೀತಿಯು ಸರ್ಕಾರದ ಅಂತಿಮ ನಿರ್ಧಾರವಲ್ಲ. ಸಾರ್ವಜನಿಕರ  ಅಭಿಪ್ರಾಯ ತಿಳಿದುಕೊಳ್ಳುವುದಕ್ಕೆ ಹಾಗೂ ಅವರಿಂದ ಸಲಹೆ ಸ್ವೀಕರಿಸುವುದಕ್ಕಾಗಿ ಇದನ್ನು ವೆಬ್‌ಸೈಟ್‌ಗೆ ಹಾಕಲಾಗಿತ್ತು. ಕರಡು ನೀತಿಗೆ ಸಾರ್ವಜನಿಕರಿಂದ ವ್ಯಕ್ತವಾದ ಆತಂಕ ನನ್ನ ಗಮನಕ್ಕೆ ಬಂದಿದೆ’ ಎಂದು ನುಡಿದರು. ಉದ್ದೇಶಿತ ನೀತಿಯ ಪರಿಧಿಯೊಳಗೆ ಸಾಮಾನ್ಯ ಬಳಕೆದಾರರು ಬರುವುದಿಲ್ಲ ಎಂದೂ ಅವರು ಮನವರಿಕೆ ಮಾಡಿಕೊಟ್ಟರು.

*
ರವಿಶಂಕರ್‌ ಹೇಳಿದ್ದು
*ಸಾಮಾನ್ಯ ಬಳಕೆದಾರರು ನೀತಿ ವ್ಯಾಪ್ತಿಗೆ ಬರುವುದಿಲ್ಲ
*ಇದು ಸರ್ಕಾರದ ಅಂತಿಮ ನಿಲುವು ಅಲ್ಲ
* ನೀತಿಯನ್ನು ಪರಿಷ್ಕರಿಸಲಾಗುತ್ತದೆ

Write A Comment