ರಾಷ್ಟ್ರೀಯ

ಪ್ರಧಾನಿ ಅಮೆರಿಕ ಪ್ರವಾಸ: ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿರುವ ಪಟೇಲ್ ಸಮುದಾಯ; ಮೋದಿಗೆ ಹೊಸತೊಂದು ತಲೆನೋವು

Pinterest LinkedIn Tumblr

hardik

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಈ ಬಾರಿಯ ಅಮೆರಿಕ ಪ್ರವಾಸ ಕಳೆದ ಬಾರಿಯಂತಿರುವುದಿಲ್ಲ! ಇದಕ್ಕೆ ಕಾರಣ, ಪಟೇಲ್ ಸಮುದಾಯ. ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಅವರಿಗೆ ಪೂರ್ಣ ಬೆಂಬಲ ನೀಡಿರುವ ಈ ಸಮುದಾಯ ಅಮೆರಿಕದಲ್ಲಿ ಭಾರಿ ಪ್ರತಿಭಟನೆ ನಡೆಸಲು ಮುಂದಾಗಿದೆ.

ಇದಕ್ಕಾಗಿ ಸುಮಾರು 30 ಸಾವಿರ ಮಂದಿ ಸಜ್ಜಾಗಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ 20 ಸಾವಿರ ಮಂದಿ ಮತ್ತು ನ್ಯೂಯಾರ್ಕ್‍ನಲ್ಲಿ 10 ಸಾವಿರ ಮಂದಿ ಪ್ರತಿಭಟನೆ ನಡೆಸಲಿದ್ದಾರೆ. ಇದೇ ಸೆ.23 ರಿಂದ 28ರ ವರೆಗೆ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲದೆ ಕ್ಯಾಲಿಫೋರ್ನಿಯಾದಲ್ಲಿ ಅವರು ಭಾರಿ ಸಂಖ್ಯೆಯ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಮಾವೇಶಕ್ಕೆ ಅಡ್ಡಿಪಡಿಸುವುದು ಪಟೇಲ್ ನಾಯಕರ ಉದ್ದೇಶ.

ಇದಷ್ಟೇ ಅಲ್ಲ, ಅಮೆರಿಕದಲ್ಲಿ ಪಟೇಲ್ ಸಮುದಾಯದ ಮಂದಿ ಬಹಳಷ್ಟಿದ್ದಾರೆ. ಇವರ ಪ್ರಮುಖ ಉದ್ಯೋಗ ಮೊಟೇಲ್(ಹೊಟೇಲ್) ಉದ್ಯಮ. ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್ ಗೆ ಪ್ರತಿಭಟನೆಗೆಂದು ಬರುವ ಪಟೇಲ್ ಸಮುದಾಯದ ಮಂದಿಗೆ ಹೊಟೇಲ್ ಉದ್ಯಮಿಗಳು ಉಚಿತವಾಗಿ ಆತಿಥ್ಯ ನೀಡಲಿದ್ದಾರೆ. ಜತೆಗೆ ಅಮೆರಿಕದ ನಾನಾ ಭಾಗಗಳಿಂದ ಬರುವವರಿಗಾಗಿ ಫ್ಲೈಟ್, ಬಸ್, ರೈಲುಗಳ ಟಿಕೆಟ್ ವ್ಯವಸ್ಥೆಯನ್ನೂ ಮಾಡಲಾಗಿದೆ ತಿಳಿದು ಬಂದಿದೆ. ಅಲ್ಲದೆ, ಪಟೇಲ್ ಸಮುದಾಯದಲ್ಲೇ ಇನ್ನೊಂದು ಬಣ ಸೃಷ್ಟಿಯಾಗಿದ್ದು, ನಾವು ಪಟೇಲ್ ಸಮುದಾಯದ ಪ್ರತಿಭಟನೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದೆ.

ಹಣ ವಾಪಸ್ ಕೊಡಿ
ಮೋದಿ ಅವರ ಸಮಾವೇಶಕ್ಕಾಗಿ ಹಣ ನೀಡಿರುವ ಪಟೇಲ್ ಸಮುದಾಯದ ಜನ ಇದೀಗ ಹಣ ವಾಪಸ್ ಕೊಡಿ ಎಂದು ಕೇಳುತ್ತಿದ್ದಾರಂತೆ. ಈ ಬಗ್ಗೆ ಮಾತನಾಡಿರುವ ನೀರವ್ ಪಟೇಲ್ ಎಂಬುವರು, ನಾನು ಮ್ಯಾಡಿಸನ್ ಸ್ಕ್ವೇರ್ ಸಮಾವೇಶಕ್ಕಾಗಿ 10 ಸಾವಿರ ಡಾಲರ್ ನೀಡಿದ್ದೆ. ಈ ಹಣ ವಾಪಸ್ ಮಾಡುವಂತೆ ಕೇಳಿದ್ದೇನೆ ಎಂದಿದ್ದಾರೆ. ನೀರವ್ ಪಟೇಲ್, ಬಿಜೆಪಿಯ ವಿದೇಶಿ ವಿಭಾಗದ ಉಪಾಧ್ಯಕ್ಷರಾಗಿದ್ದು, ಇತ್ತೀಚೆಗಷ್ಟೇ ರಾಜಿನಾಮೆ ನೀಡಿ ಹಾರ್ದಿಕ್ ಜತೆ ಕೈಜೋಡಿಸಿದ್ದಾರೆ.

ಹೊಸತಲೆಯ ನಾಯಕರು
ಗುಜರಾತ್‍ನಲ್ಲಿನ ಇತ್ತೀಚಿನ ಬೆಳವಣಿಗೆ ಬಿಜೆಪಿ ಮತ್ತು ಕಾಂಗ್ರೆಸ್‍ನ ನಾಯಕರ ತಲೆ ಕೆಡಿಸಿದೆಯಂತೆ. ಹಾರ್ದಿಕ್ ಪಟೇಲ್, ಲಾಲ್ಜಿ ಪಟೇಲ್ ಮತ್ತು ಅಲ್ಫೇಶ್ ಠಾಕೂರ್ ಎಂಬ ಯುವಕರೇ ಬಿಜೆಪಿ ಮತ್ತು ಕಾಂಗ್ರೆಸ್‍ನ ಗಟ್ಟಿ ತಲೆಯಾಳುಗಳ ತಲೆನೋವಿಗೆ ಕಾರಣ. 3 ತಿಂಗಳ ಹಿಂದಷ್ಟೇ ಹುಟ್ಟಿಕೊಂಡ ಪಟೇಲ್‍ಗಿರಿ ಹೋರಾಟ ಹೊಸ ರಾಜಕೀಯ ಸಂಭವಗಳನ್ನೇ ಸೃಷ್ಟಿಸಿದೆ. ಈ ಹಿಂದೆ ಪಟೇಲ್ ಸಮುದಾಯ ಬಿಜೆಪಿ ಕೈ ಹಿಡಿದಿತ್ತು. ಆದರೆ ಸದ್ಯದಲ್ಲೇ ನಡೆಯುವ ಗುಜರಾತ್ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸುತ್ತೇವೆ ಎನ್ನುತ್ತಿದ್ದಾರೆ ಈ ಪಟೇಲರು.

Write A Comment