ರಾಷ್ಟ್ರೀಯ

ನೇಪಾಳಿ ಮಹಿಳೆಯರ ಅತ್ಯಾಚಾರ ಪ್ರಕರಣ: 20 ಮಂದಿ ಶಾಮೀಲು

Pinterest LinkedIn Tumblr

soudiಗುರ್‌ಗಾಂವ್, ಸೆ.13- ಇಬ್ಬರು ನೇಪಾಳಿ ಮಹಿಳೆಯರ ಮೇಲೆ ಸೌದಿ ಅರೇಬಿಯಾದ ರಾಯಭಾರಿ ಕಚೇರಿಯಲ್ಲಿ  ನಡೆಸಿರುವ ಅತ್ಯಾಚಾರ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.   ನೇಪಾಳಿ ಮಹಿಳೆಯರನ್ನು ಇಬ್ಬರು ಸೌದಿ ಅರೇಬಿಯಾದ ರಾಯಭಾರಿ ಕಚೇರಿ ಅಧಿಕಾರಿಗಳು ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಸುಮಾರು 20 ಮಂದಿ ಸೇರಿಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಗುರ್‌ಗಾಂವ್ ಪೊಲೀಸರು ತನಿಖೆ ನಡೆಸುತ್ತಿದ್ದು, ರಾಯಭಾರಿ ಕಚೇರಿ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ನಿರೀಕ್ಷಿಸುತ್ತಿರುವುದಾಗಿ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅತ್ಯಾಚಾರಕ್ಕೊಳಗಾಗಿದ್ದ ಇಬ್ಬರು ನೇಪಾಳಿ ಮಹಿಳೆಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ವೇಳೆ ಇದು ಸಾಮೂಹಿಕ ಅತ್ಯಾಚಾರ ಎಂಬುದು ವರದಿಯಲ್ಲಿ ಸಾಬೀತಾಗಿದೆ.

ಇಬ್ಬರು ವ್ಯಕ್ತಿಗಳು ಸೇರಿಕೊಂಡು ಈ ರೀತಿ ಅತ್ಯಾಚಾರ ನಡೆಸಲು ಸಾಧ್ಯವಿಲ್ಲ. 8 ರಿಂದ 20 ಮಂದಿ ಅತ್ಯಾಚಾರ ನಡೆಸಿರುವ ಸಾಧ್ಯತೆಯಿದೆ ಎಂದು ವೈದ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಗುರ್‌ಗಾಂವ್‌ನ ಸೌದಿ ಅರೇಬಿಯಾದ ರಾಯಭಾರಿ ಕಚೇರಿ ಅಧಿಕಾರಿಗಳು ತಂಗಿದ್ದ ಕೈಟ್ರೋನಿಯಾ ಅಪಾರ್ಟ್‌ಮೆಂಟ್‌ನಲ್ಲಿರುವ ಸಿಸಿಟಿವಿಯನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಅತ್ಯಾಚಾರ ನಡೆದ ದಿನದಂದು ಅಪಾರ್ಟ್‌ಮೆಂಟ್‌ಗೆ 20 ಜನರ ತಂಡ ಸೌದಿ ಅರೇಬಿಯಾ ಜನರು ಧರಿಸುವ ಧಿರಿಸುಗಳನ್ನು ಹಾಕಿಕೊಂಡು ಬಂದಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.

ಮುಖ ಕಾಣದಂತೆ ಧಿರಿಸು ಧರಿಸಿರುವ ಇವರು ಸಾಮೂಹಿಕ ಅತ್ಯಾಚಾರ ನಡೆಸಿರುವ ಸಾಧ್ಯತೆಯಿದೆ. ಶಿಷ್ಟಾಚಾರದ ಪ್ರಕಾರ ರಾಯಭಾರಿ ಕಚೇರಿ ಅಧಿಕಾರಿಗಳನ್ನು ನಾವು ವಶಕ್ಕೆ ಪಡೆಯಲು ಸಾಧ್ಯವಿಲ್ಲ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆಗೆ ಪತ್ರ ಬರೆಯಲಾಗಿದೆ. ಒಂದು ವೇಳೆ ಸಚಿವಾಲಯದಿಂದ ಅನುಮತಿ ಬಂದರೆ ಎಲ್ಲರನ್ನೂ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುವುದಾಗಿ ಗುರ್‌ಗಾಂವ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಚ್ಚಾಟನೆಗೆ ಒತ್ತಾಯ: ರಾಯಭಾರಿ ಕಚೇರಿ ಅಧಿಕಾರಿಗಳ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿರುವುದರಿಂದ ಇವರನ್ನು ತಕ್ಷಣವೇ ಉಚ್ಚಾಟಿಸಬೇಕೆಂದು ಭಾರತ ಸೌದಿ ಅರೇಬಿಯಾ ಸರ್ಕಾರದ ಮೇಲೆ ಒತ್ತಡ ಹಾಕಿದೆ. ಈಗಾಗಲೇ ವಿದೇಶಾಂಗ ವ್ಯವಹಾರಗಳ ವಕ್ತಾರ ಸ್ವರೂಪ್ ಅವರು ರಿಯಾದ್ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.

Write A Comment