ರಾಷ್ಟ್ರೀಯ

ಬಿಹಾರ ಚುನಾವಣೆ ಘೋಷಣೆ: ಅ.12ರಂದು ಮೊದಲ ಹಂತದ ಮತದಾನ; ನವೆಂಬರ್ 5ರಂದು ಕೊನೆಯ ಹಂತದ ಮತದಾನ-ನವೆಂಬರ್ 8ರಂದು ಮತ ಎಣಿಕೆ, ಫಲಿತಾಂಶ

Pinterest LinkedIn Tumblr

ele

ಹೊಸದಿಲ್ಲಿ, ಸೆ.9: ಅಕ್ಟೋಬರ್ 12 ಮತ್ತು ನವೆಂಬರ್ ಐದರ ನಡುವೆ ಐದು ಹಂತಗಳಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ನವೆಂಬರ್ 8ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಂ ಝೈದಿ ತಿಳಿಸಿದ್ದಾರೆ.

243 ಸದಸ್ಯರ ಬಿಹಾರ ವಿಧಾನಸಭೆಯ ಅಧಿಕಾರಾವಧಿ ನವೆಂಬರ್ 29ರಂದು ಕೊನೆಗೊಳ್ಳಲಿದೆ. ಅಕ್ಟೋಬರ್ 12, 16, 28, ನವೆಂಬರ್ 1 ಮತ್ತು 5ರಂದು ಮತದಾನ ನಡೆಯಲಿದೆ ಎಂದು ಅವರು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಪ್ರಕಟಿಸಿದರು.

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ದಸರಾ, ಈದ್, ಮೊಹರಂ, ದೀಪಾವಳಿ ಮತ್ತು ಚೌತ್‌ನಂತಹ ಹಬ್ಬಗಳು ಬರಲಿವೆ. ಹೀಗಾಗಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವುದು ಚುನಾವಣಾ ಆಯೋಗದ ಆದ್ಯತೆಯಾಗಿದೆ ಎಂದು ಝೈದಿ ಹೇಳಿದರು.

ರಾಜ್ಯದಲ್ಲಿ 6.68 ಕೋಟಿ ಮತದಾರರು ಇದ್ದಾರೆ. ರಾಜ್ಯದ 47 ವಿಧಾನಸಭಾ ಕ್ಷೇತ್ರಗಳಲ್ಲಿ ನಕ್ಸಲ್ ಹಿಂಸಾಚಾರದ ತೊಂದರೆಯಿದೆ. ಈ ಹಿನ್ನೆಲೆಯಲ್ಲಿ ಶಾಂತಿಯುತ ಮತ್ತು ಮುಕ್ತ ವಾತಾವರಣದಲ್ಲಿ ಚುನಾವಣೆಯನ್ನು ನಡೆಸಲು ಸಾಕಷ್ಟು ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು.

ಅರೆಸೇನಾ ಪಡೆಗಳು ಮತದಾನ ಕೇಂದ್ರಗಳಲ್ಲಿ ಭದ್ರತೆಯನ್ನು ಒದಗಿಸಲಿವೆ. ಚುನಾವಣೆಯ ಸಂದರ್ಭದಲ್ಲಿ ಸಿಆರ್‌ಪಿಎಫ್, ಸಿಐಎಸ್‌ಎಫ್ ಮತ್ತು ಬಿಎಸ್‌ಎಫ್ ಪಡೆಗಳನ್ನು ನಿಯೋಜಿಸಬೇಕೆಂದು ಎಲ್ಲ ರಾಜಕೀಯ ಪಕ್ಷಗಳು ಮನವಿ ಮಾಡಿಕೊಂಡಿವೆ ಎಂದು ಝೈದಿ ತಿಳಿಸಿದರು.

ಕಾಸಿಗಾಗಿ ಸುದ್ದಿ ಸೇರಿದಂತೆ ಮತದಾರರಿಗೆ ಹಣದ ಆಮಿಷವೊಡ್ಡುವುದನ್ನು ತಡೆಗಟ್ಟುವುದು ನಮ್ಮ ಆದ್ಯತೆಯಾಗಿದೆ. ನಗದು ಹಣ ಮತ್ತು ಮದ್ಯ ಸಾಗಾಟದ ಮೇಲೆ ನಿಗಾ ಇರಿಸಲು ಒಂಬತ್ತು ಕೇಂದ್ರೀಯ ಮತ್ತು ರಾಜ್ಯ ಭದ್ರತಾ ಸಂಸ್ಥೆಗಳ ಸೇವೆಯನ್ನು ಪಡೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು. ಈ ಬಾರಿ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ (ಇವಿಎಂ) ಅಭ್ಯರ್ಥಿಗಳ ಛಾಯಾಚಿತ್ರವೂ ಇರಲಿದೆ ಎಂದು ಅವರು ತಿಳಿಸಿದರು. ಚುನಾವಣಾ ಆಯುಕ್ತರಾದ ಅಚಲ್‌ಕುಮಾರ್ ಜ್ಯೋತಿ ಮತ್ತು ಓಂ ಪ್ರಕಾಶ್ ರಾವತ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Write A Comment