ರಾಷ್ಟ್ರೀಯ

ಮಹಾಮೈತ್ರಿ ಬಿರುಕು: ಮೋದಿ ವಿರೋಧಿ ಕೂಟದಿಂದ ಎಸ್ಪಿ ನಿರ್ಗಮನ

Pinterest LinkedIn Tumblr

nitishಹೊಸದಿಲ್ಲಿ, ಸೆ.3: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಸಮಾಜವಾದಿ ಪಕ್ಷ(ಎಸ್ಪಿ) ಗುರುವಾರ ನಿರ್ಧರಿಸಿದೆ. ಇದು ನಿತೀಶ್ ಕುಮಾರ್ ನೇತೃತ್ವದ ‘ಮಹಾಮೈತ್ರಿಗೆ’ ಭಾರೀ ಆಘಾತ ನೀಡಿದೆ.
ಬಿಹಾರ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಎಸ್ಪಿ ಸಂಸದೀಯ ಮಂಡಳಿ ನಿರ್ಧರಿಸಿದೆಯೆಂದು ಪಕ್ಷದ ನಾಯಕ ರಾಮ್‌ಗೋಪಾಲ್ ಯಾದವ್ ಲಕ್ನೊದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಅಗತ್ಯವಾದರೆ, ಬೆಂಬಲಕ್ಕಾಗಿ ಇತರ ಕೆಲವು ಪಕ್ಷಗಳೊಂದಿಗೆ ತಾವು ಮಾತುಕತೆ ನಡೆಸುತ್ತೇವೆ. ಆದರೆ, ಸದ್ಯ ಆ ಯೋಚನೆಯಿಲ್ಲವೆಂದು ಅವರು ಹೇಳಿದರು.
ಮೈತ್ರಿಕೂಟದಲ್ಲಿ ಒಟ್ಟು 243 ಸ್ಥಾನಗಳಲ್ಲಿ ಕೇವಲ 5 ಸ್ಥಾನಗಳನ್ನು ನೀಡಲಾದ ಬಳಿಕ, ಎಸ್ಪಿಯ ಬಿಹಾರದ ನಾಯಕರು ತಾವು ‘ವಂಚನೆಗೊಳಗಾಗಿದ್ದೇವೆ’ ಎಂದು ಭಾವಿಸಿದ್ದಾರೆ. ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ಗೋಪಾಲ್ ಯಾದವ್ ಹಾಗೂ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಹಿತ ಎಲ್ಲ ಅಗ್ರ ನಾಯಕರು ಬಿರುಸಿನ ಚರ್ಚೆಯಲ್ಲಿ ಭಾಗವಹಿಸಿದ್ದರು. ಪಾಟ್ನಾದಲ್ಲಿ ಆ.30ರಂದು ನಡೆದಿದ್ದ ಬಿಜೆಪಿ ವಿರೋಧಿ ಪಕ್ಷಗಳ ರ್ಯಾಲಿಗೆ ಗೈರು ಹಾಜರಾಗುವುದರೊಂದಿಗೆ ಮುಲಾಯಂ, ಅಚ್ಚರಿಗೆ ಕಾರಣರಾಗಿದ್ದರು. ಈ ಹಿಂದೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳದ ಮುಲಾಯಂ, ಕಾಂಗ್ರೆಸ್‌ನ ಸಂಸತ್ ಬಹಿಷ್ಕಾರವನ್ನು ಬಹಿರಂಗವಾಗಿ ವಿರೋಧಿಸಿದ್ದರು. ಅಲ್ಲದೆ, ಕಳೆದ ವಾರ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಪೂರ್ವ ನಿಗದಿತವಲ್ಲದ ಭೇಟಿಯೊಂದನ್ನು ನಡೆಸಿದ್ದರು.

Write A Comment