ರಾಷ್ಟ್ರೀಯ

ಕಳೆದ ವರ್ಷ 75 ಸಾವಿರ ಯುವಕರು ರಸ್ತೆ ಅಪಘಾತಗಳಿಗೆ ಬಲಿ!

Pinterest LinkedIn Tumblr

roadಹೊಸದಿಲ್ಲಿ, ಸೆ.3: ಕಳೆದ ವರ್ಷ ಭಾರತದಲ್ಲಿ 15ರಿಂದ 34ರ ನಡುವಿನ ವಯೋಮಾನದ 75 ಸಾವಿರ ಯುವಕರು ರಸ್ತೆ ಅಪಘಾತಗಳಿಗೆ ಬಲಿಯಾಗಿದ್ದಾರೆ. ಅವರಲ್ಲಿ ಶೇ.82ರಷ್ಟು ಮಂದಿ ಪುರುಷರೆಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2014ನೆ ಸಾಲಿಗಾಗಿ ಸಿದ್ಧಪಡಿಸಿರುವ ರಸ್ತೆ ಅಪಘಾತ ವರದಿ ತಿಳಿಸಿದೆ. 2014ನೆ ಕ್ಯಾಲೆಂಡರ್ ವರ್ಷದಲ್ಲಿ ರಸ್ತೆ ಅಪಘಾತಕ್ಕೊಳಗಾದವರ ವಿವರವಾದ ವಯಸ್ಸಿನ ದಾಖಲೆಯು, ಒಟ್ಟು ರಸ್ತೆ ಅಪಘಾತದ ಮರಣಗಳಲ್ಲಿ ಶೇ.53.8ರಷ್ಟು 15-30 ವಯೋ ಗುಂಪಿನವರದೆಂದು ಬಹಿರಂಗಪಡಿಸಿದೆ.
ಅದರ ಬಳಿಕದ ಸಾವಿಗೊಳಗಾದವರ ಪಾಲು 35-64 ವಯೋಮಾನ ದವರದಾಗಿದೆ(ಶೇ.35.7) ಎಂದು ಅದು ತಿಳಿಸಿದೆ.

ಪ್ರಪಂಚದಲ್ಲಿ ರಸ್ತೆ ಅಪಘಾತ ಗಾಯಗಳು 15-29ರ ವಯೋಮಾನದವರ ಸಾವಿಗೆ ಪ್ರಧಾನ ಕಾರಣವಾಗಿದೆ. ಪ್ರತಿ ವರ್ಷ, ಈ ವಯೋಗುಂಪಿನ ಸುಮಾರು 3.4 ಲಕ್ಷ ಯುವಕರು ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಇದು ಯುವ ಜನಾಂಗವನ್ನು ರಸ್ತೆ ಸುರಕ್ಷೆಯ ಬಗ್ಗೆ ಹೆಚ್ಚು ಜಾಗೃತಗೊಳಿಸಲು ಲಕ್ಷ ನೀಡಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತಿದೆ. ರಸ್ತೆಯಲ್ಲಿ ಹೇಗೆ ಸುರಕ್ಷಿತವಾಗಿ ನಡೆದುಕೊಳ್ಳಬೇಕೆಂದು ಅವರಲ್ಲಿ ಅರಿವು ಮೂಡಿಸಲು ಕುಟುಂಬಗಳು ಪ್ರಮುಖ ಪಾತ್ರ ವಹಿಸಬೇಕು. ಇದೊಂದು ಭಾರೀ ನಷ್ಟವಾಗಿದ್ದು, ಸಾಮಾಜಿಕ ವೆಚ್ಚವನ್ನು ಗಣಿಸಿದಲ್ಲಿ ಅದು ಎಷ್ಟು ಅಗಾಧವಾಗಿದೆಯೆಂಬುದು ತಿಳಿಯುತ್ತದೆಂದು ರಸ್ತೆ ಸುರಕ್ಷಾ ತಜ್ಞ ರೋಹಿತ್ ಬಲುಜಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರೂ ಇತ್ತೀಚಿನ ತನ್ನ ರೇಡಿಯೊ ಭಾಷಣಗಳಲ್ಲಿ (ಮನ್ ಕೀ ಬಾತ್) ಈ ಬಗ್ಗೆ ಕುಟುಂಬಗಳ ಹಿರಿಯರಿಗೆ ಮನವಿ ಮಾಡಿದ್ದರು.
ಸಚಿವಾಲಯದ ಸಾರಿಗೆ ಸಂಶೋಧನ ವಿಭಾಗ(ಟಿಆರ್‌ಡಬ್ಲು) ತಯಾರಿಸಿರುವ ವರದಿಯ ಪ್ರಕಾರ, 2013ರಲ್ಲಿ 4.86 ಲಕ್ಷಗಳಷ್ಟಿದ್ದ ರಸ್ತೆ ಅಪಘಾತ ಪ್ರಕರಣಗಳು 2014ರಲ್ಲಿ 4.89 ಲಕ್ಷಗಳಿಗೇರಿವೆ. ಸಾವಿನ ಸಂಖ್ಯೆಯೂ ಶೇ.15ರಷ್ಟು ಹೆಚ್ಚಾಗಿದೆ. ಉತ್ತರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮಬಂಗಾಳ, ಬಿಹಾರ, ಪಂಜಾಬ್‌ಹಾಗೂ ಹರ್ಯಾಣ-ಈ 13 ರಾಜ್ಯಗಳಲ್ಲಿ ಒಟ್ಟು ರಸ್ತೆ ಅಪಘಾತ ಸಾವುಗಳ ಶೇ.83.2ರಷ್ಟು ಸಂಭವಿಸಿವೆ.

ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ ಮತ್ತು ಕೇರಳ, ಆ ಬಳಿಕ ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶಗಳು ಹೇಗೆ ರಸ್ತೆ ಅಪಘಾತಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮಾರಣಾಂತಿಕವಾಗಿ ಗಾಯಗೊಂಡ ಸಂತ್ರಸ್ತರನ್ನು ದಾಖಲಿಸಿವೆಯೆಂಬುದನ್ನು ವರದಿ ಬಹಿರಂಗಪಡಿಸಿವೆ. ಅಂತಹ ಸಂತ್ರಸ್ತರಲ್ಲಿ ಹಲವರು ತಮ್ಮ ಉಳಿದ ಜೀವಿತಾವಧಿಯ ವರೆಗೆ ಸಂಪೂರ್ಣ ಅಂಗವಿಕಲರಾಗಿಯೇ ಉಳಿಯಬಹುದು. ಇದು, ಅವರ ಕುಟುಂಬಗಳ ಮೇಲೆ ಭಾರಿ ಹೊರೆಯಾಗುತ್ತದೆ. ರಸ್ತೆ ಅಪಘಾತಗಳ ಗಾಯಗಳು ಹಾಗೂ ಸಾವುಗಳು ಸಂತ್ರಸ್ತ ಕುಟುಂಬಗಳನ್ನು ಬಡತನದೆಡೆಗೆ ನೂಕುತ್ತವೆಂಬುದನ್ನು ಏಶ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ಅಧ್ಯಯನವೊಂದು ತಿಳಿಸಿದೆಯೆಂದು ಜಿನಿವಾ ಮೂಲದ ಅಂತಾರಾಷ್ಟ್ರೀಯ ರಸ್ತೆ ಒಕ್ಕೂಟದ ಮುಖ್ಯಸ್ಥ ಕೆ.ಕೆ. ಕಪಿಲ ಮಾಹಿತಿ ನೀಡಿದ್ದಾರೆ. ಸುಮಾರು ಶೇ.12ರಷ್ಟು ಸಾವುಗಳು ತಲಾ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯಿರುವ 50 ನಗರಗಳಲ್ಲಿ ಸಂಭವಿಸಿವೆ. ದಿಲ್ಲಿಯಲ್ಲಿ ಗರಿಷ್ಠ (1,671) ಸಾವುಗಳು ಸಂಭವಿಸಿದ್ದರೆ, ಅನಂತರದ ಸ್ಥಾನ 1,118 ಸಾವುಗಳೊಂದಿಗೆ ಚೆನ್ನೈಗೆ ಸಂದಿದೆಯೆಂದು ವರದಿ ತಿಳಿಸಿದೆ.
ಆದಾಗ್ಯೂ, ಲೂಧಿಯಾನ, ಧನಾಬಾದ್, ಅಮೃತಸರ, ವಾರಣಾಸಿ, ಕಾನ್ಪುರ ಹಾಗೂ ಪಾಟ್ನಾಗಳಂತಹ ನಗರಗಳಲ್ಲಿ ರಸ್ತೆ ಅಪಘಾತಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚಿದೆ. ಲೂಧಿಯಾನದಲ್ಲಿ 475 ಅಪಘಾತಗಳಲ್ಲಿ 318 ಮಂದಿ ಸತ್ತಿದ್ದರೆ, ಧನಾಬಾದ್‌ನಲ್ಲಿ ಅಂತಹ 106 ಪ್ರಕರಣಗಳಲ್ಲಿ 63 ಮಂದಿ ಅಸು ನೀಗಿದ್ದಾರೆ. ಪವಿತ್ರ ನಗರ ಅಮೃತಸರದಲ್ಲಿ 165 ಅಪಘಾತಗಳಲ್ಲಿ 94 ಸಾವುಗಳು ಸಂಭವಿಸಿವೆ.
ಗರಿಷ್ಠ ಸಾವುಗಳು ವರದಿಯಾಗುವ ರಾಜ್ಯಗಳಿಗೆ ತಾವು ಭೇಟಿ ನೀಡುತ್ತಿದ್ದೇವೆ. ಅವು ರಸ್ತೆಗಳನ್ನು ಸುರಕ್ಷಿತವಾಗಿಸುವತ್ತ ಹೆಚ್ಚು ಸೂಕ್ಷ್ಮವಾಗಿವೆ. ರಾಜ್ಯಗಳು ಒಟ್ಟಾರೆಯಾಗಿ ರಸ್ತೆ ಸುರಕ್ಷಾ ವಿಷಯಗಳಿಗಾಗಿ ಪ್ರಧಾನ ಸಂಸ್ಥೆಗಳನ್ನು ಸ್ಥಾಪಿಸುತ್ತಿವೆಯೆಂದು ಟಿಆರ್‌ಡಬ್ಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ವೇಳೆ, ಅಮೆರಿಕ ಹಾಗೂ ಇಂಗ್ಲೆಂಡ್‌ಗಳಂತಹ ಅಭಿವೃದ್ಧಿ ಹೊಂದಿರುವ ದೇಶಗಳ ಮಾದರಿಯಲ್ಲಿ, ರಸ್ತೆ ಅಪಘಾತ ಸಾವುಗಳಿಗೆ ಉತ್ತರದಾಯಿಯನ್ನಾಗಿ ಮಾಡಬಲ್ಲ ರಾಷ್ಟ್ರೀಯ ಪ್ರಾಧಿಕಾರವೊಂದನ್ನು ಸ್ಥಾಪಿಸುವ ಭಾರೀ ಅಗತ್ಯವಿದೆಯೆಂದು ಸಚಿವಾಲಯದ ಮೂಲಗಳು ಹೇಳಿವೆ.

Write A Comment