ಆಸ್ಸಾಂ: ಆಸ್ಸಾಂನ ಈ ಭೂಭಾಗದಲ್ಲಿ ಬೋಡೋ ಜನಾಂಗದವರು ಮುಸ್ಲಿಮರಿಲ್ಲದೇ ಹಾಗೂ ಮುಸ್ಲಿಮರು ಬೋಡೋಗಳಿಲ್ಲದೇ ಜೀವಿಸಲಾರರು. ಈ ಸತ್ಯವನ್ನು ಯಾರೂ ನಿರಾಕರಿಸಲಾರರು. ಎಂದು “ ಜಮೀಯ್ಯತ್ ಉಲಮಾಯೇ ಹಿಂದ್ ” ಇದರ ಅಧ್ಯಕ್ಷರಾದ ಮೌಲಾನಾ ಸೈಯ್ಯದ್ ಅರ್ಶದ್ ಮದನಿಯವರು ಆಸಾಂನ ಕೋಕ್ರಾಜಾರ್ ಎಂಬಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಇದೊಂದು ಧಾರ್ಮಿಕ ಕಾರ್ಯಕ್ರಮವಾಗಿರಲಿಲ್ಲ. ಬದಲಾಗಿ ಹಿಂಸಾಚಾರದಲ್ಲಿ ಜರ್ಜರಿತ ನಿರಾಶ್ರಿತ ಬೋಡೋ ಮುಸ್ಲಿಮರಿಗಾಗಿ ನಿರ್ಮಿಸಲಾಗಿದ್ದ “ಮೌಲಾನಾ ಅರ್ಶದ್ ಮದನಿ ಹೌಸಿಂಗ್ ಕಾಲೋನಿ” ಯ ಶುಭಾರಂಭವಾಗಿತ್ತು. ಈ ಸಭೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು. 19 ಜುಲಾಯಿ 2012 ರಲ್ಲಿ ನಡೆದ ಮುಸ್ಲಿಮರ ಸಾಮೂಹಿಕ ಹತ್ಯಾಕಾಂಡದಲ್ಲಿ ಬದುಕುಳಿದು, ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾದ ಕುಟುಂಬಗಳಿಗಾಗಿ ಈ ಕಾಲೋನಿಯನ್ನು ನಿರ್ಮಿಸಲಾಗಿತ್ತು. ಈ ಕುಟುಂಬಗಳು ಅಂದಿನಿಂದ ಇಂದಿನವರೇಗೆ ಸರಕಾರೀ ಟೆಂಟ್ ಗಳಲ್ಲಿ ಅತ್ಯಂತ ಹೀನಾಯವಾಗಿ ಜೀವನವನ್ನು ಸವೆಸುತ್ತಿದ್ದರು. ಅದೆಷ್ಟೋ ಕುಟುಂಬಗಳಿಗೆ ಆಕಾಶವೇ ಆಸರೆಯಾಗಿತ್ತು. ಇಂತಹ 159 ಕುಟುಂಬಗಳಿಗೆ ಮೌಲಾನಾರವರು ಮನೆಗಳ ಕೀಲಿಕೈಗಳನ್ನು ಹಸ್ತಾಂತರಿಸಿ ಮಾತನಾಡುತ್ತಿದ್ದರು. ಈ ಮನೆಗಳು ನಿಮ್ಮ ಅಗತ್ಯಕ್ಕೆ ತಕ್ಕಂತೆ ಸಾಕಷ್ಟು ವಿಶಾಲವಾಗಿಲ್ಲ. ಆದರೂ ಕಾಡುಗಳಿಲ್ಲಿದ್ದು ಸಂಕಷ್ಟಗಳಲ್ಲಿ ಇರುವುಕ್ಕಿಂತ ಇವು ಖಂಡಿತವಾಗಿ ನಿಮಗೆ ಆಸರೆಯಾಗಿವೆ ಎಂದರು.
ಇನ್ ಶಾ ಅಲ್ಲಾಹ್ ಬರುವ ಮಳೆಗಾಲಕ್ಕಿಂತ ಮುಂಚಿತವಾಗಿ 500 ಹೊಸ ಮನೆಗಳನ್ನು ನಿರ್ಮಿಸುವ ಇರಾದೆ ಇದೆ. ಇದರಿಂದ ಇನ್ನಷ್ಟು ನಿರಾಶ್ರಿತ ಮುಸ್ಲಿಂ ಕುಟುಂಬಗಳು ನೆಮ್ಮದಿಯ ನಿಟ್ಟುಸಿರನ್ನು ಬಿಡುವಂತಾಗಬಹುದು. ಸಂತೃಸ್ತ ಕುಟುಂಬಗಳಿಗೆ ಪಟ್ಟಣ ಪ್ರದೇಶಕ್ಕೆ ಹತ್ತಿರ ಮನೆಗಳ ನಿರ್ಮಾಣದ ಗುರಿ ಇದೆ. ಇದರಿಂದಾಗಿ ಅವರಿಗೆ ನೌಕರಿಯನ್ನು ಹುಡುಕಿ ಜೀವನವನ್ನು ಸಾಗಿಸುವುದು ಸುಲಭವಾಗಬಹುದು ಎಂದರು.
ಮುಸಲ್ಮಾನರನ್ನು ಹೇಗಾದರೂ ಗುರಿ ಮಾಡಿ ನೆಲೆ ಇಲ್ಲದಂತೆ ಮಾಡುವುದು ಕೋಮುವಾದಿ ಶಕ್ತಿಗಳ ಹುನ್ನಾರವಾಗಿದೆ. ಈ ಕುಟುಂಬಗಳನ್ನು ಇಲ್ಲಿಂದ ಹೊರ ಹಾಕಿದಲ್ಲಿ ತಮ್ಮ ಉದ್ದೇಶಗಳಲ್ಲಿ ಸಫಲರಾಗಲಿಕ್ಕೆ ಸಾಧ್ಯವಿದೆ ಎಂದು ಅವರು ಭಾವಿಸಿದ್ದಾರೆ. ಜಾತಿ ಧರ್ಮಗಳು ಬೇರೆ ಬೇರೆಯಾದರೂ ಪರಸ್ಪರ ಬೆಸೆದುಕೊಂಡು ಜೀವನವನ್ನು ಮಾಡಿದಲ್ಲಿ ಸಮಾಜದಲ್ಲಿ ಶಾಂತಿಯು ನೆಲೆಗೊಳ್ಳಲಿಕ್ಕೆ ಸಾಧ್ಯವಿದೆ. ಇದುವೇ ಸಮಾಜದ ಉನ್ನತಿಯಾಗಿದೆ. ಶಾಂತಿ, ಸಹನೆ, ಸಹಬಾಳ್ವೆ, ಸಹೋದರತೆ, ಪರಸ್ಪರರ ಕಷ್ಟಸುಖಗಳನ್ನು ಅರಿಯುವಂಹ ಪರಿಸರ ಇದ್ದಲ್ಲಿ ಅಂತಹ ಸಮಾಜವನ್ನು ಉನ್ನತ ಮಟ್ಟದ ಸಮಾಜ ಎಂದು ಕರೆಯಬಹುದು ಎಂದು ಹೇಳಿದರು.
ಸಮಾಜದ ಸ್ವಾಸ್ಥವನ್ನು ಹಾಗೂ ದೇಶದ ಐಕ್ಯತೆಯನ್ನು ಕೆಡಿಸಲು ಪ್ರಯತ್ನಿಸುತ್ತಿರುವುದು ಬೆರಳೆಣಿಕೆಯಷ್ಟು ಮಂದಿ ಮಾತ್ರವಾಗಿದ್ದಾರೆ. ಆದ್ದರಿಂದ ನಾವು ದೇಶದಾದ್ಯಂತ ನಮ್ಮ ಐಕ್ಯತೆಯನ್ನು ಕಾಪಾಡಿ ಇಂತಹ ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ವಿಶ್ವಜಿತ್ ದಾಯಿ ಯವರು ಮೌಲಾನಾ ಮದನಿಯವರನ್ನು ವಿಶೇಷವಾಗಿ ಸ್ವಾಗತಿಸಿ ಬರಮಾಡಿಕೊಂಡರು. ಜಮೀಯತುಲ್ ಉಲಮಾದವರ ವತಿಯಿಂದ ದೊರೆಯುವಂತಹ ಈ ಸೇವೆಗೆ ನಾನು ಆಭಾರಿಯಾಗಿದ್ದೇನೆ. ಈ ಪುಣ್ಯ ಕಾರ್ಯದಿಂದ ನಮಗೂ ತುಂಬಾ ಸ್ಪೂರ್ತಿ ದೊರೆತಿದೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು. ಹಿಂಸೆಯಿಂದ ತತ್ತರಿಸಿದಂತಹ ಈ ಕುಟುಂಬಗಳಿಗೆ ನಾವೂ ಆದಷ್ಟು ಮನೆಗಳನ್ನು ನಿರ್ಮಿಸಿ ಕೊಡಲು ಶ್ರಮಿಸುತ್ತೇವೆ ಎಂದು ಹೇಳಿದರು.
ವರದಿ : ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ.
