ಪ್ರೀತಿಗೆ ಸಾವೇ ಇಲ್ಲ ಎನ್ನುವ ಅಂದಿನ ಪರಿಭಾಷೆಗೆ ಈಗ ಬೇರೆಯೇ ಅರ್ಥ ಒದಗಿಬರುತ್ತಿದೆ. ಆಧುನಿಕ ಕಾಲಘಟ್ಟದಲ್ಲಿ ಪ್ರೀತಿ ಮತ್ತು ಸಂಬಂಧಗಳನ್ನು ನಂಬಿಕೆ, ವಿಶ್ವಾಸದ ಪ್ರತೀಕ ಎನ್ನುವ ಬದಲಿಗೆ ಸಿಮ್ ಕಾರ್ಡ್‍ಗೆ ಹೋಲಿಸಲಾಗುತ್ತದೆ. ಬೆಲೆ ಕಟ್ಟಲಾಗದ ಸಂಬಂಧಗಳನ್ನು ಆಗಾಗ ರೀಚಾರ್ಜ್ ಮಾಡಿಸಿಕೊಳ್ಳುವ ಅನಿವಾರ್ಯತೆ ಇಂದಿನ ಯುವ ಪೀಳಿಗೆಯದ್ದು. ಸಿಮ್ ಕಾರ್ಡ್ ಇರುವಂತೆ ತಿಂಗಳು, ವರ್ಷಗಳ ವ್ಯಾಲಿಡಿಟಿ ರೀತಿಯಲ್ಲಿ ಕಾಲ ನಿಗಧಿಪಡಿಸಿಕೊಂಡು ಪ್ರೀತಿಸುವವರೂ ಇದ್ದಾರೆ.
ಒಂದು ಸಿಮ್‍ಕಾರ್ಡ್ (ಪ್ರೀತಿ) ಹಿಡಿಸದಿದ್ದರೆ, ಬೋರಾದರೆ ಮತ್ತೊಂದು ನೆಟ್‍ವರ್ಕ್‍ನ ಸಿಮ್‍ಗೆ ಬದಲಾಯಿಸಿಕೊಳ್ಳುವಷ್ಟು ಫಾಸ್ಟ್ ಜೀವನದ ಮೊರೆ ಹೋಗುತ್ತಿದ್ದಾರೆ. ಟೆಕ್ನಾಲಜಿ ಮುಂದುವರೆದಿರುವಂತೆ ಹ್ಯಾಂಡ್‍ಸೆಟ್‍ನಲ್ಲಿ ಎರಡೆರಡು ಸಿಮ್‍ಗಳ ಅನುಕೂಲವನ್ನೇ ತಮ್ಮ ಜೀವನದ ಅನುಕೂಲತೆಗಳನ್ನಾಗಿ ಮಾರ್ಪಡಿಸಿಕೊಂಡು ಹ್ಯಾಂಡಲ್ ಮಾಡುವುದನ್ನೇ ಕರಗತ ಮಾಡಿಕೊಂಡಿದ್ದಾರೆ. ಇದು ಕೇವಲ ಹುಡುಗರಿಗೆ ಮಾತ್ರ ಅನ್ವಯಿಸುವುದಿಲ್ಲ. ಹುಡುಗಿಯರೂ ಇದರಿಂದ ಹೊರತಾಗಿಲ್ಲ. ಪುಟ್ಟದೊಂದು ಜಗಳ, ಕ್ಷುಲ್ಲಕ ಕಾರಣಕ್ಕೆ ಮನಸ್ಥಾಪ ಬಂದರೆ ಸಾಕು. ಸಂಬಂಧವೇ ಕಡಿದುಕೊಂಡು ವರ್ಷಗಟ್ಟಲೆ ಒಟ್ಟಾಗಿ ಓಡಾಡಿದ, ಒಟ್ಟಿಗೆ ಸಮಯ ದೂಡಿದ, ಒಂದೇ ತಟ್ಟೆಯಲ್ಲಿ ಹಂಚಿ ಊಟ ಮಾಡಿದ, ಗಂಟೆಗಟ್ಟಲೆ ಹರಟಿದ ಅದೆಷ್ಟೋ ವಿಚಾರಗಳಿಗೆ ಇತಿಶ್ರೀ ಹಾಡಿ ಮತ್ತೊಂದೆಡೆ ವಾಲಿಬಿಡುತ್ತಾರೆ. ಕಾಲೇಜಿಗೆ, ಸಿನಿಮಾಗೆ, ಹೊಟೇಲ್‍ಗೆ ಕೈ-ಕೈ ಹಿಡಿದು ಹೋಗಿದ್ದೇ ಸುಳ್ಳು ಅನ್ನುವಷ್ಟರ ಮಟ್ಟಿಗೆ ಹಿಂದೆ ಸರಿದು ಮತ್ತೊಬ್ಬರ
ಆಕರ್ಷಣೆಗೆ ಒಳಗಾಗಿಬಿಡುತ್ತಾರೆ. ಇಂತಹ ಮನಸ್ಥಿತಿಯ ಯುವ ಪೀಳಿಗೆಗೆ ಪ್ರೀತಿ, ಸ್ನೇಹ, ಸಂಬಂಧದ ಕಾಳಜಿಯೇ ಇಲ್ಲ. ಇನ್ನು ಕೆಲವರು ಬಹುಬೇಗ ಒಂದು ಸಂಬಂಧಕ್ಕೆ ಜೋತು ಬೀಳುತ್ತಾರೆ. ಅಷ್ಟೇ ಬೇಗ ಅದರಿಂದ ಬೇಸತ್ತು ಸಂಬಂಧ ಕಡಿದುಕೊಳ್ಳುತ್ತಾರೆ. ಪ್ರೀತಿ ವಿಚಾರದಲ್ಲೂ ಹೀಗೇ ಆಗುವುದು. ಮೊದಲ ನೋಟದ ಪ್ರೀತಿ ಎಂಬ ಕಾರಣಕ್ಕೆ ಯಾರನ್ನೋ ಇಷ್ಟಪಟ್ಟು ಅವರ ವ್ಯಕ್ತಿತ್ವ ತಿಳಿಯದೆಯೆ ತಮ್ಮ ಮನಸ್ಸಿನ ಭಾವನೆ ವ್ಯಕ್ತಪಡಿಸಿ ಅವರೊಂದಿಗೆ ಕಾಲ ದೂಡಿದಾಗ ಅವರ ವ್ಯಕ್ತಿತ್ವಕ್ಕೂ ತಮ್ಮ ಗುಣಕ್ಕೂ ಹೊಂದಾಣಿಕೆಯಾಗದೆ ಹೋದಷ್ಟೇ ವೇಗವಾಗಿ ಸಂಬಂಧದಿಂದ ಹೊರಬರುತ್ತಾರೆ. ವಿರುದ್ಧ ದಿಕ್ಕುಗಳು ಆಕರ್ಷಿಸುವುದು ವಿಜ್ಞಾನದ ಸಿದ್ಧಾಂತ. ಅದರಂತೆ ಅವರಲ್ಲಿನ ಯಾವುದೋ ಒಂದು ಗುಣ ಆಕರ್ಷಿಸಿದ ಮಾತ್ರಕ್ಕೆ ನಮಗೆ ಹೊಂದಿಕೊಳ್ಳುವ ಗುಣ ಎಂದು ನಿರ್ಧರಿಸಿಬಿಡುವುದು ಹಾಗೂ ಅವರನ್ನೇ ವಿಪರೀತವಾಗಿ ಹಚ್ಚಿಕೊಂಡು ಕಳೆದುಹೋಗಿರುತ್ತಾರೆ.
ಬರಬರುತ್ತಾ ಅವರನ್ನು ಅರ್ಥಮಾಡಿಕೊಳ್ಳುತ್ತಿದ್ದಂತೆ ಅಂಥದ್ದೊಂದು
ಸಂಬಂಧದಿಂದಲೇ ಹೊರಬರಬೇಕೆಂದು ಅನ್ನಿಸುತ್ತಿದ್ದಂತೆ ಸಣ್ಣ-ಪುಟ್ಟದ್ದನ್ನೇ ದೊಡ್ಡದು ಮಾಡಿಕೊಂಡು ಸಂಬಂಧ ಮುರಿದುಬಿಡುತ್ತಾರೆ. ಯಾವುದೇ ಸಂಬಂಧವಿರಲಿ ಉತ್ತಮವಾದದ್ದು ಎಂದಾಗ ಮಾತ್ರ ದೀರ್ಘಕಾಲ ಉಳಿಸಿಕೊಳ್ಳುವ ದಾರಿ ನಿಮ್ಮದಾಗಬೇಕು. ಹಿಂದೆ-ಮುಂದೆ ತಿಳಿಯದ ವ್ಯಕ್ತಿಯೊಂದಿಗೆ ಸಂಬಂಧ ಬೆಸೆದು ಆನಂತರ ನಿರಾಸೆಗೊಳ್ಳುವಬದಲಿಗೆ ವ್ಯಕ್ತಿಯ ಬಗ್ಗೆ ಅರಿತು ಮುನ್ನಡೆಯುವುದು ಸೂಕ್ತ. ಯಾವುದೇ ವ್ಯಕ್ತಿ ನಿಮ್ಮ ಜೀವನದಲ್ಲಿ ಪ್ರವೇಶಿಸಿದರೆ ಅವರ ಮೇಲೆ ಹಿಡಿತ ಸಾಧಿಸುವ ಮನೋಭಾವವು ಬಹಳಷ್ಟು ಹೆಚ್ಚುತ್ತಿದೆ. ಹಾಗಾಗಿಯೇ ಇಂತಹ ಸಮಸ್ಯೆಗಳು ಉದ್ಭವಿಸುತ್ತಿವೆ. ಇಂದಿನ ಭಾಷೆಯಲ್ಲೇ ಹೇಳಬೇಕೆಂದರೆ ಪ್ರೀತಿ ಎಂಬ ಸಿಮ್‍ಕಾರ್ಡ್ ಕೊಳ್ಳುವ ಮುನ್ನ ಲೈಫ್‍ಟೈಮ್ ವ್ಯಾಲಿಡಿಟಿ ಇರುವ ಪ್ಲ್ಯಾನ್‍ಗಳನ್ನೇ ಆಯ್ಕೆ ಮಾಡಿಕೊಂಡು ಜೀವನ ಸಾರ್ಥಕಪಡಿಸಿಕೊಳ್ಳಿ. ಇಲ್ಲದಿದ್ದರೆ ನಿರ್ಜೀವವಾಗಿರುವ ಸಿಮ್‍ಕಾರ್ಡ್‍ಗಳಿಗೂ ಭಾವನೆಗಳ ಆಗರವಾಗಿರುವ ಪ್ರೀತಿಗೂ ವ್ಯತ್ಯಾಸವೇ ಇರುವುದಿಲ್ಲ.