ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿರುದ್ದ ರಹಸ್ಯ ಯೋಜನೆಯೊಂದನ್ನು ರೂಪಿಸಲಾಗಿತ್ತು. ಆದರೆ, ಮುಂಬೈ ಪೊಲೀಸ್‍ನ ಕೆಲ ಭ್ರಷ್ಟ ಅಧಿಕಾರಿಗಳೇ ಇದಕ್ಕೆ ಕಾರಣ ಎಂದು ನಿವೃತ್ತ ಗೃಹ ಕಾರ್ಯದರ್ಶಿ, ಬಿಜೆಪಿ ಸಂಸದ ಮುಖಂಡ ಆರ್.ಕೆ. ಸಿಂಗ್ ಆಘಾತಕಾರಿ ಮಾಹಿತಿಯನ್ನು ಹೊರ ಹಾಕಿದ್ದಾರೆ.
ದಾವೂದ್ ಇಬ್ರಾಹಿಂನನ್ನು ಹಿಡಿಯಲು ವಿರೋಧಿ ಚೋಟಾ ರಾಜನ್ ಗ್ಯಾಂಗ್ ನಲ್ಲಿ ಕೆಲವರನ್ನು ಆಯ್ಕೆ ಮಾಡಿ ಗುಪ್ತ ಸ್ಥಳದಲ್ಲಿ ತರಬೇತಿ ನೀಡಲಾಗುತ್ತಿತ್ತು. ಆದರೆ, ಮುಂಬೈ ಪೊಲೀಸ್ ಇಲಾಖೆಯಲ್ಲಿ ದಾವೂದ್ ಕಾಸಿಗೆ ಮಾರಿಕೊಂಡಿದ್ದ ಕೆಲವು ಪೊಲೀಸರು ಬಂಧನ ವಾರೆಂಟ್ ಹಿಡಿದುಕೊಂಡು ತರಬೇತಿ ಸ್ಥಳಕ್ಕೆ ತೆರಳಿ ಎಲ್ಲರನ್ನು ವಶಕ್ಕೆ ತೆಗೆದುಕೊಳ್ಳುವ ಮೂಲಕ ಈ ಕಾರ್ಯಾಚರಣೆ ವಿಫಲಗೊಳಿಸಿದರು ಎಂಬ ರಹಸ್ಯ ಬಿಚ್ಚಿಟ್ಟಿದ್ದಾರೆ.
ದಾವೂದ್‍ನ ಕುರಿತ ದಾಖಲೆ ಪಾಕ್ ಗೆ ನೀಡುವುದರಿಂದ ಪ್ರಯೋಜನ ಇಲ್ಲ. ನಾವು ಎಷ್ಟೇ ದಾಖಲೆ ಕೊಟ್ಟರೂ ದಾವೂದ್ ತಮ್ಮ ದೇಶದಲ್ಲಿಲ್ಲ ಎಂದು ಪಾಕ್ ನಾಚಿಕೆಬಿಟ್ಟು ನಿರಾಕರಿಸಿ ಬಿಡುತ್ತದೆ. ಹಾಗಾಗಿ ಆತನನ್ನು ಸದೆಬಡಿಯಲು ರಹಸ್ಯ ಕಾರ್ಯಾಚರಣೆ ನಡೆಸುವುದೊಂದೇ ಎಂಬ ಅಭಿಪ್ರಾಯವನ್ನು ಸಿಂಗ್ ವ್ಯಕ್ತಪಡಿಸಿದ್ದಾರೆ.