ನವದೆಹಲಿ: ರೂಪಾಯಿ ಮೌಲ್ಯ ಕುಸಿಯುತ್ತಿರುವುದಕ್ಕೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ರಾಜೀನಾಮೆ ನೀಡಬೇಕೆಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ 66 ಕ್ಕೆ ಕುಸಿದಿದೆ. ಅರುಣ್ ಜೇಟ್ಲಿಗೆ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದೇ ಇದ್ದರೆ ರಾಜೀನಾಮೆ ನೀಡಿ, ಜವಾಬ್ದಾರಿಯನ್ನು ಬೇರೆಯವರಿಗೆ ನೀಡಲಿ ಎಂದು ಆಮ್ ಆದ್ಮಿ ಪಕ್ಷದ ವಕ್ತಾರ ಅಶುತೋಷ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅಶುತೋಷ್, ಆರ್ಥಿಕತೆಯ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದ್ದ ನರೇಂದ್ರ ಮೋದಿ ಅಧಿಕಾರದಲ್ಲಿ ದೇಶದ ಆರ್ಥಿಕತೆ ಕುಸಿದಿದೆ ಎಂದು ಆರೋಪಿಸಿದ್ದಾರೆ. ಲೋಕಸಭಾ ಚುನಾವಣೆ ವೇಳೆ ನರೇಂದ್ರ ಮೋದಿ ಅವರು ರೂಪಾಯಿ ಮೌಲ್ಯ ಕುಸಿತಕ್ಕೆ ಅಂದಿನ ಯುಪಿಎ ಸರ್ಕಾರದ್ದ ವಾಗ್ದಾಳಿ ನಡೆಸಿದ್ದರು. ಈಗ ಮೋದಿ ಅಧಿಕಾರಕ್ಕೆ ಬಂದು 15 ತಿಂಗಳು ಕಳೆದಿವೆ. ಆದರೂ ಬದಲಾವಣೆಯಾಗಿಲ್ಲ ಎಂದು ಅಶುತೋಷ್ ಆರೋಪಿಸಿದ್ದಾರೆ.
ಏಳೂವರೆ ವರ್ಷಗಳಲ್ಲಿ ಮುಂಬೈ ಷೇರು ಮಾರುಕಟ್ಟೆಯಲ್ಲಿ ಉಂಟಾದ ಮಹಾ ಕುಸಿತಕ್ಕೆ ಹೂಡಿಕೆದಾರರ ಸುಮಾರು 7 ಲಕ್ಷ ಕೋಟಿ ರೂಪಾಯಿ ನಷ್ಟವುಂಟಾಗಿರುವುದರಿಂದ ಅರುಣ್ ಜೇಟ್ಲಿ ರಾಜೀನಾಮೆಗೆ ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.