ಹೊಸದಿಲ್ಲಿ: ದರ ಏರಿಕೆಯಿಂದ ಈರುಳ್ಳಿ ಮತ್ತಷ್ಟು ಕಣ್ಣೀರು ತರಿಸಿದೆಯೇ? ಕೇಂದ್ರ ಆಹಾರ ಸಂಸ್ಕರಣೆ ಸಚಿವೆ ಹರ್ಸಿಮ್ರತ್ ಸಿಂಗ್ ಬಾದಲ್ ಇದಕ್ಕೊಂದು ಐಡಿಯಾ ಕೊಟ್ಟಿದ್ದಾರೆ.
ಈರುಳ್ಳಿ ಬೆಲೆ ಕಡಿಮೆ ಇದ್ದಾಗ ದೊಡ್ಡ ಪ್ರಮಾಣದಲ್ಲಿ ಕೊಂಡು ತಂದು ಅದನ್ನು ಪೇಸ್ಟ್ ಅಥವಾ ಪುಡಿ ಮಾಡಿ ಸಂಗ್ರಹಿಸಿಟ್ಟುಕೊಳ್ಳಿ. ಮಳೆಗಾಲದಲ್ಲಿ ಬಳಸಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
”ಇಳುವರಿ ಮತ್ತು ಹವಾಮಾನ ಬದಲಾವಣೆಗಳ ಆಧಾರದ ಮೇಲೆ ಈರುಳ್ಳಿ ದರ ಏರುಪೇರಾಗುವುದು ಸಹಜ. ಮುಂಗಾರು ಅವಧಿಯಲ್ಲಿ ಈರುಳ್ಳಿ ದರ ಏರುತ್ತದೆ. ಬೇಸಿಗೆ ಸಮಯದಲ್ಲಿ ಇಳಿಯುತ್ತದೆ. ಇದು ಪ್ರತಿವರ್ಷ ಸಂಭವಿಸುವ ವಿದ್ಯಮಾನ. ಇದಕ್ಕೆ ಯಾರನ್ನೂ ದೂರಿ ಪ್ರಯೋಜನವಿಲ್ಲ. ಈರುಳ್ಳಿ ಬೆಲೆ ಕಡಿಮೆ ಇರುವಾಗ ಮೂಟೆಗಟ್ಟಲೆ ಖರೀದಿಸಿ ಅದನ್ನು ಒಣಗಿಸಿ, ಪೇಸ್ಟ್ ಅಥವಾ ಪುಡಿ ರೂಪದಲ್ಲಿ ಮಾಡಿಟ್ಟುಕೊಂಡರೆ ಮುಂಗಾರಿನ ಅವಧಿಯಲ್ಲಿ ಬಳಸಿಕೊಳ್ಳಬಹುದು.
ಪ್ರತಿ ಕೆ.ಜಿ. ಈರುಳ್ಳಿಯ ಸಗಟು ಮಾರಾಟ ದರ 60 ರೂ. ಇದ್ದರೆ, ಚಿಲ್ಲರೆ ಮಾರುಕಟ್ಟೆಗಳಲ್ಲಿ 80 ರೂ.ವರೆಗೂ ಇದೆ. ಏಷ್ಯಾದ ಅತಿ ದೊಡ್ಡ ಈರುಳ್ಳಿ ಮಾರುಕಟ್ಟೆಯಾಗಿರುವ ಮಹಾರಾಷ್ಟ್ರದ ಲಸಲ್‌ಗಾಂವ್‌ನಲ್ಲಿ ಪ್ರತಿ ಕೆ.ಜಿ. ಈರುಳ್ಳಿಯ ಸಗಟು ದರ 57 ರೂ. ಮುಟ್ಟಿದೆ. ಈ ಹೊತ್ತಿನಲ್ಲಿ ಆಹಾರ ಸಂಸ್ಕರಣೆ ಸಚಿವೆಯ ಉಪಾಯ ಹೊರಬಿದ್ದಿದೆ.
ಪಂಜಾಬ್‌ನ ಲೂಧಿಯಾನಾ ಮೂಲದ ಕಟಾವೋತ್ತರ ನಿರ್ವಹಣೆ ಮತ್ತು ತಂತ್ರಜ್ಞಾನದ ಕೇಂದ್ರ ಸಂಸ್ಥೆ (ಸಿಐಪಿಎಚ್‌ಇಟಿ) ಕೂಡ ಈರುಳ್ಳಿಯನ್ನು ಒಣಗಿಸಿ ಅದು ದುಬಾರಿಯಾದ ಕಾಲದಲ್ಲಿ ಬಳಸುವಂತೆ ಸಲಹೆ ನೀಡಿದೆ. ಈ ನಿಟ್ಟಿನಲ್ಲಿ ರೈತರಿಗೆ ತರಬೇತಿ ನೀಡುವ ಕೆಲಸವನ್ನೂ ಸಿಐಪಿಎಚ್‌ಇಟಿ ಮಾಡುತ್ತಿದೆ.
ಸಣ್ಣ ಪಾರ್ಕ್‌ಗಳಿಗೆ 1 ಕೋಟಿ ರೂ. ”ಬೇಗ ಕೆಟ್ಟು ಅಥವಾ ಕೊಳೆತು ಹೋಗುವ ಪದಾರ್ಥಗಳ ಸಂಸ್ಕರಣೆ ದೇಶದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿದೆ. ಹಣ್ಣು, ಹೂವು, ತರಕಾರಿಗಳ ಸಂಸ್ಕರಣೆ ಶೇ.2ರಷ್ಟು ಮಾತ್ರ. ಇದನ್ನು ಹೆಚ್ಚು ಮಾಡಲು ಸಣ್ಣ ಫುಡ್ ಪಾರ್ಕ್‌ಗಳನ್ನು ನಿರ್ಮಿಸುವ ಯೋಜನೆ ಸರಕಾರದ ಮುಂದಿದೆ. ಸಣ್ಣ ಆಹಾರ ಪಾರ್ಕ್‌ಗಳಿಗೆ 50, 100 ಎಕರೆಗಟ್ಟಲೆ ಜಮೀನೇನೂ ಬೇಕಾಗುವುದಿಲ್ಲ. ಈ ಪಾರ್ಕ್‌ಗಳಿಗೆ ಸರಕಾರ ಒಂದು ಕೋಟಿ ರೂ. ಸಹಾಯಧನವನ್ನೂ ನೀಡಲಿದೆ,” ಎಂದೂ ಹರ್ಸಿಮ್ರತ್ ಹೇಳಿದರು.
ಕಳ್ಳರ ಕಣ್ಣು ಬಿತ್ತು! ಈರುಳ್ಳಿಗೆ ಈಗ ಚಿನ್ನದ ಬೆಲೆ ಬಂದಿದೆ. ಕಳ್ಳಕಾಕರು ಈಗ ಬಂಗಾರದಿಂದ ವಿಮುಖರಾಗಿ ಈರುಳ್ಳಿ ಬೆನ್ನತ್ತಿದ್ದಾರೆ. ಹೌದು, ಮಹಾರಾಷ್ಟ್ರದ ಅಂಗಡಿಯೊಂದರಿಂದ ಕಳ್ಳರು ಸುಮಾರು 50 ಸಾವಿರ ಮೌಲ್ಯದ ಈರುಳ್ಳಿಯನ್ನು ಕದ್ದಿದ್ದಾರೆ. ವಡಲಾದ ಪ್ರತೀಕ್ಷಾನಗರದ ವ್ಯಾಪಾರಿ ಅನಂತ್ ನಾಯಕ್ ಅವರ ಅಂಗಡಿಯಿಂದ 700 ಕೆ.ಜಿ. ಈರುಳ್ಳಿ ತುಂಬಿದ್ದ 14 ಮೂಟೆಗಳನ್ನು ಕಳ್ಳರು ಕದ್ದು ಸಾಗಿಸಿದ್ದಾರೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ವಡಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.