ನವದೆಹಲಿ: ಪಾಕಿಸ್ತಾನಕ್ಕೆ ದ್ವಿಪಕ್ಷೀಯ ಮಾತುಕತೆ ಬೇಕಾಗಿಲ್ಲ. ಅದಕ್ಕೆ ಕಾಶ್ಮೀರ ವಿಷಯ ಮಾತ್ರ ಬೇಕು ಎಂದು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಶನಿವಾರ ಹೇಳಿದ್ದಾರೆ.
ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆಗೆ ಪ್ರತ್ಯೇಕವಾದಿಗಳನ್ನು ಆಹ್ವಾನಿಸಬಾರದು ಎಂಬ ಭಾರತದ ಎಚ್ಚರಿಕೆಯನ್ನು ನಿರ್ಲಕ್ಷಿಸಿರುವ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸುಷ್ಮಾ, ಭಾರತ ಕಾಶ್ಮೀರ ಸೇರಿದಂತೆ ಎಲ್ಲಾ ವಿಷಯಗಳ ಕುರಿತು ಚರ್ಚೆಗೆ ಸಿದ್ಧವಿದೆ. ಆದರೆ ಮೊದಲು ಭಯೋತ್ಪಾದನೆ ಕುರಿತು ಮಾತುಕತೆ ನಡೆಯಬೇಕು. ಗಡಿಯಲ್ಲಿ ಭಯೋತ್ಪಾದನೆ ನಿಂತ ಮೇಲೆ ಕಾಶ್ಮೀರದ ಕುರಿತು ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ.
ಷರತ್ತುರಹಿತ ಮಾತುಕತೆಗೆ ತಾವು ಸಿದ್ಧ ಎಂದು ಹೇಳಿಕೆ ನೀಡಿರುವ ಪಾಕಿಸ್ತಾನಕ್ಕೆ ತಕ್ಕ ಪ್ರತಿಕ್ರಿಯೆ ನೀಡಿರುವ ಸುಷ್ಮಾ ಸ್ವರಾಜ್, ಭಾರತ, ಪಾಕ್ ನಡುವಿನ ಮಾತುಕತೆಗೆ ಮೂರನೇ ವ್ಯಕ್ತಿ(ಹುರಿಯತ್ ನಾಯಕರು)ಗಳಿಗೆ ಯಾವುದೇ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತದ ನಿಲುವಿನ ಬಗ್ಗೆ ಪಾಕ್ ಪ್ರತಿಕ್ರಿಯೆ ನೀಡದಿದ್ದರೆ ಎನ್ಎಸ್ಎ ಮಟ್ಟದ ಮಾತುಕತೆ ನಡೆಯುವುದು ಕಷ್ಟ ಎಂದಿರುವ ಸುಷ್ಮಾ, ಪಾಕಿಸ್ತಾನಕ್ಕೆ ಇವತ್ತು ರಾತ್ರಿವರೆಗೆ ಸಮಯವಿದೆ. ಭಾರತದ ಜೊತೆ ಮಾತುಕತೆ ನಡೆಸಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸಲಿ ಎಂದಿದ್ದಾರೆ.